ಪ್ರಾಚೀನಕಾಲದಿಂದಲೂ ಸೌಂದರ್ಯವರ್ಧಕ ಎಂದು ಪರಿಗಣಿಸಲ್ಪಟ್ಟಿರುವ ಹಾಗೂ ಔಷಧೀಯ ಮೌಲ್ಯದೊಂದಿಗೆ ಧಾರ್ಮಿಕ ಮೌಲ್ಯವನ್ನು ಹೊಂದಿರುವ ಸಸ್ಯ ಭ್ರಂಗರಾಜ ಅಥವಾ ಗರುಗದ ಸೊಪ್ಪಿನಗಿಡದ ಬಗ್ಗೆ ಹಾಗೂ ಅದರ ಉಪಯೋಗಗಳು ಮತ್ತು ಬಳಕೆಯ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಎಸ್ಟ್ರಸ್ಸಿ ಕುಟುಂಬಕ್ಕೆ ಸೇರಿದ ಭ್ರಂಗರಾಜದ ವೈಜ್ಞಾನಿಕ ಹೆಸರು ಎಕ್ಲಿಪ್ತಾ ಆಲ್ ಬಾ ಹಾಗೂ ಎಕ್ಲಿಪ್ತಾ ಪ್ರೋಸ್ಟ್ರಟಾ. ಈ ಸಸ್ಯದ ಮೂಲ ಭಾರತ ಹಾಗೂ ದಕ್ಷಿಣ ಅಮೇರಿಕ ಆಗಿದ್ದು. ಭಾರತ ನೇಪಾಳ, ಚೀನಾ ಥೈಲ್ಯಾಂಡ್ ಹಾಗೂ ಬ್ರೆಜಿಲ್ ದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಸಂಸ್ಕೃತದಲ್ಲಿ ಭ್ರಂಗರಾಜ ಕೇಶರಾಜ, ಕೇಶರಂಜನ ಮುಂತಾದ ಹೆಸರುಗಳಿದ್ದರೆ ಕನ್ನಡದಲ್ಲಿ ಭೃಂಗರಾಜ, ಗರುಗದ ಸೊಪ್ಪಿನಗಿಡ ಕಾಡು ಗರಗ ಕಾಡಿಗೆ ಗರುಗ ಹಾಗೂ ಆಂಗ್ಲ ಭಾಷೆಯಲ್ಲಿ ಫಾಲ್ಸ್ ಡೈಸಿ ಭೃಂಗರಾಜ್ ಟ್ರಿಲ್ಲಿಂಗ್ ಎಕ್ಲಿಪ್ತಾ ಎಂದು ಕರೆಯಲಾಗುತ್ತದೆ. ಕೆರೆ ಕಟ್ಟೆ ನಾಲೆಗಳು ಮೊದಲಾದ ತೇವಾಂಶವಿರುವ ಉಷ್ಣವಲಯದ ಬಯಲು ಪ್ರದೇಶಗಳಲ್ಲಿ ಕಂಡುಬರುವ ಭೃಂಗರಾಜ ಸುಮಾರು 30- 50 ಸೆಂಟಿ ಮೀಟರ್ ನಷ್ಟು ಎತ್ತರಕ್ಕೆ ಬೆಳೆಯುವ ಸಸ್ಯವಾಗಿದೆ. ಹಲವಾರು ಕವಲುಗಳಾಗಿ ಬೆಳೆಯುವ ಮೃದುವಾದ ನೇರಳೆ ಬಣ್ಣದ ಕಾಂಡದಿಂದ ಕೂಡಿದ್ದು ಈ ಕಾಂಡದ ಮೇಲೆ ಸೂಕ್ಷ್ಮವಾದ ಬಿಳಿಯ ರೋಮಗಳಿರುತ್ತವೆ. ಕೆಲವು ಕಡೆ ನೇರವಾಗಿ ಮತ್ತು ಕೆಲವು ಕಡೆ ನೆಲದ ಮೇಲೆ ಹಬ್ಬಿಕೊಂಡು ಬೆಳೆಯುತ್ತದೆ. 6 ಸೆ.ಮೀ ಉದ್ದ ಹಾಗೂ 2 ಸೇ. ಮೀ ಅಗಲವಾದ ಅಂಡಾಕಾರದ ನೀಲವಾದ ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದ್ದು. ಎಲೆಗಳ ಕಂಕುಳಲ್ಲಿ ಸೂರ್ಯಕಾಂತಿಯಂತೆ ಕಾಣುವ ವೃತ್ತಾಕಾರದ ಬಿಳಿಯ ಬಣ್ಣದ ಹೂವುಗಳಿರುತ್ತದೆ ಈ ಹೂವುಗಳು ಒಣಗಿದ ಬಳಿಕ ಇವುಗಳ ಒಳಗೆ ಕಪ್ಪು ಬಣ್ಣದ ಬೀಜಗಳು ಇರುತ್ತದೆ. ಈ ಸಸ್ಯದಲ್ಲಿ ಬಿಳಿ, ನೀಲಿ ಹಾಗೂ ಹಳದಿ ಬಣ್ಣದ ಹೂವಿನ ಭೃಂಗರಾಜ ಎಂಬ 3 ಪ್ರಬೇಧಗಳಿವೆ. ಹಲವಾರು ಪ್ರಾಚೀನ ಗ್ರಂಥಗಳಲ್ಲಿ ನಮೂದಿಸಲಾಗಿರುವ ಭೃಂಗರಾಜದ ಎಲೆಗಳಿಗೆ ಧಾರ್ಮಿಕ ಮೌಲ್ಯವಿದ್ದು ವಿಷ್ಣು, ಶಿವ ಮುಂತಾದ ದೇವತೆಗಳ ಪೂಜೆಯಲ್ಲಿ ಈ ಎಲೆಗಳು ಪವಿತ್ರ ಎಂದು ಭಾವಿಸಲಾಗಿದೆ. ಸಾಂಪ್ರದಾಯಿಕ, ಆಯುರ್ವೇದ, ಯುನಾನಿ ಹಾಗೂ ಸಿದ್ಧ ಚಿಕಿತ್ಸಾ ಪದ್ಧತಿಗಳಲ್ಲಿ ಭೃಂಗರಾಜದ ಹೂವು ಎಲೆ ಕಾಂಡ ಬೇರು ಸೇರಿದಂತೆ ಸಂಪೂರ್ಣ ಸಸ್ಯವನ್ನೆ ಬಳಸಲಾಗುತ್ತದೆ. ಹಲವು ರಾಸಾಯನಿಕ ಅಂಶಗಳನ್ನು ಹೊಂದಿರುವ ಈ ಸಸ್ಯ ಕಹಿಯಾಗಿದ್ದು ರುಚಿಯಿಂದ ಕೂಡಿದೆ.
ಕೂದಲ ಸಮಸ್ಯೆ ದೃಷ್ಟಿ ದೋಷ ಕರುಳಿನ ಸಮಸ್ಯೆ ರಕ್ತ ಶುದ್ಧೀಕರಣ ಹಲ್ಲಿನ ತೊಂದರೆ, ಅಸ್ತಮಾ ಮುಂತಾದ ಖಾಯಿಲೆಗಳಿಗೆ ಈ ಸಸ್ಯದಿಂದ ಚಿಕಿತ್ಸೆ ನೀಡಲಾಗುತ್ತದೆ. ಕೂದಲಿಗೆ ಬಣ್ಣ ನೀಡಿ ಸೋಂಪಾಗಿ ಬೆಳೆಯಲು ಸಹಾಯ ಮಾಡುವುದರಿಂದ ಇದಕ್ಕೆ ಭೃಂಗರಾಜ ಕೇಶರಾಜ ಎಂದು ಕರೆಯಲಾಗುತ್ತದೆ. ಇದರ ತೈಲವನ್ನು ಪ್ರತಿದಿನ ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಬಿಳಿ ಕೂದಲು ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಯಾವುದೇ ರೀತಿಯ ಗಾಯಗಳಿಗೆ ಇದರ ಎಲೆಗಳನ್ನು ಅರೆದು ಲೇಪಿಸಬಹುದು ವಿಶೇಷವಾಗಿ ಡಯಾಬಿಟಿಸ್ ಇದ್ದವರು ಗಾಯಗಳಾದಾಗ ಇದರ ಎಲೆಯ ರಸವನ್ನು ಹಾಕುವುದರಿಂದ ಗಾಯ ವಾಸಿಯಾಗುತ್ತದೆ. ಕೊಂಡಿಚೇಳು ಕಚ್ಚಿದಾಗ ಇದರ ರಸವನ್ನು ಹಚ್ಚುವುದರಿಂದ ವಿಷ ಇಳಿದು ನೋವು ಕಡಿಮೆಯಾಗುತ್ತದೆ. ಹಾವು ಕಚ್ಚಿದಾಗ ಇಡೀ ಸಸ್ಯದ ರಸವನ್ನು ತೆಗೆದು ಕೆಲ ಹನಿಗಳನ್ನು ಮೂಗಿಗೆ ಹಾಕಿಕೊಳ್ಳುವುದರಿಂದ ವಿಷದ ಪ್ರಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಕಿವಿ ನೋವಾದಾಗ ಈ ಗಿಡದ ಎಲೆಗಳ ರಸವನ್ನು ಕಿವಿಗೆ ಹಾಕುವುದರಿಂದ ಕಿವಿ ನೋವು ಉಪಶಮನವಾಗುತ್ತದೆ. ಅರ್ಧ ತಲೆನೋವು ಇದ್ದವರು ಈ ಎಲೆಯ ಹನಿಗಳನ್ನು ಕೆಲವು ದಿನಗಳವರೆಗೆ ಮೂಗಿಗೆ ಹಾಕುವುದರಿಂದ ತಲೆನೋವು ನಿವಾರಣೆಯಾಗುತ್ತದೆ. ಇದರ ಎಲೆಯ ಕಷಾಯವನ್ನು ಕುಡಿಯುವುದರಿಂದ ಶೀತ ಜ್ವರ ಕಡಿಮೆಯಾಗುತ್ತದೆ ಮತ್ತು 7ml ಇದರ ಎಲೆಯ ಕಷಾಯಕ್ಕೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ. ಹಿಮ್ಮಡಿ ಅಥವಾ ಕಾಲಿನ ಬೆರಳುಗಳ ಮಧ್ಯೆ ಬಿರುಕುಗಳು ಉಂಟಾಗಿದ್ದರೆ ಇದರ ಎಲೆಯ ರಸವನ್ನು ಹಚ್ಚುವುದರಿಂದ ಬಿರುಕು ವಾಸಿಯಾಗುತ್ತದೆ. ಯಾವುದೇ ಚರ್ಮದ ರೋಗಕ್ಕೆ ಇದರ ಬೇರಿನ ಚೂರ್ಣವನ್ನು ನೀರಿನಲ್ಲಿ ಕಲೆಸಿ ಪೇಸ್ಟನ್ನು ಹಚ್ಚಬಹುದು. ಕಾಮಾಲೆ ಖಾಯಿಲೆಗೆ ಇಡಿ ಸಸ್ಯವನ್ನು ಅರೆದು ಅದರ 10 ಗ್ರಾಂ ರಸವನ್ನು ಪ್ರತಿದಿನ 2-3 ಬಾರಿ ಸೇವಿಸುವುದರಿಂದ ಕಾಮಾಲೆ ನಿವಾರಣೆಯಾಗುತ್ತದೆ. ರಕ್ತದೊತ್ತಡ ಇರುವವರು ಈ ಸಸ್ಯವನ್ನು ಅರೆದು 2 ಚಮಚ ರಸಕ್ಕೆ ಸ್ವಲ್ಪ ನೀರು ಕಲ್ಲುಸಕ್ಕರೆಯ ಮಿಶ್ರಣವನ್ನು ಸೇವಿಸುವುದರಿಂದ ನಿವಾರಣೆಯಾಗುತ್ತದೆ. ಈ ಗಿಡದ ಎಲೆಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿಕೊಂಡು ಪ್ರತಿದಿನ ಅಲ್ಪಪ್ರಮಾಣದಲ್ಲಿ ಸಂಜೆ ಮತ್ತು ಮುಂಜಾನೆ ಹಾಲಿನೊಂದಿಗೆ ಸೇವಿಸುವುದರಿಂದ ಆಯಸ್ಸು ಹೆಚ್ಚುತ್ತದೆ ಎಂದು ಹೇಳಲಾಗಿದೆ. ಈ ಗಿಡವನ್ನು ಬಳಸುವಾಗ ಶುದ್ಧ ವಾತಾವರಣದಲ್ಲಿರುವ ಗಿಡವನ್ನು ಬಳಸಬೇಕು ಇಲ್ಲವಾದರೆ ಅದರ ಬೀಜವನ್ನು ಸಂಗ್ರಹಿಸಿ ಮನೆಯ ಮುಂದೆ ಕುಂಡಗಳಲ್ಲಿ ಬೆಳೆಸಬಹುದು. ಗರ್ಭಿಣಿಯರು ಬಳಸುವಾಗ ವೈದ್ಯರ ಸಲಹೆ ಪಡೆಯಬೇಕು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.