ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿಮೂರ್ತಿಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷವಾದ ಸ್ಥಾನವಿದೆ. ಬ್ರಹ್ಮನಿಗೆ ಸೃಷ್ಟಿಯ ರಚನಾಕಾರ, ವಿಷ್ಣುವಿಗೆ ಸೃಷ್ಟಿಯ ಸಂರಕ್ಷಕ ಮತ್ತು ಶಿವನನ್ನು ಸೃಷ್ಟಿಯ ವಿನಾಶಕ ಎಂದು ಕರೆಯುತ್ತಾರೆ. ಹಾಗಾದ್ರೆ ಈ ತ್ರಿಮೂರ್ತಿಗಳಲ್ಲಿ ಅತೀ ಶ್ರೇಷ್ಠರು ಯಾರು? ಎನ್ನುವುದರ ಕುರಿತಾಗಿ ಪುರಾಣಗಳಲ್ಲಿ 3 ವಿಧಗಳಲ್ಲಿ ಉಲ್ಲೇಖವಿದೆ. ಯಾವ ಪುರಾಣಗಳಲ್ಲಿ ಈ ವಿಷಯದ ಕುರಿತು ಉಲ್ಲೇಖವಿದೆ ಅವು ಯಾವುದು ಅನ್ನೋದನ್ನ ಇಲ್ಲಿ ನೋಡೋಣ.
ತ್ರಿಮೂರ್ತಿಗಳಲ್ಲಿ ಅತೀ ಶ್ರೇಷ್ಠರು ಯಾರು ಎನ್ನುವ ಪ್ರಶ್ನೆ ಯುಗ ಯುಗಗಳಿಂದಲೂ ಕಾಡುತ್ತಲೇ ಇದೆ. ಇದರ ಕುರಿತು ನಮ್ಮ ಪುರಾಣಗಳಲ್ಲಿ 3 ಪ್ರಕಾರದ ಉತ್ತರವಿದ್ದು ಮೊದಲಿಗೆ ಶಿವ ಪುರಾಣ. ಶಿವ ಪುರಾಣದ ಕಥೆಯ ಪ್ರಕಾರ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಇಬ್ಬರ ನಡುವೆ ವಿವಾದ ಉಂಟಾಗಿರತ್ತೆ ಇಬ್ಬರಲ್ಲಿ ಯಾರು ಶ್ರೇಷ್ಠರು ಎಂದು. ಇದರ ಕುರಿತಾಗಿ ಇಬ್ಬರ ನಡುವೆ ಸಾಕಷ್ಟು ವಿವಾದಗಳು ನಡೆದು ಯುದ್ಧ ಆರಂಭ ಆಗುವ ಹಂತಕ್ಕೆ ತಲುಪುತ್ತದೆ. ಆಗ ವಿಷ್ಣು ಮತ್ತು ಬ್ರಹ್ಮ ಇಬ್ಬರ ನಡುವೆ ಒಂದು ದೊಡ್ಡದಾದ ಅಗ್ನಿಯ ಸ್ಥಂಭ ಎದುರಾಗುತ್ತೆ. ಈ ಅಗ್ನಿ ಸ್ಥಂಭವನ್ನು ಯಾರು ಮೊದಲು ತಲುಪುತ್ತಾರೋ ಅವರೇ ಶ್ರೇಷ್ಠರು ಎಂದು ನಿರ್ಧರಿಸುತ್ತಾರೆ. ನಂತರ ಅಗ್ನಿ ಸ್ಥಂಭದ ಅಂತ್ಯವನ್ನು ಪಡೆಯಲು ಮಹಾ ವಿಷ್ಣು ಸ್ಥಂಭದ ಕೆಳಗಿನ ಭಾಗಕ್ಕೆ ಹೋಗುತ್ತಾರೆ ಹಾಗೆ ಬ್ರಹ್ಮ ದೇವ ಸ್ಥಂಭದ ಮೇಲಿನ ಭಾಗಕ್ಕೆ ಹೋಗುತ್ತಾರೆ. ಆದರೆ ಯಾರಿಗೂ ಆ ಅಗ್ನಿ ಸ್ಥಂಭದ ಅಂತ್ಯ ಸಿಗುವುದೇ ಇಲ್ಲ. ಆಗ ಮಹಾ ವಿಷ್ಣುವು ತನಗೆ ಅಗ್ನಿ ಸ್ಥಂಭದ ಕೊನೆ ಸಿಗದೇ ಸೋಲನ್ನು ಒಪ್ಪಿಕೊಂಡಾಗ ಬ್ರಹ್ಮ ದೇವ ತನಗೆ ಕೊನೆ ಸಿಕ್ಕಿತು ಎಂದು ಸುಳ್ಳು ಹೇಳುತ್ತಾರೆ. ಬ್ರಹ್ಮ ದೇವನ ಈ ಮಾತು ಕೇಳಿ ಆ ಅಗ್ನಿಯಿಂದ ಶಿವ ಪ್ರಕಟವಾಗಿ ಬ್ರಹ್ಮ ದೇವನ 5 ತಲೆಗಳಲ್ಲಿ ಯಾವ ತಲೆ ಅಸತ್ಯ ನುಡಿದಿತ್ತೋ ಆ ತಲೆಯನ್ನು ಕತ್ತರಿಸುತ್ತಾನೆ. ಹಾಗೆ ಸುಳ್ಳು ನುಡಿದಕ್ಕಾಗಿ ಸಮಸ್ತ ಜಗತ್ತಿನಲ್ಲಿ ಎಲ್ಲಿಯೂ ಕೂಡ ನಿನ್ನ ಪೂಜೆ ನಡೆಯದೇ ಇರಲಿ ಎಂದು ಶಿವ ಬ್ರಹ್ಮನಿಗೆ ಶಾಪ ಕೊಡುತ್ತಾನೆ. ಸತ್ಯ ನುಡಿದ ಮಹಾವಿಷ್ಣುವಿಗೆ ಸಮಸ್ತ ಲೋಕದಲ್ಲಿ ತನ್ನ ಸಮಾನವಾಗಿ ಪೂಜಿಸಲ್ಪಡುವಂತೆ ಶಿವ ವರ ನೀಡಿತ್ತಾನೆ. ಇದು ಶಿವ ಪುರಾಣದಲ್ಲಿ ಉಲ್ಲೇಖವಾದ ಕಥೆ. ಇದರ ಪ್ರಕಾರ ಶಿವನೇ ಶ್ರೇಷ್ಠ.
ಇನ್ನು ಎರಡನೆಯದಾಗಿ ಶ್ರೀಮದ್ಭಗವದ್ಗೀತೆ. ಇದರ ಅನುಸಾರವಾಗಿ ಒಮ್ಮೆ ಸಪ್ತ ಋಷಿಗಳ ಸಭೆಯಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಇವರಲ್ಲಿ ಯಾರು ಶ್ರೇಷ್ಠರು ಎಂದು ಚರ್ಚೆ ಆರಂಭ ಆಗಿರತ್ತೆ. ಆಗ ಸಪ್ತ ಋಷಿಗಳು ತ್ರಿದೇವರ ಪರೀಕ್ಷೆ ಮಾಡಲು ನಿರ್ಧರಿಸಿ ಈ ಕಾರ್ಯವನ್ನು ಭೃಗು ಮಹರ್ಷಿಗಳಿಗೆ ನೀಡಲಾಯಿತು. ಇದಕ್ಕಾಗಿ ಮೊದಲು ಭೃಗು ಮಹರ್ಷಿಗಳು ಬ್ರಹ್ಮ ದೇವನ ಬಳಿ ಹೋಗಿ ಬ್ರಹ್ಮ ದೇವನನ್ನು ನಿಂದಿಸುತ್ತ ಅಪಮಾನ ಮಾಡಿದರು. ಈ ಅಪಮಾನದಿಂದ ಬ್ರಹ್ಮ ದೇವ ಭೃಗು ಮಹರ್ಷಿಗಳ ಮೇಲೆ ಕೋಪಗೊಂಡಾಗ ಭೃಗು ಮಹರ್ಷಿಗಳು ಕ್ಷಮೆ ಕೇಳಿ ಅಲ್ಲಿಂದ ಹೊರಟು ಕೈಲಾಸದಲ್ಲಿ ಇರುವ ಶಿವನ ಬಳಿ ಬಂದರು. ಅಲ್ಲಿ ಕೂಡಾ ಶಿವನನ್ನು ಅಪಮಾನಿಸಿದರೂ ಶಿವ ಕೂಡಾ ಕ್ರೋಧಗೊಂಡು ಭೃಗು ಮಹರ್ಷಿಯನ್ನು ಭಸ್ಮ ಗೊಳಿಸಲು ಮುಂದಾದಾಗ ಪಾರ್ವತಿ ದೇವಿ ಮಧ್ಯೆ ಬಂದು ಶಿವನನ್ನು ಶಾಂತ ಗೊಳಿಸಿದಾಗ ಶಿವನ ಬಳಿ ಸಹ ಕ್ಷಮೆ ಕೇಳಿ ಭೃಗು ಮಹರ್ಷಿಗಳು ಕೈಲಾಸದಿಂದ ವಿಷ್ಣುವಿನ ಬಳಿ ಬರುತ್ತಾರೆ. ಅಲ್ಲಿ ವಿಷ್ಣು ಶೇಷ ಶಯನನಾಗಿರುತ್ತಾನೆ. ಇದನ್ನು ಕಂಡ ಋಷಿಗಳು ತಾನು ಬಂದರೂ ವಿಷ್ಣು ತನ್ನನ್ನು ಗಮನಿಸದೇ ಇರುವುದನ್ನು ನೋಡಿ ವಿಷ್ಣುವಿನ ಎದೆಗೆ ಕಾಲಿನಿಂದ ಒದೆಯುತ್ತಾರೆ. ಭೃಗು ಮಹರ್ಷಿಗಳ ಈ ಕೃತ್ಯದಿಂದ ವಿಷ್ಣುವಿಗೆ ಸ್ವಲ್ಪವೂ ಕೋಪ ಬರಲಿಲ್ಲ. ಬದಲಿಗೆ ವಿಷ್ಣು ಭೃಗು ಮಹರ್ಷಿಗಳ ಕಾಲು ಹಿಡಿದು , ನಿಮ್ಮ ಕಾಲಿಗೆ ನೋವಾಯಿತೆ ಎಂದು ವಿನಯದಿಂದ ಕೇಳಿದಾಗ ಭೃಗು ಮಹರ್ಷಿಗಳು ವಿಷ್ಣುವಿನ ಬಳಿ ಕ್ಷಮೆ ಯಾಚಿಸುತ್ತಾರೆ. ಈ ಘಟನೆಯ ಬಳಿಕ ಸಪ್ತ ಋಷಿಗಳು ಮಹಾ ವಿಷ್ಣುವೇ ಸರ್ವ ಶ್ರೇಷ್ಠ ಎಂದು ತೀರ್ಮಾನಿಸುತ್ತಾರೆ. ಇದು ಭಗವದ್ಗೀತೆಯಲ್ಲಿ ಉಲ್ಲೇಖವಾದ ಕಥೆ. ಶಿವ ಪುರಾಣ ಮತ್ತು ಭಗವದ್ಗೀತೆಯ ಕಥೆಯ ಪ್ರಕಾರ ಶಿವ ಮತ್ತು ವಿಷ್ಣು ಸಮಾನರು ಅಲ್ಲ ಎಂಬುದು ಕಂಡುಬರುತ್ತದೆ.
ಇನ್ನು ಕೊನೆಯ ಕಥೆಯ ಪ್ರಕಾರ, ಬ್ರಹ್ಮ, ವಿಷ್ಣು, ಮಹೇಶ್ವರ ಮೂವರು ಒಟ್ಟಿಗೆ ಕುಳಿತಿದ್ದಾಗ ಶಿವ ತಾನು ವಿನಾಶಕ ಹಾಗಾಗಿ ತಾನು ಬ್ರಹ್ಮ ವಿಷ್ಣುವನ್ನು ಕೂಡಾ ವಿನಾಶ ಮಾಡಬಲ್ಲೆನ ಎಂದು ಯೋಚಿಸಿದ. ಹೀಗೆ ಯೋಚಿಸುತ್ತಿದ್ದ ಶಿವನ ಮನದ ಮಾತನ್ನು ಬ್ರಹ್ಮ ಮತ್ತು ವಿಷ್ಣು ಅರಿಯುತ್ತಾರೆ. ಆಗ ಬ್ರಹ್ಮ ದೇವ ಶಿವನನ್ನು ಕುರಿತು , ಹೇ ಶಿವ ನೀವೇಕೆ ನಿಮ್ಮ ಶಕ್ತಿಯನ್ನು ನನ್ನ ಮೇಲೆ ಪ್ರಯೋಗ ಮಾಡಬಾರದು? ನಾನೂ ಕೂಡ ಉತ್ಸುಕನಾಗಿದ್ದೇನೆ ಎಂದು ಶಿವನಿಗೆ ಹಠದಿಂದ ಪ್ರಚೋದಿಸುತ್ತಾರೆ. ಇದರಿಂದ ಶಿವ ತನ್ನ ಶಕ್ತಿಯಿಂದ ಬ್ರಹ್ಮನನ್ನು ಭಸ್ಮ ಮಾಡುತ್ತಾನೆ. ಬ್ರಹ್ಮ ಭಸ್ಮಾವಾಗಿ ಪರಿವರ್ತನೆ ಆದ. ಇದನ್ನು ನೋಡಿ ಶಿವ ತನ್ನಿಂದ ಇದೇನಾಯಿತು ಎಂದು ಚಿಂತೆಗೆ ಒಳಗಾಗುತ್ತಾನೆ. ಇನ್ನು ಮುಂದೇ ಈ ವಿಶ್ವದ ಗತಿ ಏನು ಎಂದು ಚಿಂತಿಸುತ್ತಾ ಇರುವಾಗಲೇ ಆ ಭೂದಿಯಿಂದ ಬ್ರಹ್ಮ ಮತ್ತೆ ಪ್ರಕವಾಗುತ್ತಾನೆ. ಆಗ ಬ್ರಹ್ಮದೇವ , ಹೇ ಶಿವ ನೀನು ನನ್ನನ್ನು ಭಸ್ಮ ಗೊಳಿಸಿ ಭೂದಿಯನ್ನು ಸೃಷ್ಟಿಸಿದೆ ಎಲ್ಲಿ ಸೃಷ್ಟಿ ಇರುತ್ತದೋ ಅಲ್ಲಿ ನಾನಿರುತ್ತೇನೆ ನೀನು ನಿನ್ನ ಶಕ್ತಿಯಿಂದ ನನ್ನನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ನಂತರ ವಿಷ್ಣು ಹೇ ಶಿವ ಈಗ ನೀವು ನಿಮ್ಮ ಶಕ್ತಿಯನ್ನು ನನ್ನ ಮೇಲೆ ಪ್ರಯೋಗಿಸಿ ನಾನು ಸೃಷ್ಟಿಯ ರಕ್ಷಕನಾಗಿದ್ದು ನಾನೂ ಕೂಡ ನಿಮ್ಮ ಶಕ್ತಿಯನ್ನು ತಿಳಿಯಲು ಇಚ್ಛಿಸುತ್ತೇನೆ ಎಂದು ಶಿವನಿಗೆ ವಿಷ್ಣು ಕೂಡಾ ಪ್ರಚೋದಿಸಿದಾಗ ಶಿವ ತನ್ನ ಶಕ್ತಿಯನ್ನುಪಯೋಗಿಸಿ ವಿಷ್ಣುವನ್ನು ಭಸ್ಮಗೊಳಿಸುತ್ತಾನೆ. ಆಗ ಆ ಭಸ್ಮದ ರಾಶಿಯಿಂದ ಹೇ ಶಿವ ನಾನಿನ್ನೂ ಇಲ್ಲೇ ಇದ್ದೇನೆ ನಿಮ್ಮ ಶಕ್ತಿಯನ್ನೆಲ್ಲ ಒಟ್ಟಿಗೇ ಉಪಯೋಗಿಸಿ ಈ ಬೂದಿಯ ಕೊನೆಯ ಕಣದವರೆಗೂ ನಾಶ ಗೊಳಿಸಿ ಎಂಬ ಮಾತು ಕೇಳಿಸುತ್ತೆ. ಭಸ್ಮದಿಂದ ಕೇಳಿ ಬಂದ ವಿಷ್ಣುವಿನ ಮಾತು ಕೇಳಿ ಶಿವ ತನ್ನ ಶಕ್ತಿಯಿಂದ ಆ ಭಸ್ಮವನ್ನು ಸಹ ನಾಶ ಮಾಡುತ್ತಾನೆ ಆದರೆ ಆ ಭಸ್ಮದ ಕೊನೆಯ ಕಣವನ್ನು ನಾಶ ಮಾಡಲು ಅಸಾಧ್ಯವಾಯಿತು. ಅತ್ಯಂತ ಸಣ್ಣ ಗಾತ್ರದ ಅಣುವಿನಿಂದ ವಿಷ್ಣು ಮತ್ತೆ ಪ್ರಕಟ ಆಗುತ್ತಾನೆ. ಇದನ್ನು ನೋಡಿ ಶಿವ ತನ್ನಿಂದ ಈ ಇಬ್ಬರನ್ನೂ ವಿನಾಶ ಮಾಡಲು ಸಾಧ್ಯವಿಲ್ಲ ಹಾಗಾದರೆ ತಾನು ಸ್ವಯಂ ತನ್ನನ್ನೇ ನಾಶ ಮಾಡಿಕೊಂಡರೆ ಇವರಿಬ್ಬರೂ ನಾಶ ಆಗುತ್ತಾರೆ ಎಂದುಕೊಂಡು ವಿನಾಶವೇ ಇಲ್ಲ ಎಂದಮೇಲೆ ರಚನೆ ಹಾಗೂ ಅದರ ಸುರಕ್ಷತೆ ಹೇಗೆ ಸಾಧ್ಯ? ಎಂದು ಯೋಚಿಸಿ ತನ್ನನ್ನು ತಾನೇ ಭಸ್ಮ ಮಾಡಿಕೊಳ್ಳುತ್ತಾನೆ. ಶಿವನ ಜೊತೆಗೆ ಬ್ರಹ್ಮ ವಿಷ್ಣು ಸಹ ಭಸ್ಮ ಆಗುತ್ತಾರೆ. ಆ ಕ್ಷಣಕ್ಕೆ ಸಮಸ್ತ ಬ್ರಹ್ಮಾಂಡದಲ್ಲೂ ತ್ರಿಮೂರ್ತಿಗಳ ಭಸ್ಮ ಮಾತ್ರ ಉಳಿದಿರತ್ತೆ. ಮತ್ತೆ ಆ ಭಸ್ಮದಿಂದ ಮೊದಲು ಬ್ರಹ್ಮ , ನಂತರ ವಿಷ್ಣು ಹಾಗೂ ಕೊನೆಗೆ ಶಿವ ಮೂವರೂ ಮತ್ತೆ ಪ್ರಕಟ ಆಗುತ್ತಾರೆ. ಇದರಿಂದ ಶಿವನಿಗೆ ತ್ರಿಮೂರ್ತಿಗಳ ವಿನಾಶ ಅಸಂಭವ ಎನ್ನುವುದು ಅರ್ಥ ಆಗುತ್ತದೆ. ಈ ಘಟನೆಯ ನೆನಪಿಗಾಗಿ ಶಿವ ಆ ಭಸ್ಮವನ್ನ ತನ್ನ ದೇಹದ ಮೇಲೆ ಲೇಪಿಸಿಕೊಳ್ಳುತ್ತಾನೆ. ಇದರಿಂದ ಆ ಭಸ್ಮವನ್ನು ಶಿವ ಭಸ್ಮ ಎಂದು ಕರೆಯಲಾಯಿತು. ಇದರಿಂದ ನಾವು ತಿಳಿಯಬೇಕಿರುವುದು ಇಷ್ಟೇ… ತ್ರಿಮೂರ್ತಿಗಳಲ್ಲಿ ಶ್ರೇಷ್ಠ ಯಾರು ಎಂಬ ಪ್ರಶ್ನೆಯೇ ವ್ಯರ್ಥ. ಯಾಕೆಂದರೆ ಈ ಮೂವರು ಕೂಡಾ ಸಮಾನ ಬಲಿಷ್ಠರು ಮೂವರು ಒಬ್ಬರ ಮೇಲೆ ಒಬ್ಬರು ಅವಲಂಭಿತರಾಗಿದ್ದಾರೆ. ತ್ರಿಮೂರ್ತಿಗಳ ಅಂತ್ಯ ಅಸಂಭವ.