ಗೌತಮ ಬುದ್ಧ ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವನು. ಬೌದ್ಧ ಧರ್ಮದ ಸಂಸ್ಥಾಪಕ ಗೌತಮ್ ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.ಬ್ಬುದ್ಧನ ಮೊದಲ ಶಿಷ್ಯ ಆನಂದ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಒಮ್ಮೆ ಬುದ್ಧರ ಬಳಿ ಒಂದು ಪ್ರಶ್ನೆಯನ್ನು ಇಡುತ್ತಾರೆ. ಚಂಚಲ ಚಿತ್ತವಾದ ಮನಸ್ಸನ್ನು ನಿಯಂತ್ರಣದಲ್ಲಿ ಹಾಗೂ ಮನಸ್ಸನ್ನು ಗೆಲ್ಲುವ ಮಾರ್ಗ ಯಾವುದು ಎಂದು ಕೇಳುತ್ತಾರೆ. ಆಗ ಗೌತಮ ಬುದ್ಧರು ಆನಂದರಿಗೆ ಮನಸ್ಸನ್ನು ನಿಗ್ರಹಿಸುವ ಎಷ್ಟು ಕಷ್ಟವೋ ಅಷ್ಟೇ ಸುಲಭವಾಗಿಯೂ ಇರುತ್ತದೆ ಎಂದು ಹೇಳುತ್ತಾರೆ. ಮನಸ್ಸನ್ನು ಗೆಲ್ಲುವುದು ಎಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ಗೆಲ್ಲುವುದು ಆಗಿದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಅದೇ ರೀತಿ ಕಾಮ, ಕ್ರೋಧ ಇವುಗಳು ಹೆಚ್ಚಾದರೆ ನಿನ್ನನ್ನೇ ಕೊಲ್ಲುತ್ತದೆ ಎಂದು ಹೇಳುತ್ತಾರೆ.
ಯಾರು ಇವುಗಳನ್ನು ಹತೋಟಿಯಲ್ಲಿಟ್ಟುಕೊಂಡು ಇರುತ್ತಾರೋ ಅವರು ಮನಸ್ಸನ್ನು ಗೆದ್ದಂತೆ. ಅದು ಹೇಗೆ ಸಾಧ್ಯವೆಂದರೆ ಆತ್ಮ ಎನ್ನುವ ಮನಸ್ಸಿನಲ್ಲಿ ನಾವು ಹೇಳಿದಂತೆ ಮಾಡುವ ಅದ್ಭುತವಾದ ರಹಸ್ಯಮಯವಾದ ಶಕ್ತಿ ಅಡಗಿದೆ. ಕಾಮ ಕ್ರೋಧಗಳು ಹೆಚ್ಚಾದಾಗ ಶಾಂತವಾಗಿ ಕಣ್ಣನ್ನು ಮುಚ್ಚಿ ಮನಸ್ಸಿನಲ್ಲಿ ನನ್ನ ಈ ಕಾಮಕ್ರೋಧ ಗಳನ್ನು ಶಾಂತವಾಗಿಸು ಎಂದು ಹೇಳಿದರೆ ಕಂಡಿತವಾಗಿಯೂ ಮನಸ್ಸು ನಾವು ಹೇಳಿದಂತೆ ಮಾಡುತ್ತದೆ. ನಾನು ಹೇಳುವ ವಿಷಯದಲ್ಲಿ ನಿನಗೆ ನಂಬಿಕೆ ಇಲ್ಲದಿದ್ದರೆ ಇಂತಹ ಪರೀಕ್ಷೆ ಮಾಡಿ ನೋಡು ಎಂದು ಶಿಷ್ಯನಲ್ಲಿ ಹೇಳುತ್ತಾರೆ.
ರಾತ್ರಿ ಮಲಗುವ ಮುಂಚೆ ಕಣ್ಣನ್ನು ಮುಚ್ಚಿ ಬೆಳಗಿನ ಜಾವ ಬ್ರಹ್ಮ ಮುಹೂರ್ತದಲ್ಲಿ ನನ್ನನ್ನು ಎಬ್ಬಿಸು ಎಂದು ಮನಸ್ಸಿನಲ್ಲಿ ಹೇಳಿಕೊಂಡಾಗ ಖಂಡಿತವಾಗಿಯೂ ಅದು ಆಗುತ್ತದೆ. ಮನಸ್ಸು ಸಂಪೂರ್ಣವಾಗಿ ನಿನ್ನ ಮಾತನ್ನು ಕೇಳಬೇಕೆಂದರೆ ಧ್ಯಾನವನ್ನು ಮಾಡಬೇಕು ಎಂದು ಹೇಳುತ್ತಾರೆ. ಆಗ ಮನಸ್ಸು ಹತೋಟಿಗೆ ಬರುತ್ತದೆ. ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ. ನಂತರ ಆನಂದನಿಗೆ ಪಕ್ಕದಲ್ಲಿರುವ ಕೊಳದಿಂದ ನೀರನ್ನು ಕುಡಿಯಲು ತರಲು ಹೇಳುತ್ತಾರೆ.
ಕುಡಿಯಲು ನೀರನ್ನು ತರಲು ಹೋದ ಆನಂದನಿಗೆ ನೀರು ಕಲ್ಮಶವಾಗಿರುವುದು ಕಾಣುತ್ತದೆ.
ಅದನ್ನು ನೋಡಿ ನೀರನ್ನು ತರದೆ ಬುದ್ಧರ ಬಳಿಬಂದು ನೀರು ಕಲ್ಮಶವಾಗಿದೆ ಎಂದು ಹೇಳುತ್ತಾರೆ. ಬುದ್ಧ ಅದನ್ನು ಕೇಳಿ ಅರ್ಧಗಂಟೆ ಧ್ಯಾನಸ್ಥರಾಗಿ ಮತ್ತೆ ನೀರನ್ನು ತರಲು ಕಳಿಸುತ್ತಾರೆ. ಆಗ ನೀರು ಸ್ವಚ್ಛವಾಗಿರುವುದನ್ನು ಕಂಡು ನೀರನ್ನು ತಂದು ಬುದ್ಧರಿಗೆ ನೀಡುತ್ತಾನೆ. ಆಗ ಬುದ್ಧ ಭಗವಾನರು ಆನಂದನಿಗೆ ಕೊಳಕು ನೀರನ್ನು ಶಾಂತವಾಗಿ ಬಿಟ್ಟಿದ್ದಕ್ಕೆ ನೀರಿನಲ್ಲಿರುವ ಕಲ್ಮಶಗಳು ಕೆಳಗೆ ಹೋಗಿ ನೀರು ಶುದ್ಧವಾಗಿವೆ. ಅದೇ ರೀತಿ ಚಂಚಲವಾದಂತಹ ಈ ಮನಸ್ಸು ಕಲ್ಮಶವಾಗಿದ್ದರೆ ಮನಸ್ಸನ್ನು ಸ್ವಲ್ಪ ಸಮಯ ಶಾಂತವಾಗಿ ಬಿಟ್ಟರೆ ಕಲ್ಮಶಗಳೆಲ್ಲವೂ ದೂರವಾಗಿ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ನಾವು ಹೇಳಿದಂತೆ ಕೇಳುತ್ತದೆ ಎಂದು ಹೇಳುತ್ತಾರೆ.