ಸರಕಾರವು ಒಂದು ವರ್ಷದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತದೆ. ಪ್ರತಿಯೊಂದು ಇಲಾಖೆಯಿಂದ ಒಂದು ಇಲಾಖೆಯಿಂದಾದರೂ ಯೋಜನೆ ಜಾರಿಗೆ ಬರುತ್ತದೆ. ಹಾಗೆಯೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ವತಿಯಿಂದ ಆರೋಗ್ಯ ಕರ್ನಾಟಕ ಎಂಬ ಯೋಜನೆ ಜಾರಿಗೆ ತರಲಾಗಿದೆ. ಹೀಗೆ ಜಾರಿಗೆ ತಂದ ಆರೋಗ್ಯ ಕರ್ನಾಟಕ ಯೋಜನೆಯ ಬಗ್ಗೆ ಮಾಹಿತಿಯನ್ನು ನಾವು ತಿಳಿಯೋಣ.
ಕರ್ನಾಟಕದಲ್ಲಿ ವಾಸವಿರುವ ಎಲ್ಲಾ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿಗೆ ತಂದಿದೆ. ಈ ಮೊದಲು ಜಾರಿಗೊಳಿಸಿದ್ದ ಏಳು ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆ ಮಾಡಲಾಗಿದೆ. ವಾಜಪೇಯಿ ಆರೋಗ್ಯಶ್ರೀ ಯೋಜನೆ, ರಾಜೀವ್ ಅರೋಗ್ಯ ಭಾಗ್ಯ ಯೋಜನೆ, ಯಶಸ್ವಿನಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಇಂದಿರಾ ಸುರಕ್ಷಾ ಯೋಜನೆ ಇವು ಏಳು ಯೋಜನೆಗಳನ್ನು ವಿಲೀನಗೊಳಿಸಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಇದ್ದರೆ ಅಥವಾ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಈ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಸರಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡುತ್ತಾರೆ. ನಂತರ ಖಾಸಗಿ ಆಸ್ಪತ್ರೆಯಲ್ಲಿ ಆ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.
ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಗೆ ನೇರವಾಗಿ ಖಾಸಗಿ ಆಸ್ಪತ್ರೆಯನ್ನು ಭೇಟಿ ಮಾಡಬಹುದು. ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಮೂರು ವಿಧದಲ್ಲಿ ಚಿಕಿತ್ಸೆ ಪಡೆಯಬಹುದು. ಮೊದಲನೆಯದು ಸಾಮಾನ್ಯ ರೋಗಗಳು. ಜ್ವರ, ವಾಂತಿ, ಭೇದಿ, ಮೂಳೆ ಮುರಿತ, ಡೆಂಗ್ಯೂ ಹೀಗೆ ಸಣ್ಣದಾಗಿ ಶುರುವಾದ ಪ್ರಾಥಮಿಕ ಹಂತದ ಆರೋಗ್ಯ ಚಿಕಿತ್ಸೆ ಪಡೆಯಬಹುದು. ಇವುಗಳಿಗೆ ಸರಕಾರಿ ಆಸ್ಪತ್ರೆಯಲ್ಲೆ ಚಿಕಿತ್ಸೆ ದೊರೆಯುತ್ತದೆ. ಎರಡನೆಯದು ಕೆಲವು ಸಮಸ್ಯೆಗಳಿರುತ್ತವೆ ಅವುಗಳು ಸಂಕೀರ್ಣ ಮಾದರಿಯಲ್ಲಿ ಇರುತ್ತವೆ. ಇಂತಹ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗುತ್ತದೆ. ಆ ರೋಗಗಳಿಗೆ ಖಾಸಗಿ ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ನೀಡುತ್ತದೆ. ಮೂರನೆಯದಾಗಿ ಹೃದಯ ರೋಗ, ಕ್ಯಾನ್ಸರ್, ನರದ ತೊಂದರೆ ಕಿಡ್ನಿ ತೊಂದರೆ ಇವುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಬರೆದು ಕಳುಹಿಸುತ್ತಾರೆ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನೆರವು ಇದ್ದರೆ ಸರ್ಕಾರಿ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆಯಬಹುದು. ಇಲ್ಲವಾದರೆ ಯಾವ ಖಾಸಗಿ ಆಸ್ಪತ್ರೆಗಳಲ್ಲಿ ಆದರೂ ಆರೋಗ್ಯ ಕರ್ನಾಟಕ ಕಾರ್ಡ್ ಮೂಲಕ ಚಿಕಿತ್ಸೆ ಪಡೆಯಬಹುದು.
ಹಾಗಾದರೆ ಆರೋಗ್ಯ ಕರ್ನಾಟಕ ಚಿಕಿತ್ಸೆ ಕಾರ್ಡ್ ಪಡೆಯುವುದು ಹೇಗೆ ಎಂದರೆ 2018 ಮಾರ್ಚ್ ರಲ್ಲಿ ಬಿಡುಗಡೆಯಾದ ಈ ಯೋಜನೆ ಕೇವಲ ಏಳು ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತದೆ. ಆ ಆಸ್ಪತ್ರೆ ಹೆಸರುಗಳು ಹೀಗಿವೆ. ಕೆ.ಸಿ ಜನರಲ್ ಆಸ್ಪತ್ರೆ, ಜಯದೇವ ಆಸ್ಪತ್ರೆ, ಪಿ.ಎಂ.ಎಸ್.ಎಸ್.ವೈ ಆಸ್ಪತ್ರೆ, ವಿಕ್ಟೋರಿಯಾ ಕ್ಯಾಂಪಸ್ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ, ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಳ್ಳಾರಿ ಇಲ್ಲಿ ಈ ಕಾರ್ಡ್ ಗಳು ಸಿಗುತ್ತವೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಈ ಯೋಜನೆ ವಿಸ್ತಾರವಾಗುತ್ತದೆ. ಆವಾಗ ಇದನ್ನು ಹತ್ತಿರದ ಆಸ್ಪತ್ರೆಗಳಲ್ಲಿ ಪಡೆಯಬಹುದು. ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ ಮಾಡಿಸಲು ಹೋಗುವಾಗ ಬಿಪಿಎಲ್ ಕಾರ್ಡ್ ಹಾಗೂ ಆಧಾರ ಕಾರ್ಡ್ ಬೇಕಾಗುತ್ತದೆ. ಆಧಾರ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಪರಿಶೀಲಿಸಿ, ಬೆರಳಚ್ಚು ಪಡೆಯುತ್ತಾರೆ. ಆಧಾರ ಕಾರ್ಡ್ ಲಿಂಕ್ ಮಾಡಿ ಐದು ನಿಮಿಷಗಳಲ್ಲಿ ಆರೋಗ್ಯ ಕಾರ್ಡ್ ಕೊಡುತ್ತಾರೆ. ಬಿಪಿಎಲ್ ಇರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಇರುತ್ತದೆ. ಒಂದು ವೇಳೆ ಎಪಿಎಲ್ ಕಾರ್ಡ್ ಹೊಂದಿದ್ದರೆ ಮೂವತ್ತು ಪ್ರತಿಶತದಷ್ಟು ಭಾಗ ಸರಕಾರದಿಂದ ಸಹಾಯ ಸಿಗುತ್ತದೆ ಎಪ್ಪತ್ತು ಪ್ರತಿಶತ ನಮ್ಮ ವೆಚ್ಚ ನಾವೆ ಭರಿಸಬೇಕು.
ಇವುಗಳು ಆರೋಗ್ಯ ಕರ್ನಾಟಕ ಯೋಜನೆಯ ಫಲಗಳು ಹಾಗೂ ಆರೋಗ್ಯ ಕಾರ್ಡ್ ಮಾಡಿಸುವ ರೀತಿ. ಸರಕಾರ ಕೊಟ್ಟಿರುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡರೆ ನಮಗೆ ಸಹಾಯವಾಗುತ್ತದೆ. ಆದಷ್ಟು ಬೇಗ ಎಲ್ಲರೂ ಆರೋಗ್ಯ ಕಾರ್ಡ್ ಮಾಡಿಸಿಕೊಳ್ಳಿ.