ಅಡುಗೆಗೆ ಹಾಕಿದರೆ ವಿಶೇಷವಾದ ರುಚಿ ಕೊಡುವ ಒಂದು ಉತ್ತಮ ಮಸಾಲೆ ಪದಾರ್ಥ ಬೆಳ್ಳುಳ್ಳಿ. ಬೆಳ್ಳುಳ್ಳಿ ಕೆಲವು ರೋಗಗಳಿಗೆ ಮದ್ದು ಕೂಡ ಹೌದು. ಇಂತಹ ಬೆಳ್ಳುಳ್ಳಿ ಬೆಳೆಯನ್ನು ಬೆಳೆಯುವುದು ಹೇಗೆ, ಬೆಳ್ಳುಳ್ಳಿ ಬೆಳೆಯನ್ನು ಬೆಳೆಯಲು ಬೇಕಾಗುವ ಬೇಸಾಯ ಸಾಮಗ್ರಿಗಳು, ಯಾವ ತಳಿಯನ್ನು ಬೆಳೆದರೆ ಉತ್ತಮ, ಹಾಗೂ ಬೆಳ್ಳುಳ್ಳಿ ಬೆಳೆಯ ನಾಟಿ ಮಾಡುವ ವಿಧಾನಗಳನ್ನು ಹಾಗೂ ಕಳೆ ನಿವಾರಣೆ ಮಾಡುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.
ಕರ್ನಾಟಕ ರಾಜ್ಯದ ಪ್ರಮುಖ ಮಸಾಲೆ ಬೆಳೆಗಳಲ್ಲಿ ಬೆಳ್ಳುಳ್ಳಿ ಪ್ರಮುಖವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಸಾವಯವ ಪದಾರ್ಥಗಳಿಂದ ಕೂಡಿದ ಸಾಧಾರಣ ಕಪ್ಪು ಅಥವಾ ನೀರು ಬಸಿದು ಹೋಗುವ ಗೋಡು ಮಣ್ಣಿನಲ್ಲಿ ಬೆಳ್ಳುಳ್ಳಿ ಬೆಳೆಯನ್ನು ಚೆನ್ನಾಗಿ ಬೆಳೆಯಲಾಗುತ್ತದೆ. ಬೆಳ್ಳುಳ್ಳಿಯನ್ನು ಮುಂಗಾರು ಅಥವಾ ಹಿಂಗಾರು ಬೆಳೆಯಾಗಿ ಜೂನ್, ಜುಲೈ ಹಾಗೂ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ನಾಟಿ ಮಾಡಬಹುದು. ಫಾವ್ರಿ ಮತ್ತು ಗಡ್ಡೆ ಎನ್ನುವ ಎಂಬ ಎರಡು ತಳಿಗಳನ್ನು ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಏಕೆಂದರೆ ಇವೆರಡೂ ಹೆಚ್ಚು ಇಳುವರಿಯನ್ನು ಕೊಡುತ್ತವೆ. ಬೇಸಾಯ ಮಾಡಲು 370-500 ಗ್ರಾಂ ನಾಟಿ ಮಾಡುವ ಇಲುಕುಗಳನ್ನು ಬೀಜದ ರೂಪದಲ್ಲಿ ಪ್ರತಿ ಹೆಕ್ಟೇರ್ ಗೆ ಒದಗಿಸಬೇಕು. ಕೊಟ್ಟಿಗೆ ಗೊಬ್ಬರ ಹಾಗೂ ಕಾಂಪೋಸ್ಟ್ ಗೊಬ್ಬರವನ್ನು ಪ್ರತಿ ಹೆಕ್ಟೇರ್ ಗೆ 25 ಟನ್ ಹಾಕಬೇಕು.
ಬೆಳ್ಳುಳ್ಳಿ ಬೆಳೆಯನ್ನು ಬೆಳೆಯಲು ಸಾರಜನಕ, ರಂಜಕ, ಪೊಟ್ಯಾಶ್ ರಾಸಾಯನಿಕ ಗೊಬ್ಬರವನ್ನು ಬಳಸಬೇಕು. ಬೆಳ್ಳುಳ್ಳಿ ಬೆಳೆಯನ್ನು ನಾಟಿ ಮಾಡಲು ಎರಡು ರೀತಿಯ ಕ್ರಮಗಳಿವೆ. ಮೊದಲನೆಯದು ಕುಳಿ ಬಿತ್ತನೆ ಭೂಮಿ ಸಿದ್ಧವಾದ ನಂತರ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಣ ಮಾಡಬೇಕು ನೀರು ಹಾಯಿಸಲು ಅನುಕೂಲವಾಗುವಂತೆ ಮಾಡಿಕೊಳ್ಳಬೇಕು, ರಾಸಾಯನಿಕ ಗೊಬ್ಬರವನ್ನು ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ಈ ರೀತಿ ತಯಾರಿಸಿದ ಮಡಿಗಳಲ್ಲಿ ಇಲುಕುಗಳ ತುದಿಯ ಮೇಲಕ್ಕೆ ಇರುವಂತೆ 15 ಸೆಂಟಿಮೀಟರ್ ಸಾಲುಗಳಲ್ಲಿ 7.5 ಸೆಂಟಿಮೀಟರ್ ನಂತೆ ಬಿತ್ತಿ ಒಂದರಂತೆ ನಾಟಿ ಮಾಡಬೇಕು. ನಂತರ ನೀರು ಹಾಯಿಸಬೇಕು.
ಎರಡನೆಯ ಪದ್ಧತಿ ದೋಣಿ ಬಿತ್ತನೆ ಭೂಮಿ ಸಿದ್ಧವಾದ ನಂತರ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ಮಡಿಗಳಲ್ಲಿ 15 ಸೆಂಟಿಮೀಟರ್ ಅಂತರದಲ್ಲಿ ದೋಣಿ ಸಾಲು ಮಾಡಬೇಕು. ನಂತರ 7.5 ಸೆಂಟಿಮೀಟರ್ ಅಂತರದಲ್ಲಿ ಬೆಳೆ ಬಿತ್ತಿ ಮಣ್ಣಿನಿಂದ ಮುಚ್ಚಬೇಕು ನಾಟಿ ಮಾಡಿದ ನಂತರ ನೀರು ಹಾಯಿಸಬೇಕು. ಮಣ್ಣು ಮತ್ತು ಹವಾಗುಣವನ್ನು ಆಧರಿಸಿ 8-10 ದಿನಗಳಿಗೊಮ್ಮೆ ನೀರು ಹಾಯಿಸಬೇಕು ಮತ್ತು ನಿಗದಿತವಾಗಿ ಕಳೆಗಳನ್ನು ಹತೋಟಿ ಮಾಡಬೇಕು ಹಾಗೂ ಅಂತರ ಬೆಳೆಯಾಗಿ ಮೆಕ್ಕೆ ಜೋಳವನ್ನು ನಡು ಸಾಲಿನಲ್ಲಿ ಬೆಳೆಯಬೇಕು. ಬೀಜದಿಂದ ಹರಡುವ ಕಳೆಗಳನ್ನು ನಿಯಂತ್ರಿಸಲು ಬೆಳ್ಳುಳ್ಳಿ ಬಿತ್ತಿದ ದಿವಸ ಅಥವಾ ಮಾರನೇ ದಿನ ಪ್ರತಿ ಹೆಕ್ಟೇರಿಗೆ 2 ಲೀಟರ್ ನಂತೆ ಬ್ಯೂಟಾಕೋರ್ 50 ED ಇರುವ 1000 ಲೀ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು ಆಗ ಉತ್ತಮ ಫಲಿತಾಂಶ ದೊರೆಯುತ್ತದೆ. ಗಡ್ಡೆ ಕೊಳೆತ ರೋಗ ಬರುವ ಸಂಭವ ಇದೆ ರೋಗದ ಹತೋಟಿಗೆ ಔಷಧಿಗಳು ಸಿಗುತ್ತದೆ ಅವುಗಳನ್ನು ಸಿಂಪಡಿಸಬೇಕು. ತುಕ್ಕು ರೋಗ ಎನ್ನುವ ರೋಗ ಬರುವ ಸಂಭವ ಇರುತ್ತದೆ ಈ ರೋಗಕ್ಕೆ ಮದ್ದು ಸಿಗುತ್ತದೆ ಸಿಂಪಡಣೆ ಮಾಡಬೇಕು. ಬೆಳ್ಳುಳ್ಳಿ ಬೆಳೆಗೆ ಬೆಳ್ಳುಳ್ಳಿ ಮೋಸೈಕ್ ವೈರಸ್ ಎಂಬ ವೈರಸ್ ತಗಲುತ್ತದೆ. ಈ ವೈರಸ್ ಅನ್ನು ಹಾಗೆ ಬಿಟ್ಟರೆ ಉಳಿದ ಸಸಿಗಳಿಗೂ ಹರಡುತ್ತದೆ. ಬೆಳ್ಳುಳ್ಳಿ ಬೆಳೆಯ ಎಲೆಗಳು ಹಳದಿ ಹಾಗೂ ಕಂದು ಬಣ್ಣಕ್ಕೆ ತಿರುಗಿದಾಗ ಕೋಯ್ಲನ್ನು ಮಾಡಬೇಕು ಪ್ರತಿ ಗದ್ದೆಗೆ 8-10 ಟನ್ ಬೆಳ್ಳುಳ್ಳಿ ಗಡ್ಡೆಗಳನ್ನು ನಿರೀಕ್ಷಿಸಬಹುದು.