ಹೊಸದಾಗಿ ಮದುವೆಯಾದ ವಧು ವರರು ಮಧುಚಂದ್ರನ ಕನಸ್ಸು ಕಾಣುವುದು ಸಹಜ. ಮದುವೆ ಆದ ತಕ್ಷಣ ಯಾವ ದೇಶಕ್ಕೆ ಹೋಗಿ ಹನಿಮೂನ್ ಮಾಡಿಕೊಳ್ಳೋಣ ಎಂದು ಯೋಚಿಸುತ್ತಿರುತ್ತಾರೆ. ಆದರೆ ಇಲ್ಲೊಂದು ನವ ಜೋಡಿ ಮದುವೆ ಮುಗಿಸಿ ಬಿಂದಾಸಾಗಿ ಹನಿಮೂನ್ಗೆ ಹೋಗೋದು ಬಿಟ್ಟು ಪೊರಕೆ, ಚೀಲ ಹಿಡಿದು ಬೀಚ್ಗಳಲ್ಲಿ ಕಸ ಹೆಕ್ಕುತ್ತಾ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
800 ಕೆಜಿ ಕಸ ತೆಗೆದು ಸಾಹಸ ಮಾಡಿದ ಈ ಜೋಡಿಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ದೊರಕಿದೆ. ಹೊಸದಾಗಿ ವಿವಾಹವಾದ ಜೋಡಿ ಹನಿಮೂನ್‍ಗೆ ವಿದೇಶಕ್ಕೆ ಅಥವಾ ತಮಗಿಷ್ಟವಾದ ಸ್ಥಳಕ್ಕೆ ಹೋಗಲು ಇಷ್ಟಪಡುತ್ತಾರೆ. ಆದರೆ ಉಡುಪಿಯಲ್ಲಿ ಈ ನವದಂಪತಿ ಬೀಚ್ ಸ್ವಚ್ಛಗೊಳಿಸುವ ಮೂಲಕ ಗಮನಸೆಳೆದಿದ್ದಾರೆ.
ಉಡುಪಿಯ ಬೈಂದೂರು ಮೂಲದ ಅನುದೀಪ್ ಹೆಗಡೆ ಹಾಗೂ ಮಿನುಶಾ ಕಾಂಚನ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಬೀಚ್ ಸ್ವಚ್ಛಗೊಳಿಸುವ ಮೂಲಕ ಗಮನಸೆಳೆದಿದ್ದು, ಈ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಪೋಸ್ಟ್ ಸಖತ್ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೈಂದೂರಿನ ಅನುದೀಪ್ ಹೆಗಡೆ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ಮಾಡುತ್ತಿದ್ದು, ಪ್ರಕೃತಿ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿ ಹನಿಮೂನ್‍ಗೆ ಹೋಗುವ ಬದಲು ಬೀಚ್ ಸ್ವಚ್ಛಗೊಳಿಸಿದ್ದಾರೆ.
ವಿವಾಹದ ಬಳಿಕ ಜೋಡಿ ರಾಜ್ಯದಲ್ಲೇ ಕಾಲ ಕಳೆದಿದ್ದು, ಇದೇ ಸಂದರ್ಭದಲ್ಲಿ ಸೋಮೇಶ್ವರ ಬೀಚ್‍ಗೆ ತೆರಳಿದ್ದಾರೆ. ಈ ವೇಳೆ ಬೀಚ್ ಸಂಪೂರ್ಣವಾಗಿ ಕಸ ಹಾಕುವ ಕೇಂದ್ರವಾಗಿ ಮಾರ್ಪಟ್ಟಿದ್ದನ್ನು ಕಂಡು ಅನುದೀಪ್ ಹಾಗೂ ಮಿನುಶಾ ದಿಗ್ಭ್ರಮೆಗೊಂಡಿದ್ದಾರೆ. ಬೀಚ್ ಸಂಪೂರ್ಣವಾಗಿ ಕಸ, ಪ್ಲಾಸ್ಟಿಕ್‍ನಿಂದ ಕೂಡಿರುವುದನ್ನು ಕಂಡು ಬೇಸರಗೊಂಡಿದ್ದಾರೆ. ಬಳಿಕ ಜೋಡಿ ಹನಿಮೂನ್‍ಗೆ ತೆರಳುವುದನ್ನು ಬಿಟ್ಟು ಬೀಚ್ ಸ್ವಚ್ಛಗೊಳಿಸಲು ನಿರ್ಧರಿಸಿದೆ.
ಐಟಿ-ಬಿಟಿ ಕಂಪನಿಗಳು ಒಂತರಾ ಸೃಜನಶೀಲ ಕನಸುಗಳಿಗೆ ಕಾವು ಕೊಡುವ ಕ್ಷೇತ್ರಗಳು. ದಿನಪೂರ್ತಿ ಕೆಲಸದ ಒತ್ತಡದಲ್ಲಿರುವ ಇಲ್ಲಿನ ಸಿಬ್ಬಂದಿಗೆ ಏನಾದರೂ ಡಿಫರೆಂಟಾಗಿ, ಕ್ರಿಯೇಟಿವ್ ಕೆಲಸ ಮಾಡಬೇಕು ಎಂಬ ಹಂಬಲ ಇರುತ್ತೆ. ಅದೇ ರೀತಿ ಡಿಜಿಟಲ್ ಮಾರ್ಕೆಟಿಂಗ್ನಲ್ಲಿ ಕೆಲಸ ಮಾಡುತ್ತಿರುವ ಅನುದೀಪ್ ಹೆಗಡೆ, ಫಾರ್ಮಸಿಟಿಕಲ್ ಉದ್ಯೋಗಿಯಾಗಿರುವ ಮಿನುಷ ಕಾಂಚನ್ ಅವರನ್ನ ತಮ್ಮ ಬಾಳಸಂಗಾತಿಯಾಗಿ ಆಯ್ದುಕೊಂಡಿದ್ದಾರೆ. ಇಲ್ಲಿ ವಿಶೇಷ ಅಂದ್ರೆ ಇವರಿಬ್ಬರೂ ಮದುವೆ ಮುಗಿಸಿ ಸಮಾಜಕ್ಕೆ ಮಾದರಿಯಾಗಬಹುದಾದ ಏನಾದರೂ ಕೆಲಸ ಮಾಡೋಣವೇ ಎಂದು ಯೋಚಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಹನಿಮೂನ್ ಹೊರಡುವ ಮೊದಲು ತನ್ನ ಹುಟ್ಟೂರಾದ ಸೋಮೇಶ್ವರದ ಬೀಚಿನ ಸ್ವಲ್ಪ ಭಾಗವನ್ನಾದರೂ ಸ್ವಚ್ಛಗೊಳಿಸಬೇಕು ಎಂದು ಅನುದೀಪ್ ಪಣತೊಟ್ಟರು. ಹೀಗೆ ಈ ಇಬ್ಬರಿಂದ ಆರಂಭವಾದ ಈ ಕೆಲಸ ಈಗ ಹತ್ತಾರು ಜನರ ನೇತೃತ್ವದಲ್ಲಿ ಮುಂದುವರೆಯುತ್ತಿದೆ. ನವೆಂಬರ್ 18 ನೇ ತಾರೀಖಿನಂದು ಹಸೆಮಣೆ ಏರಿದ ಅನುದೀಪ್ ಹೆಗಡೆ ಮತ್ತು ಮಿನುಷ ಕಾಂಚನ ದಂಪತಿ ಸೋಮೇಶ್ವರದ ಬೀಚ್ನಲ್ಲಿ ಲೋಡ್ ಗಟ್ಟಲೆ ಕಸ ಹೊರ ತೆಗೆದಿದ್ದಾರೆ. ತಮ್ಮ ಹನಿಮೂನ್ ಪ್ಲಾನನ್ನು ಮುಂದೂಡಿದ ಈ ದಂಪತಿ 7 ದಿನದ ಅವಧಿಯಲ್ಲಿ ಬರೋಬ್ಬರಿ 700 ಕೆಜಿ ಕಸ ಮತ್ತು 500 ಕೆಜಿ ಪ್ಲಾಸ್ಟಿಕ್ ವಿಲೇವಾರಿ ಮಾಡಿದ್ದಾರೆ.
ಅನುದೀಪ್ ಸ್ವಚ್ಛಗೊಳಿಸುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಹಾಗೂ ಫೋಟೋಗಳಲ್ಲಿ ಸೆರೆ ಹಿಡಿದಿದ್ದು, ಇವುಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. 800 ಕೆ.ಜಿ.ಗೂ ಅಧಿಕ ಕಸವನ್ನು ಬೀಚ್‍ನಿಂದ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಜನರ ಕನಸು ಹಾಗೂ ಪೋಸ್ಟ್ ವೆಡ್ಡಿಂಗ್ ಚಾಲೆಂಜ್ ಆಗಿ ತೆಗೆದುಕೊಂಡು ಕೆಲಸ ಆರಂಭಿಸಿದ್ದು, ಅವಿರತವಾಗಿ ಶ್ರಮಿಸಿ ಬೈಂದೂರಿನ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ್ದಾರೆ. 10 ದಿನಗಳ ಬಳಿಕ ಇಂದು ಬೃಹತ್ ಆಂದೋಲನವಾಗಿ ಮಾರ್ಪಟ್ಟಿದೆ. ಸುಮಾರು 800 ಕೆ.ಜಿ. ಕಸವನ್ನು ಸ್ವಚ್ಛಗೊಳಿಸಲಾಗಿದೆ. ಇದೊಂದು ತುಂಬಾ ವಿನಮ್ರ ಅನುಭವ ಹಾಗೂ ಮಾನವೀಯತೆಯ ಬಗೆಗಿನ ನನ್ನ ನಂಬಿಕೆಯನ್ನು ಪುನಃಸ್ಥಾಪಿಸುವಂತಾಯಿತು. ನಾವೆಲ್ಲರೂ ಒಂದೇ ವಿಷಯವನ್ನು ಬಯಸುತ್ತೇವೆ. ಇದರಿಂದ ಯಾರಾದರೂ ಒಬ್ಬರು ಪ್ರೇರಣೆಗೊಂಡು ಈ ಕುರಿತು ಅರಿವು ಮೂಡಿಸಬೇಕಿದೆ. ಎಲ್ಲರೂ ಸೇರಿ ಮಾಡಿದರೆ ಹೆಚ್ಚು ವ್ಯತ್ಯಾಸ ಕಾಣಬಹುದಾಗಿದೆ ಎಂದು ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್‍ನಲ್ಲಿ ಅನುದೀಪ್ ಬರೆದುಕೊಂಡಿದ್ದಾರೆ.
ಅನುದೀಪ್ ಅವರ ಇನ್‍ಸ್ಟಾ ಪೋಸ್ಟ್ ಕಂಡು ನೆಟ್ಟಿಗರು ಫಿದಾ ಆಗಿದ್ದು, ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಸಖತ್ ವೈರಲ್ ಆಗಿದೆ. ಸೋಮೇಶ್ವರದಲ್ಲಿ ಹಸನ್ ಮತ್ತು ತಂಡ ಮಂಜುನಾಥ್ ಶೆಟ್ಟಿ ಮತ್ತು ಬಳಗ ಈ ದಂಪತಿ ಜೊತೆ ಬೀಚ್ ಸ್ವಚ್ಛತೆಗೆ ಸಾಥ್ ನೀಡಿವೆ. ಈ ಅಭಿಯಾನವನ್ನು ಮಲ್ಪೆ, ಮರವಂತೆ, ಕಾಪು ಮತ್ತು ತಣ್ಣೀರುಬಾವಿ ಬೀಚ್ಗಳಲ್ಲಿ ಮುಂದುವರೆಸುವ ಇಚ್ಛೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ತಮ್ಮ ಮದುವೆಯ ಮಧುರ ಕ್ಷಣಗಳನ್ನು ಜೀವನದಲ್ಲಿ ಅವಿಸ್ಮರಣೀಯ ಘಳಿಗೆಯಾಗಿಸುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ ಈ ದಂಪತಿ ಎಲ್ಲರಿಗೂ ಒಂದು ಮಾದರಿ.