ಸಾಮಾನ್ಯವಾಗಿ ನಾವು ದುಬಾರಿ ಬೆಲೆಯ ವಾಹನ, ಮನೇ, ಒಡವೆ, ಸೀರೆ ಹೀಗೆ ಏನೇನೋ ಕೊಳ್ಳುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಪಾರಿವಾಳಕ್ಕೆ ಎಂದಾದರೂ ಕೋಟಿಗಟ್ಟಲೆ ಹಣ ಸುರಿದು ಕೊಂಡುಕೊಂಡಿದ್ದನ್ನು ನಾವು ಎಲ್ಲಿಯೂ ಕೇಳಿಲ್ಲ ನೋಡಿಯೂ ಇಲ್ಲ. ಆದರೆ ಈ ಘಟನೆ ಪಿಪಾ ಎಂಬಲ್ಲಿ ನಡೆದಿದೆ ಎಂದರೆ ನಿಜಕ್ಕೂ ನಂಬಲೇ ಬೇಕು. ಹಾಗಾದರೆ ಕೋಟಿಗಟ್ಟಲೆ ಬೆಲೆ ಬಾಳುವ ಈ ಪಾರಿವಾಳ ಇದರ ವಿಶೇಷತೆ ಏನು? ಯಾವ ಕಾರಣಕ್ಕೆ ಇದು ಅಷ್ಟೊಂದು ಬೆಲೆ ಬಾಳುತ್ತದೆ ಈ ಎಲ್ಲಾ ಮಾಹಿತಿಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಪಾರಿವಾಳ ಜಗತ್ತಿನಲ್ಲೇ ಅತೀ ದುಬಾರಿಯಾದ ಪಾರಿವಾಳ. ಈ ಒಂದು ಪಾರಿವಾಳವನ್ನು ಕೊಂಡುಕೊಳ್ಳುವ ಬೆಲೆಯಲ್ಲಿ ನಾವು ಬೆಂಗಳೂರೂ , ಮುಂಬೈ ಅಥವಾ ದೆಹಲಿಯಂತಹ ಮಹಾನಗರದಲ್ಲಿ ಒಂದೊಂದು ಕೋಟಿ ಬೆಲೆಯ ಒಂದು ಡಜನ್ ಫ್ಲಾಟ್ ಗಳನ್ನು ಖರೀದಿ ಮಾಡಬಹುದಾಗಿದೆ ಎಂದರೆ ಈ ಪಾರಿವಾಳದ ಬೆಲೆಯನ್ನು ಒಮ್ಮೆ ಊಹಿಸಿ ನೋಡಿ. ಒಂದು ಸಾಧಾರಣವಾದ ಪಾರಿವಾಳದ ಬೆಲೆ ಎಂದಾಗ ನಾವು ಲಕ್ಷ, ಕೋಟಿಗಳ ಲೆಕ್ಕದಲ್ಲಂತೂ ಊಹೆ ಮಾಡುವುದು ಸಾಧ್ಯವಿಲ್ಲ. ಆದರೆ ಈ ಪಾರಿವಾಳದ ಬೆಲೆಯನ್ನು ಕೇಳಿದರೆ ನೀವು ನಿಜವಾಗಲೂ ಅದನ್ನು ನಿಮ್ಮ ಮನಸ್ಸಿನಲ್ಲಿ ಊಹೆ ಕೂಡಾ ಮಾಡಿರುವುದಕ್ಕೆ ಸಾಧ್ಯವಿಲ್ಲ. ಈ ವಿಶಿಷ್ಟ ಪಾರಿವಾಳ ನಿಜವಾಗಿಯೂ ನಮ್ಮ ನಿಮ್ಮ ಮನೆಯ ಛಾವಣಿಯ ಮೇಲೆ ಬಂದು ಕೂರುವ ಸಾಮಾನ್ಯ ಪಾರಿವಾಳವಂತೂ ಅಲ್ಲ. ಈ ಪಾರಿವಾಳ ತನ್ನ ಪ್ರಭೇದದಲ್ಲಿ ಅತಿ ವೇಗವಾಗಿ ಹಾರುವ ಪಾರಿವಾಳ ಎನ್ನುವ ಹೆಗ್ಗಳಿಕೆ ಪಡೆದಿದ್ದು, ಕೆಲವು ದಿನಗಳ ಹಿಂದೆ ನಡೆದ ಹರಾಜಿನಲ್ಲಿ ಈ ಪಾರಿವಾಳ ವನ್ನು 14 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ.
14.14 ಕೋಟಿ ರೂಪಾಯಿಗಳಿಗೆ ಮಾರಾಟವಾದ ಈ ಪಾರಿವಾಳದ ಹೆಸರು ನ್ಯೂ ಕಿಮ್ ಎಂದಾಗಿದ್ದು ಇದು ಬೆಲ್ಜಿಯನ್ ಜಾತಿಗೆ ಸೇರಿದ ಈ ಪಾರಿವಾಳ. ಈ ಪಾರಿವಾಳವನ್ನು ಚೀನಾದ ಶ್ರೀಮಂತ ವ್ಯಕ್ತಿಯೊಬ್ಬನು ಪಿಪಾದ ಪಿಜನ್ ಸೆಂಟರ್ ನಲ್ಲಿ ನಡೆದ ಹರಾಜಿನಲ್ಲಿ ಪಾರಿವಾಳವನ್ನು ಖರೀದಿ ಮಾಡಿದ್ದೆನ್ನಲಾಗಿದೆ. ಈ ಪಾರಿವಾಳ ಖರೀದಿ ಮಾಡಲು ಇಬ್ಬರು ಚೀನಿಯರು ಹರಾಜಿನಲ್ಲಿ ದರ ಕೂಗಿದ್ದರಂತೆ. ಅಲ್ಲದೇ ಇವರಿಬ್ಬರೂ ಕೂಡಾ ತಮ್ಮ ಹೆಸರನ್ನು ಎಲ್ಲೂ ಕೂಡಾ ಬಯಲು ಮಾಡದೆ ಹರಾಜಿನಲ್ಲಿ ಕೂಡಾ ಇವರು ಸೂಪರ್ ಡೂಪರ್ ಮತ್ತು ಹಿಟ್ ಮ್ಯಾನ್ ಎನ್ನುವ ಹೆಸರಿನಲ್ಲೇ ಹರಾಜನ್ನು ಕೂಗಿದ್ದರು ಎಂಬ ಮಾಹಿತಿ ಇದೆ. ಹಿಟ್ ಮ್ಯಾನ್ ಮೊದಲ ಬೆಲೆಯನ್ನು ಕೂಗಿದ್ದ ಎನ್ನಲಾಗಿದೆ. ಆದರೆ ಕೊನೆಗೆ ಸೂಪರ್ ಡೂಪರ್ 1.9 ಮಿಲಿಯನ್ ಯುಎಸ್ ಡಾಲರ್ಸ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 14.14 ಕೋಟಿ ರೂಪಾಯಿಗಳನ್ನು ಹರಾಜಿನಲ್ಲಿ ಕೂಗಿ ನ್ಯೂ ಕಿಮ್ ಹೆಸರಿನ ಪಾರಿವಾಳವನ್ನು ಖರೀದಿ ಮಾಡಿದ್ದಾನೆ. ಕೆಲವರು ಈ ಹರಾಜಿನಲ್ಲಿ ಎರಡು ಹೆಸರಿನಿಂದ ಭಾಗವಹಿಸಿದ ಇಬ್ಬರೂ ವ್ಯಕ್ತಿ ಒಬ್ಬನೇ ಎಂದು ಹೇಳಿದ್ದಾರೆ.
ಇನ್ನು ಈ ಹರಾಜಿನಲ್ಲಿ ಪಾರಿವಾಳವನ್ನು ಸಾಕಿದ್ದ ವ್ಯಕ್ತಿಯ ಕುಟುಂಬ ಕೂಡಾ ಇತ್ತು ಎನ್ನಲಾಗಿದೆ. 76 ವರ್ಷದ ಗ್ಯಾಸ್ಟನ್ ವ್ಯಾನ್ ಡಿ ವುವರ್ ಮತ್ತು ಆತನ ಮಕ್ಕಳು ಈ ರೇಸಿಂಗ್ ಪಾರಿವಾಳಗಳನ್ನು ಸಾಕುತ್ತಾರೆ ಮತ್ತು ಅವುಗಳಿಗೆ ವೇಗವಾಗಿ ಹಾರುವ ತರಬೇತಿಯನ್ನು ನೀಡಿ ಮಾರಾಟ ಮಾಡುತ್ತಾರೆ. ಈ ಬಾರಿ ಅವರು ಮಾರಿದ ಪಾರಿವಾಳಗಳ ಸಂಖ್ಯೆ 445 ಹಾಗೂ ಗಳಿಸಿದ ಹಣ 52.15 ಕೋಟಿ ಎನ್ನಲಾಗಿದೆ. ನ್ಯೂ ಕಿಮ್ ನ ಪ್ರಬೇಧದ ಪಾರಿವಾಳಗಳು 15 ವರ್ಷಗಳ ಕಾಲ ಬದುಕ ಬಲ್ಲವು ಎನ್ನಲಾಗಿದೆ.
ಚೀನಾ ಮತ್ತು ಯೂರೋಪ್ ಗಳಲ್ಲಿ ಶ್ರೀಮಂತರು ಪಾರಿವಾಳಗಳ ರೇಸ್ ನಲ್ಲಿ ಕುದುರೆ ರೇಸಿನಂತೆ ಹಣ ಹಾಕಿ ಕೆಲವರು ಗಳಿಸಿದರೆ, ಕೆಲವರು ಹಣ ಹಾಳು ಕೂಡಾ ಮಾಡಿಕೊಳ್ಳುತ್ತಿದ್ದಾರೆ. ದ್ವಿತೀಯ ವಿಶ್ವ ಯುಧ್ಧದ ಕಾಲದಲ್ಲಿ ಬೆಲ್ಜಿಯಮ್ ನ ಬಳಿ ಸುಮಾರು 2.50 ಲಕ್ಷ ಪಾರಿವಾಳಗಳ ಸೇನೆಯು ಇತ್ತಂತೆ. ಇವು ಸಂದೇಶಗಳನ್ನು ಕಳುಹಿಸಲು ಬಳಸುತ್ತಿದ್ದುದ್ದು ಮಾತ್ರವಲ್ಲದೇ ಪಾರಿವಾಳಗಳ ಫೆಡರೇಷನ್ ಕೂಡಾ ಇತ್ತು ಎನ್ನಲಾಗಿದೆ. ಐವತ್ತು ವರ್ಷಗಳ ಹಿಂದಿನವರೆಗೂ ಕೂಡಾ ಫ್ರಾನ್ಸ್ ನಲ್ಲಿ ಪಾರಿವಾಳಗಳನ್ನು ವಾತಾವರಣದ ಬಗ್ಗೆ ತಿಳಿಯಲು ತರಬೇತಿ ನೀಡುತ್ತಿದ್ದರು ಎಂಬ ಮಾಹಿತಿ ಇದೆ.