ಕರ್ನಾಟಕದ ಲಾಂಛನ ಗಂಡಬೇರುಂಡ ಪಕ್ಷಿಯ ಇತಿಹಾಸ ಹಾಗೂ ಅದರ ಬಗ್ಗೆ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕ ಸರ್ಕಾರದ ಲಾಂಛನವಾದ ಎರಡು ತಲೆಯ ಹದ್ದಿನ ರೂಪದ ಗಂಡಬೇರುಂಡ ಪಕ್ಷಿ ನೋಡಲು ಬಲಿಷ್ಠವಾಗಿ, ವಿಚಿತ್ರವಾಗಿ ಕಾಣುತ್ತದೆ. ಕೆಲವರು ಈ ಪಕ್ಷಿಯನ್ನು ವಿಷ್ಣುವಿನ ಮತ್ತೊಂದು ರೂಪ ಎನ್ನುತ್ತಾರೆ. ಅಸುರ ರಾಜ ಹಿರಣ್ಯಕಶ್ಯಪುವನ್ನು ಕೊಂದ ನಂತರ ನರಸಿಂಹ ಅವತಾರಿ ಶ್ರೀ ವಿಷ್ಣುವಿನ ಕೋಪ ಕಡಿಮೆ ಆಗಲಿಲ್ಲ ಆಗ ಆತನ ಕೋಪವನ್ನು ಶಮನಗೊಳಿಸಲು ಶಿವ ಶರಬೇಶ್ವರನ ರೂಪ ತಾಳಿ ಬಂದನಂತೆ ಈ ಸಮಯದಲ್ಲಿ ಶರಭ ರೂಪಿ ಶಿವನನ್ನು ಎದುರಿಸಲು ವಿಷ್ಣು ಗಂಡಬೇರುಂಡ ರೂಪ ತಾಳಿದ ಎಂದು ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖವಿದೆ.

ಈ ಪಕ್ಷಿ ಎರಡು ತಲೆಗಳನ್ನು ಹೊಂದಿದೆ. ಕೆಳದಿಯ ಪ್ರಾಚೀನ ರಾಮೇಶ್ವರ ದೇವಾಲಯದ ಛಾವಣಿಯಲ್ಲಿ ಈ ಪಕ್ಷಿಯ ಶಿಲ್ಪವಿದೆ. ಬೇಲೂರಿನ ಚನ್ನಕೇಶವ ದೇವಾಲಯದಿಂದ ಹಿಡಿದು ದೇಶದ ಹಲವು ಪ್ರಾಚೀನ ಮಂದಿರಗಳಲ್ಲಿ ಈ ಪಕ್ಷಿಯ ಶಿಲ್ಪ ಅಲಂಕಾರಿಕ ಭಾಗವಾಗಿ ಬಳಸಲಾಗಿದೆ. ಈ ಪಕ್ಷಿಗೆ ಮೊದಲಬಾರಿಗೆ ಮಾನವ ರೂಪ ನೀಡಿದ್ದು ಚಾಲುಕ್ಯರು. ಅವರ ಕಾಲದಲ್ಲಿ ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯದಲ್ಲಿ ಕ್ರಿ.ಶ1047 ರ ಸುಮಾರಿಗೆ ಬ್ರಹತ್ ಮಾನವ ಆಕೃತಿಯ ಗಂಡಬೇರುಂಡವನ್ನು ಕೆತ್ತಲಾಯಿತು. ಇಲ್ಲಿನವರು ಇದನ್ನು ಗಂಡಬೇರುಂಡೇಶ್ವರ ಎಂದು ಕರೆಯುತ್ತಾರೆ. ಇವರ ನಂತರ ಹೊಯ್ಸಳರು ಕೂಡ ಗಂಡಬೇರುಂಡವನ್ನು ತಮ್ಮ ಶಿಲ್ಪಕಲೆಯಲ್ಲಿ ಬಳಸಿದ್ದಾರೆ.

ವಿಜಯನಗರ ಹಾಗೂ ಮೈಸೂರು ಒಡೆಯರು ಈ ಪಕ್ಷಿಯನ್ನು ತಮ್ಮ ನಾಣ್ಯಗಳಲ್ಲಿ ಮುದ್ರಿಸಲು ಪ್ರಾರಂಭಿಸಿದರು. ವಿಜಯನಗರದ ಅರಸ ಅಚ್ಯುತ ರಾಯ 1529-1542 ರವರಗೆ ವಿಜಯನಗರದ ಶಕ್ತಿ, ಸಾಮರ್ಥ್ಯದ ಸಂಕೇತವಾಗಿ ಗಂಡಬೇರುಂಡ ಚಿಹ್ನೆಯನ್ನು ಹೊಂದಿದ ಚಿನ್ನದ ನಾಣ್ಯಗಳನ್ನು ಮುದ್ರಿಸುತ್ತಾನೆ. ಮೈಸೂರು ಒಡೆಯರು ಗಂಡಬೇರುಂಡವನ್ನು ತಮ್ಮ ಲಾಂಛನದಲ್ಲಿ ಬಳಸುವ ಪರಂಪರೆ ಪ್ರಾರಂಭವಾಯಿತು. ಮೈಸೂರು ಅರಸನಾಗಿದ್ದ ಯದುರಾಯನು ಮೊದಲಬಾರಿಗೆ ಗಂಡಬೇರುಂಡವಿದ್ದ ಧ್ವಜವನ್ನು ತಮ್ಮ ವಿಜಯ ಯಾತ್ರೆಯಲ್ಲಿ ಬಳಸಿದರು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 1956 ರವರೆಗೆ ಗಂಡಬೇರುಂಡ ಮೈಸೂರು ರಾಜ್ಯದ ಲಾಂಛನವಾಗಿ ಬಳಕೆಯಾಯಿತು. 1971 ರಲ್ಲಿ ನಮ್ಮ ರಾಜ್ಯ ಕರ್ನಾಟಕ ಎಂದು ಹೆಸರು ಪಡೆದ ನಂತರವೂ ರಾಜ್ಯ ಲಾಂಛನದಲ್ಲಿ ಬದಲಾವಣೆಯಾಗಲಿಲ್ಲ ಇವತ್ತಿಗೂ ನಮ್ಮ ರಾಜ್ಯದ ಘನತೆಯ ಸಂಕೇತವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!