ಕರ್ನಾಟಕದ ಸಿಹಿ ತಿಂಡಿ ಮೈಸೂರು ಪಾಕ್ ಗೆ ಈ ಹೆಸರು ಹೇಗೆ, ಯಾರಿಂದ ಬಂತು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ ಮೈಸೂರು ಪಾಕ್ ಇದು ಮೊದಲು ಮೈಸೂರಿನಲ್ಲಿ ಕಂಡುಬಂದಿತು. ಇದನ್ನು ಹೇರಳ ಪ್ರಮಾಣದಲ್ಲಿ ತುಪ್ಪವನ್ನು ಬಳಸಿ ಮಾಡಲಾಗುತ್ತದೆ. ವಿಶಿಷ್ಟ ಬಗೆಯ ಮೈಸೂರ್ ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ ಅಂದರೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರಿಂದ. ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಜ ಕುಟುಂಬಕ್ಕೆ ಬೇಕಾದ ಆಹಾರವನ್ನು ಇವರೇ ತಯಾರಿಸುತ್ತಿದ್ದರು.
ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ನಿಪುಣನಾದ ಮಾದಪ್ಪನವರಿಗೆ ಹೊಸದಾಗಿ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು. ಮಹಾರಾಜರ ಮಾತನ್ನು ಪಾಲಿಸಲೇಬೇಕು ಹೀಗಾಗಿ ಹೊಸ ತಿಂಡಿ ತಯಾರಿಸುವುದರ ಬಗ್ಗೆ ಅವರು ಆಲೋಚಿಸತೊಡಗಿದರು. ಆಗ ಮಾದಪ್ಪ ತಮಗೆ ತೋಚಿದಂತೆ ತಿಂಡಿ ತಯಾರಿಸಿದರು. ಅವರು ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದು ಮಾಡಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರು ಖುಷಿಯಾಗಿ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಸಿಸಿದರು ಮತ್ತು ಮಹಾರಾಜರು ಹೊಸ ತಿಂಡಿಗೆ ಏನಾದರೂ ಹೆಸರಿಡಬೇಕೆಂದು ಆಲೋಚಿಸಿ ರುಚಿಕರವಾದ ಅಡುಗೆಗೆ ನಳಪಾಕ ಎನ್ನುತ್ತೇವೆ ಹಾಗೂ ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ಮೈಸೂರು ಪಾಕ ಎಂದು ಹೆಸರಿಟ್ಟರು. ಈ ಮಾಹಿತಿಯನ್ನು ಮೈಸೂರು ಪಾಕ ಪ್ರಿಯರಿಗೆ ತಿಳಿಸಿ.