ಕಾಳುಮೆಣಸಿನ ಇತಿಹಾಸ ಭಾರತಕ್ಕೆ ಹೇಗೆ ಬಂತು ಹಾಗೂ ಅದರ ಉಪಯೋಗ ಮತ್ತು ಬಳಕೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಭಾರತದ ದಕ್ಷಿಣ ಭಾಗದಲ್ಲಿ ಕಾಳು ಮೆಣಸನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದು ಭಾರತದಲ್ಲಷ್ಟೆ ಅಲ್ಲದೆ ವಿಶ್ವದಾದ್ಯಂತ ಅನಾದಿ ಕಾಲದಿಂದಲೂ ಅತೀ ಹೆಚ್ಚು ಬೇಡಿಕೆ ಹೊಂದಿದ್ದ ಸಾಂಭಾರು ಪದಾರ್ಥ. ಪುರಾತನ ರೋಮ್ ಸಾಮ್ರಾಜ್ಯದಲ್ಲಿ ಕಾಳುಮೆಣಸು ಹಣದ ಬದಲಾಗಿ ಬಳಕೆಯಲ್ಲಿತ್ತು ಎಂದು ಹೇಳುತ್ತಾರೆ. ವಿಶ್ವದಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ದೇಶ ವಿಯೆಟ್ನಾಂ. ಅಲ್ಲಿಗೂ ಕಾಳುಮೆಣಸಿನ ಕೃಷಿ ಭಾರತದಿಂದಲೆ ರಫ್ತಾಗುತಿತ್ತು. ಭಾರತದ ದಕ್ಷಿಣದಲ್ಲಿ ಆಳುತ್ತಿದ್ದ ಚೋಳ ಅರಸರು ಕಾಳುಮೆಣಸನ್ನು ವಿಯೆಟ್ನಾಂ ದೇಶಕ್ಕೆ ಕಳುಹಿಸುತ್ತಿದ್ದರು. ಅಷ್ಟೇ ಅಲ್ಲದೆ ಪಾಂಡ್ಯರ ಕಾಲಕ್ಕೆ ದಕ್ಷಿಣ ಭಾರತದ ಅರಸರು ಗ್ರೀಕ್ ಸಾಮ್ರಾಜ್ಯದವರೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು ಆಗ ಭಾರತದಿಂದ ಕಾಳುಮೆಣಸನ್ನು ರಪ್ತು ಮಾಡುತ್ತಿದ್ದರು. ಆಗ ಇದಕ್ಕೆ ಕಪ್ಪು ಬಂಗಾರ ಎಂಬ ಹೆಸರಿತ್ತು. ಕಾಳುಮೆಣಸು ಮತ್ತು ಇತರ ಸಾಂಭಾರು ಪದಾರ್ಥಗಳ ವಿದೇಶಿ ವ್ಯಾಪಾರಕ್ಕೆ ಅರಬ್ ವ್ಯಾಪಾರಿಗಳು ನಮ್ಮ ದೇಶಕ್ಕೆ ಅದರಲ್ಲೂ ಕೇರಳದ ಸಮುದ್ರ ತೀರಕ್ಕೆ ಕಾಲಿಟ್ಟರು. ಅಲ್ಲದೇ ಭಾರತಕ್ಕೆ ಇಸ್ಲಾಮರ ಪ್ರವೇಶವಾಗಲು ಕಾಳುಮೆಣಸು ಕಾರಣ. ನಮ್ಮ ಉತ್ತರ ಕನ್ನಡದ ಗೇರುಸೊಪ್ಪೆಯ ರಾಣಿ ಚೆನ್ನಬೈರಾದೇವಿ ಆವತ್ತಿಗೆ ಅತಿ ಹೆಚ್ಚು ಕಾಳುಮೆಣಸನ್ನು ಬೆಳೆಯುತ್ತಿದ್ದ ಭೂಪ್ರದೇಶವನ್ನು ಅಳುತ್ತಿದ್ದರು ಹೀಗಾಗಿ ಇವರಿಗೆ ಕಪ್ಪು ಚಿನ್ನದ ರಾಣಿ ಎಂದು ಕರೆಯಲಾಗುತ್ತಿತ್ತು.

ಕಾಳುಮೆಣಸಿನಲ್ಲಿ ಪೆಪ್ಪರಿನ್ ಅಂಶವಿದೆ ಇದು ಕ್ಯಾನ್ಸರ್ ಗುಣಪಡಿಸುವ ಶಕ್ತಿ ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶವಿದೆ. ಇದರಲ್ಲಿರುವ ರೋಗ ನಿರೋಧಕ ಗುಣ ದೇಹದಲ್ಲಿರುವ ರೋಗಕಾರಕ ಅಂಶಗಳನ್ನು ತೊಲಗಿಸಲು ಸಹಾಯಕವಾಗಿದೆ. ಸಾಮಾನ್ಯವಾಗಿ ಕಂಡುಬರುವ ಉದರ ಸಂಬಂಧಿ ಸಮಸ್ಯೆಗಳಿಗೆ ಕಾಳು ಮೆಣಸಿನಲ್ಲಿರುವ ಪೆಪ್ಪರಿನ್ ಅಂಶ ಔಷಧಿಯಾಗಿದೆ. ಪೆಪ್ಪರಿನ್ ಸೇವನೆಯಿಂದ ಹೈಡ್ರೋಕ್ಲೋರಿಕ್ ಆ್ಯಸಿಡ್ ಸ್ರಾವ ಹೆಚ್ಚಾಗಿ ಆಹಾರದಲ್ಲಿರುವ ಪ್ರೊಟೀನ್ ಗಳು ಶೀಘ್ರವಾಗಿ ಜೀರ್ಣಗೊಳ್ಳುವಂತೆ ಮಾಡಿ ಉದರ ಸಂಬಂಧಿ ಸಮಸ್ಯೆಗಳಿಂದ ದೂರ ಮಾಡುತ್ತದೆ ಹೀಗಾಗಿ ನಮ್ಮ ಆಹಾರದಲ್ಲಿ ಅಗತ್ಯ ಪ್ರಮಾಣದ ಕಾಳುಮೆಣಸು ಇರುವುದು ಉತ್ತಮ. ಇದು ಬ್ಯಾಕ್ಟೀರಿಯಾವನ್ನು ನಾಶ ಮಾಡುವ ಗುಣವನ್ನು ಹೊಂದಿದ್ದು ಶೀತ, ಕೆಮ್ಮನ್ನು ಗುಣಪಡಿಸುತ್ತದೆ.

ಒಂದು ಚಮಚ ತಾಜಾ ಕರಿಮೆಣಸಿನ ಪುಡಿಗೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಕೆಮ್ಮು ಶಮನವಾಗುತ್ತದೆ. ಶೀತ ಜ್ವರ, ಶ್ವಾಸನಾಳ ಸಂಬಂಧಿ ಅಲರ್ಜಿಗಳು ಉಂಟಾದಾಗ ಕರಿಮೆಣಸಿನ ಪುಡಿ ಹಾಗೂ ನೀಲಗಿರಿ ತೈಲವನ್ನು ಬಿಸಿ ನೀರಿಗೆ ಸೇರಿಸಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಉಸಿರಾಟ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿನ ವಿಟಮಿನ್ ಸಿ ಆಂಟಿ ಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಲ್ಲಿನ ಫೈಟೋ ನ್ಯೂಟರಿಯಂಟ್ ಆಹಾರದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಆಹಾರದಲ್ಲಿ ಒಂದು ಚಿಟಿಕೆ ಕಾಳು ಮೆಣಸಿನ ಪುಡಿಯನ್ನು ಸೇರಿಸಿ ತಿನ್ನುವುದರಿಂದ ನಮ್ಮ ದೇಹದಿಂದ ಹೆಚ್ಚು ನೀರು ಮತ್ತು ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯವಾಗುತ್ತದೆ ಇದರಿಂದ ದೇಹದ ತೂಕ ಇಳಿಯುತ್ತದೆ.

ಇದು ಚರ್ಮದಲ್ಲಿನ ನಿರ್ಜೀವ ಕೋಶಗಳನ್ನು ತೆಗೆದುಹಾಕಿ ಹೊಸ ಜೀವಕೋಶಗಳ ಉಗಮಕ್ಕೆ ಕಾರಣವಾಗುವ ಶಕ್ತಿಯನ್ನು ಹೊಂದಿದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಆದರೆ ಇದನ್ನು ನೇರವಾಗಿ ಬಳಸಬೇಡಿ ತಾಜಾ ಕಾಳುಮೆಣಸಿನಪುಡಿಗೆ ಜೇನುತುಪ್ಪ ಮತ್ತು ಮೊಸರನ್ನು ಸೇರಿಸಿ ಮುಖಕ್ಕೆ ಲೇಪಿಸಿಕೊಳ್ಳಿ ಇದರಿಂದ ಮುಖದ ಸ್ನಾಯುಗಳಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ ಚರ್ಮಕ್ಕೆ ಬೇಕಾದ ಆಕ್ಸಿಜನ್ ದೊರೆಯುತ್ತದೆ. ಖಿನ್ನತೆಗೆ ಒಳಗಾಗಿದ್ದರೆ ಅವರಿಗೆ ಕಾಳುಮೆಣಸು ಪರಿಹಾರವಾಗಿದೆ. ಇದರ ಸೇವನೆಯಿಂದ ಮೆದುಳನ್ನು ಚುರುಕುಗೊಳಿಸುತ್ತದೆ, ನರಮಂಡಲವನ್ನು ಸಕ್ರೀಯವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಒಟ್ಟಿನಲ್ಲಿ ಕಾಳುಮೆಣಸಿನ ಉಪಯೋಗ ಬಹಳಷ್ಟಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!