ಪಾರ್ವತಿಯ ಬೆವರಿನಿಂದ ಜನ್ಮ ತಳೆದವನು ನಮ್ಮ ಗಣೇಶ. ಗಣಪತಿ, ಗಜಾನನ, ವಕ್ರತುಂಡ, ಮೂಷಿಕ ವಾಹನ, ಏಕದಂತ ಎಂದೆಲ್ಲಾ ಕರೆಯಲ್ಪಡುವ ಗಣೇಶನು ಎಲ್ಲರಿಗೂ ಅಚ್ಚುಮೆಚ್ಚಿನ ದೇವರು. ಗಣಗಳ ದೇವತೆಯಾದ ಗಣೇಶನು ಪ್ರಥಮ ಪೂಜಿತ. ವಿಘ್ನಹಾರಕನ ಮದುವೆಯ ಬಗೆಗೆ ಪುರಾಣದಲ್ಲಿ ಕಥೆಗಳಿವೆ. ಅವುಗಳಲ್ಲಿ ಒಂದು ಭಾಗ ಇಲ್ಲಿದೆ. ಒಮ್ಮೆ ಶಿವ ಪಾರ್ವತಿಯರಿಗೆ ತಮ್ಮ ಮಕ್ಕಳ ಮದುವೆಯ ಯೋಚನೆ ಬಂದಾಗ ಮೊದಲು ಗಣೇಶನನ್ನು ಕರೆದು ಮದುವೆಯ ಬಗೆಗಿನ ಅವನ ಅಭಿಪ್ರಾಯ ಕೇಳುತ್ತಾರೆ. ಆಗ ಗಣೇಶನು ತನಗೆ ಸಂಸಾರ ಬಂಧನಗಳಿಂದ ಮುಕ್ತವಾಗಿರಬೇಕೆಂದು ಹೇಳಿ ಮದುವೆಯನ್ನು ನಿರಾಕರಿಸುತ್ತಾನೆ. ಗಣೇಶನ ಈ ನಿರ್ಧಾರದಿಂದ ಚಿಂತಿತಗೊಂಡ ಪಾರ್ವತಿಯನ್ನು ಮಹಾದೇವನು ಆದಷ್ಟು ಬೇಗ ಗಣೇಶನು ಮದುವೆಗೆ ಒಪ್ಪಿಕೊಳ್ಳುತ್ತಾನೆ ಎಂದು ಹೇಳಿ ಸಮಾಧಾನ ಮಾಡುತ್ತಾನೆ.
ಹೀಗೆ ಒಂದು ದಿನ ಗಣಪತಿಯು ಧ್ಯಾನದಲ್ಲಿ ನಿರತನಾಗಿರುವಾಗ ಧರ್ಮದ್ವಜನ ಪುತ್ರಿಯಾದ ತುಳಸಿ ಅಲ್ಲಿಗೆ ಬರುತ್ತಾಳೆ. ಗಣೇಶನ ನೋಡಿದೊಡನೆ ಮೋಹಿತಳಾಗುವ ತುಳಸಿ ಗಣೇಶನ ಧ್ಯಾನವನ್ನು ಭಂಗಗೊಳಿಸುತ್ತಾಳೆ. ತನ್ನ ಧ್ಯಾನ ಭಂಗಕ್ಕೆ ಕಾರಣಳಾದ ತುಳಸಿಯನ್ನು ನೋಡಿದ ಗಣೇಶ ದೇವಿ ಯಾರು ನೀನು ನನ್ನ ಧ್ಯಾನ ಭಂಗ ಮಾಡಲು ಕಾರಣವೇನು? ನನ್ನ ಬಳಿ ಏಕೆ ಬಂದಿರುವೆ ಎಂದು ಪ್ರಶ್ನಿಸುತ್ತಾನೆ. ಆಗ ತುಳಸಿಯು ದೇವನೆ ನಾನು ತುಳಸಿ. ರಾಜ ಧರ್ಮಧ್ವಜ ಹಾಗೂ ಮಾಧವಿಯರ ಪುತ್ರಿ. ನನ್ನ ವರನ ಹುಡುಕಾಟಕ್ಕಾಗಿ ಯಾತ್ರೆ ಮಾಡುತ್ತಿದ್ದೆ. ಇಂದು ನಿಮ್ಮನ್ನು ಕಂಡ ಮೇಲೆ ನನ್ನ ಯಾತ್ರೆಯು ಸಫಲಗೊಂಡಿತು. ನಿಮ್ಮನ್ನು ಪತಿಯ ರೂಪದಲ್ಲಿ ಸ್ವೀಕರಿಸಲು ಮನಸಾರೆ ನಿರ್ಧರಿಸಿದ್ದೆನೆ. ನನ್ನನ್ನು ನಿಮ್ಮ ಅರ್ಧಾಂಗಿನಿಯನ್ನಾಗಿ ಮಾಡಿಕೊಂಡು ಧನ್ಯಗೊಳಿಸಿ ದೇವ ಎನ್ನುತ್ತಾಳೆ. ತುಳಸಿಯ ಮಾತು ಕೇಳಿದ ಗಣೇಶ ಇದು ಅಸಂಭವ ದೇವಿ ನಾನು ವಿವಾಹವಾಗಬಾರದೆಂದು ನಿರ್ಧರಿಸಿದ್ದೆನೆ. ವಿವಾಹವೂ ನೋಡಲು ಎಷ್ಟು ಸರಳವೋ ನಂತರದ ವೈವಾಹಿಕ ನಿರ್ವಹಣೆ ಅಷ್ಟೇ ಕಷ್ಟಕರ. ನನ್ನ ಧ್ಯೇಯವೆ ಮಾತಾಪಿತರ ಸೇವೆ ಹಾಗೂ ಆತ್ಮ ಸಾಧನೆ. ನೀವು ಇಲ್ಲಿಂದ ತೆರಳ ಬಹುದು. ನಿಮಗೆ ಸಂಗಾತಿಯಾಗಿ ಬೇರೆ ಯಾರನ್ನಾದರೂ ಹುಡುಕಿಕೊಳ್ಳಿ ಎನ್ನುತ್ತಾನೆ.
ಇದರಿಂದ ಕೋಪಗೊಂಡ ತುಳಸಿ ನನ್ನ ಮದುವೆಯ ಪ್ರಸ್ತಾಪ ತಿರಸ್ಕರಿಸಿ ಅಧರ್ಮ ಮಾಡಿರುವಿರಿ. ಒಂದು ಹೆಣ್ಣಿನ ಮನೋಕಾಮನೆ ತಿರಸ್ಕರಿಸುವುದು ಧರ್ಮದ ವಿರುದ್ದ ಹಾಗೂ ಪ್ರಕೃತಿಯ ವಿರುದ್ದವಾಗಿದೆ. ವೈವಾಹಿಕ ಜೀವನದ ಉತ್ತರದಾಯಿತ್ವ ನಿರ್ವಹಣೆಯಲ್ಲಿ ಭಯಗೊಂಡು ಹೇಡಿತನ ಪ್ರದರ್ಶನ ಮಾಡಿರುವಿರಿ. ನಾನೀಗ ಘೋಷಣೆ ಮಾಡುತ್ತಿದ್ದೆನೆ ನಿಮ್ಮ ಮದುವೆ ಆಗಲೆ ಬೇಕು ಇದು ನನ್ನ ಶಾಪ ಎಂದು ತುಳಸಿ ಶಾಪ ಕೊಡುತ್ತಾಳೆ. ತುಳಸಿಯ ಮಾತುನಿಂದ ಕ್ರೋಧಗೊಂಡ ಗಣಪ ನೀನಿಗ ಸಹಜ ನಾರಿ ಮರ್ಯಾದೆಯನ್ನು ಉಲ್ಲಂಘಿಸಿರುವೆ. ನಿರಪರಾದಿಯಾದ ನನಗೆ ಶಾಪ ನೀಡಿರುವೆ. ಇದರಿಂದ ನೀನು ದಂಡನೆಗೆ ಅರ್ಹಳಾಗಿರುವೆ. ಇದೋ ನಾನು ನಿನಗೆ ಶಾಪವಿಧಿಸುತ್ತಿದ್ದೆನೆ. ಅಸುರನು ನಿನಗೆ ಪತಿಯಾಗಿ ಪ್ರಾಪ್ತವಾಗಲಿ. ಕಾಲಗಳ ನಂತರ ವೃಕ್ಷಗಳ ಯೋನಿ ಪ್ರಾಪ್ತಗೊಂಡು ನೀನೊಂದು ವೃಕ್ಷವಾಗಬೇಕು. ಎಂದು ಶಾಪ ನೀಡುತ್ತಾನೆ.
ತಪ್ಪಿನ ಅರಿವಾದ ತುಳಸಿ ದೇವನೆ ನನಗೆ ನನ್ನ ತಪ್ಪಿನ ಅರಿವಾಗಿದೆ. ಕಾಮನೆಯ ವಶದಲ್ಲಿ ಸಿಲುಕಿ ಕಠೋರ ವಚನ ನುಡಿದುಬಿಟ್ಟೆ. ನನ್ನನ್ನು ಕ್ಷಮಿಸಿ. ವಿಘ್ನನಾಷಕರಾದ ನೀವು ನಿಮ್ಮ ಶಾಪದಿಂದ ಮುಕ್ತಗೊಳಿಸಿ, ಉದ್ದರಿಸಿ ಎಂದು ಬೇಡುತ್ತಾಳೆ. ದೇವಿ ನಿನ್ನ ಪಶ್ಚಾತ್ತಾಪ ಹಾಗೂ ಶುದ್ದ ಅಂತಃಕರಣದಿಂದ ಕ್ಷಮೆ ಕೋರಿದ್ದಕ್ಕೆ ನಿಮ್ಮನ್ನು ಕ್ಷಮಿಸುತ್ತಿದ್ದೆನೆ. ನನ್ನ ಶಾಪ ನಿಮಗೆ ವರದಾನವಾಗಿ ಪರಿಣಮಿಸುವುದು. ಕಾಲಾನಂತರ ನೀನು ಮಹಾವಿಷ್ಣುವಿನ ಪ್ರಿಯಳಾಗುವೆ. ವನಸ್ಪತಿಗಳಲ್ಲಿ ಸರ್ವೋಚ್ಚ ಹಾಗೂ ಸರ್ವಶ್ರೇಷ್ಠಳಾಗುವೆ ಹಾಗೂ ಪೂಜನೀಯಳಾಗುವೆ. ಮಹಾ ವಿಷ್ಣುವಿನ ಪೂಜೆಗೆ ನೀನು ಇರದೆ ಪೂರ್ಣವಾಗದು. ಪೃಥ್ವಿ ಲೋಕದ ಮನುಷ್ಯನ ಆತ್ಮ, ತನು, ಮನಗಳನ್ನು ಪವಿತ್ರಗೊಳಿಸುವೆ. ಹಾಗೆಯೆ ನಿನ್ನಿಂದ ನನ್ನೆಡೆಗೆ ಅಪರಾಧವಾಗಿರುವ ಕಾರಣದಿಂದ ನೀನು ನನಗೆ ತ್ಯಾಜ್ಯಳಾಗುವೆ. ಎಂದು ಗಣೇಶನು ಹರಸಿ ಕಳುಹಿಸುತ್ತಾನೆ. ಇತ್ತ ಕಡೆ ಶಿವ ಪಾರ್ವತಿಯರು ಕಾರ್ತಿಕೇಯನಿಗೆ ಗಣಪನ ಮನವೊಲಿಸಿ ಕರೆದು ಬರುವಂತೆ ಕಳುಹಿಸುತ್ತಾರೆ. ಕಾರ್ತಿಕೇಯ ಗಣೇಶನ ಮನವೊಲಿಸಿ ಕೈಲಾಸಕ್ಕೆ ಕರೆತರುತ್ತಾನೆ. ಗಣೇಶ ಹಾಗೂ ಕಾರ್ತಿಕೇಯ ಇಬ್ಬರೂ ಮದುವೆಗೆ ತಮ್ಮ ಸಮ್ಮತಿ ನೀಡುತ್ತಾರೆ. ಇದರಿಂದ ಪ್ರಸನ್ನರಾದ ಶಿವ ಪಾರ್ವತಿ ಅವರಿಗೆ ಹೊಂದುವ ಸುಶೀಲ, ಒಳ್ಳೆಯ ಗುಣವುಳ್ಳ ಕನ್ಯೆಯರನ್ನು ಹುಡುಕಲು ಆರಂಭಿಸುತ್ತಾರೆ.. ಗಣೇಶ ನೀಡಿದ ಶಾಪದ ಪ್ರಕಾರ ಇಂದಿಗೂ ಗಣೇಶನ ಪೂಜೆಗೆ ತುಳಸಿಯನ್ನು ಬಳಸುವುದಿಲ್ಲ.