2019 ನೇ ಸಾಲಿನ ಯುಪಿಎಸ್ಸಿ ( ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ಫಲಿತಾಂಶ ಪ್ರಕಟಗೊಂಡಿದ್ದು ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದ ಬಿ ಯಶಸ್ವಿನಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 71 ನೆ ಸ್ಥಾನ ಪಡೆದಿದ್ದಾರೆ. ಯಶಸ್ವಿನಿ ಕಡೂರು ತಾಲೂಕಿನ ಗುಬ್ಬಿಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಾ ಇರುವ ಬಿ ಎಸ್ ಬಸವರಾಜಪ್ಪ ಹಾಗೂ ಇಂದಿರಾ ಅವರ ಪುತ್ರಿ. ಯಶಸ್ವಿನಿ ಬಾಣೂರು ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು , ಕಡೂರಿನ ದೀಕ್ಷಾ ವಿದ್ಯಾ ಮಂದಿರದಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ಶಿವಮೊಗ್ಗದಲ್ಲಿ ಪದವಿ ಪೂರ್ವ ಶಿಕ್ಷಣ ನಂತರದಲ್ಲಿ ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ.
ದೆಹಲಿಯ ವಾಜಿರಾಮ್ ಅಂಡ್ ರವಿ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದ ಯಶಸ್ವಿನಿ ಅವರು ಪ್ರಸ್ತುತ IDES ( ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್ ) ಇಲ್ಲಿ ಉದ್ಯೋಗ ತರಬೇತಿಯನ್ನು ಪಡೆಯುತ್ತಿದ್ದಾರೆ. ಯಶಸ್ವಿನಿ ಅವರು ಈಗ ಎರಡನೇ ಬಾರಿ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದು ಮೊದಲ ಪರೀಕ್ಷೆಯಲ್ಲಿ 293 ನೆ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದರು. ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದೆ ಇರುವ ಯಶಸ್ವಿನಿ ಗೆ ತಾನು ಚೆನ್ನಾಗಿ ಓದಿ ಐಎಎಸ್ ಅಧಿಕಾರಿ ಆಗಬೇಕು ಎನ್ನುವುದು ಇವರ ಹೆಬ್ಬಯಕೆ ಆಗಿತ್ತು. ಹಾಗಾಗಿ ಕಳೆದ ಸಲದ ಪರೀಕ್ಷೆಯಲ್ಲಿ 293 ನೆ ಶ್ರೇಣಿ ಪಡೆದಿದ್ದರೂ ಸಹ ಅದು ಕಡಿಮೆ ಎನಿಸಿ ಮತ್ತೆ ಯುಪಿಎಸ್ಸಿ ಪರೀಕ್ಷೆ ಎದುರಿಸಿ ಈಗ 71 ನೆ ರ್ಯಾಂಕ್ ಪಡೆದಿದ್ದಾರೆ.
ತಮ್ಮ ಮಗಳ ಈ ಸಾಧನೆ ಬಹಳ ಹೆಮ್ಮೆಯ ವಿಷಯ ಎಂದು ಯಶಸ್ವಿನಿ ಅವರ ತಂದೆ ಬಸವರಾಜಪ್ಪ ಹಾಗೂ ತಾಯಿ ಇಂದಿರಾ ಅವರು ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ. ಐಎಎಸ್ ಮಾಡಬೇಕು ಎನ್ನುವ ತನ್ನ ಗುರಿಗೆ ಸದಾ ಬೆನ್ನೆಲುಬಾಗಿ ನಿಂತ ತಂದೆ ತಾಯಿ, ತಾನು ಓದಿದ ಶಾಲೆಯ ಶಿಕ್ಷಕರ ಮಾರ್ಗದರ್ಶನದಿಂದ ತನಗೆ ಈ ಸ್ಥಾನ ಸಿಕ್ಕಿದೆ ಎಂದು ಯಶಸ್ವಿನಿ ಹೇಳುತ್ತಾರೆ. ಹಾಗೆ ಜನರ ಸೇವೆ ಮಾಡಬೇಕು ಎನ್ನುವ ತನ್ನ ಈ ಕನಸಿಗೆ ಬೆಮ್ಮೆಲುಬಾಗಿ ನಿಂತು ಪ್ರೋತ್ಸಾಹ ನೀಡಿದ ಎಲ್ಲರಿಗೂ ಸಹ ಯಶಸ್ವಿನಿ ಕೃತಜ್ಞತೆ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಏನನ್ನು ಬೇಕಿದ್ದರೂ ಸಾಧಿಸುತ್ತಾರೆ ಎನ್ನುವುದಕ್ಕೆ ಯಶಸ್ವಿನಿ ಅವರೇ ನಮ್ಮ ಕಣ್ಣೆದುರು ಇರುವ ಜೀವಂತ ಸಾಕ್ಷಿ.