ದೇವರ ದರ್ಶನಕ್ಕಾಗಿ ಮೈಸೂರಿಗೆ ಬರುವ ಮಹಿಳೆಯರು ಮಾತ್ರವಲ್ಲ ಪುರುಷರಿಗೂ 5 ದಿನಗಳು ಉಚಿತ ಬಸ್ ಪಯಣ ಇದೆ. ಇಂತಹ ಸೌಲಭ್ಯ ನೇರವಾಗಿ ರಾಜ್ಯ ಸರ್ಕಾರ ನೀಡದಿದ್ದರೂ ಮೈಸೂರು ಜಿಲ್ಲಾಡಳಿತ ಗಂಡಸರೂ ಸೇರಿದಂತೆ ಎಲ್ಲರಿಗೂ ನೀಡುತ್ತಿದೆ.ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ಮಹಿಳೆಯರೆಲ್ಲರೂ ಕೂಡ ಕರ್ನಾಟಕ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ಪಡೆಯುತ್ತಿದ್ದಾರೆ.
ಈ ಅವಕಾಶದಿಂದ ವಂಚಿತರಾಗಿದ್ದ ಪುರುಷ ಸಮಾಜಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ.ರಾಜ್ಯದಲ್ಲಿ ಆಷಾಢ ಮಾಸ (Ashada Masa) ಶುರುವಾಗಿದೆ. ಈ ತಿಂಗಳಿನಲ್ಲಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷವಾಗಿ ಪೂಜಾ ಪುರಸ್ಕಾರಗಳು ಹೆಚ್ಚು ನಡೆಯುವ ತಿಂಗಳು. ಮೈಸೂರು ಜಿಲ್ಲಾಡಳಿತವು ಐದು ದಿನಗಳವರೆಗೆ ಪುರುಷರಿಗೂ ಕೂಡ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರಗಳಂದು ಖಾಸಗಿ ವಾಹನಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬೆಟ್ಟಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಸರ್ಕಾರಿ ಬಸ್ಗಳಲ್ಲಿ ಭಕ್ತಾದಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಮಹಿಳಾ ಭಕ್ತರ ಜೊತೆಗೆ ಪುರುಷ ಭಕ್ತಾದಿಗಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ಎಲ್ಲಾ ಭಕ್ತರಿಗೂ ಉಚಿತ ಪ್ರಯಾಣ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಜೂನ್ 23 ರಿಂದ ಜುಲೈ 14ರ ಆಷಾಢ ಶುಕ್ರವಾರ ದಿನಗಳಂದು ಹಾಗೂ ಜುಲೈ 10 ಚಾಮುಂಡಿ ವರ್ಧಂತಿ ದಿನದಂದು ಹೆಚ್ಚಿನ ಜನ ಬರುವುದರಿಂದ ಸಂಚಾರ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ವಾಹನಗಳನ್ನ ಲಲಿತಮಹಲ್ ಮೈದಾನದಲ್ಲಿ ನಿಲುಗಡೆ ಮಾಡಲು ಸೂಚನೆ ನೀಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಬರುವ ಎಲ್ಲಾ ಮಾರ್ಗಗಳಿಂದಲೂ ಖಾಸಗಿ ವಾಹನಗಳಿಗೆ ನಿಷೇಧ ಹೇರಲಾಗಿದೆ. ಬೆಟ್ಟದ ತಪ್ಪಲಿನಲ್ಲಿ ತಮ್ಮ ವಾಹನಗಳ ನಿಲ್ಲಿಸಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಬೇಕು. ಜಿಲ್ಲಾಡಳಿತ ವತಿಯಿಂದ ಮಾಡಿರುವ ಸರ್ಕಾರಿ ಬಸ್ ಗಳಲ್ಲಿ ಭಕ್ತರು ತೆರಳುವಂತೆ ಸೂಚನೆ ನೀಡಲಾಗಿದೆ.
ಪುರುಷ ಪ್ರಯಾಣಿಕರು ಕೂಡ ಸರ್ಕಾರಿ ವಾಹನಗಳಲ್ಲಿ ಪ್ರಯಾಣಿಸಲಿ ಎಂದು ಉತ್ತೇಜಿಸುವ ಕಾರಣಕ್ಕಾಗಿ ಐದು ದಿನಗಳು ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಪುರುಷ ಪ್ರಯಾಣಿಕರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ ಭಕ್ತರು ಚಾಮುಂಡಿ ಬೆಟ್ಟಕ್ಕೆ ಹೋಗಲು ಅನುಕೂಲ ಆಗುವಂತೆ ಬೆಳಗಿನ ಜಾವ 3 ರಿಂದಲೇ ಉಚಿತ ಬಸ್ ಸಂಚಾರವನ್ನು ಆರಂಭಿಸಲಾಗುತ್ತದೆ.
ಜೊತೆಗೆ, ರಾತ್ರಿ 10 ಗಂಟೆವರೆಗೂ ಬಸ್ ಸೌಲಭ್ಯವನ್ನು ಮುಂದುವರೆಸಲಾಗುತ್ತದೆ. ಇದರಿಂದ ಚಾಮುಂಡಿ ಬೆಟ್ಟಕ್ಕೆ ಸರ್ಕಾರಿ ಬಸ್ ಗಳಲ್ಲಿ ಎಲ್ಲರಿಗೂ ಉಚಿತ ಬಸ್ ಸೌಲಭ್ಯ ಇರುತ್ತದೆ. ಶಿಷ್ಟಾಚಾರವಿರುವ ಗಣ್ಯರ ಮತ್ತು ಅತೀ ಗಣ್ಯರ ವಾಹನಗಳ ಹೊರತುಪಡಿಸಿ ಉಳಿದ ಎಲ್ಲಾ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿ ಮೈಸೂರು ಪೋಲಿಸ್ ಆಯುಕ್ತ ಬಿ. ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.