777 ಚಾರ್ಲಿ’ ಸಿನಿಮಾ ಜೂನ್ 10ರಂದು ರಿಲೀಸ್ ಆಗಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಚಿತ್ರದಿಂದ ನಟನಾಗಿ ನಿರ್ಮಾಪಕನಾಗಿ ರಕ್ಷಿತ್ ಶೆಟ್ಟಿ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ರಕ್ಷಿತ್ ಶೆಟ್ಟಿ ಜೀವನದಲ್ಲಿ ಸಹ ಮೈಲುಗಲ್ಲಾಗಲಿದೆ ಎನ್ನಲಾಗುತ್ತಿದೆ. ಕೇವಲ ಟ್ರೇಲರ್ ಮೂಲಕವೇ ಕಿಚ್ಚು ಹಚ್ಚಿರುವ ಈ ಚಿತ್ರ ಅಭಿಮಾನಿಗಳ ನಿರೀಕ್ಷೆಯನ್ನು ಸಹ ಮೀರುತ್ತದೆ ಎಂದರೆ ತಪ್ಪಲ್ಲ. ರಕ್ಷಿತ್ ಶೆಟ್ಟಿ ನಟನೆ ಜೊತೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು.
ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಟ್ರೆಂಡ್ ಸೃಷ್ಟಿ ಮಾಡಿದವರು ಎಂದರೆ ತಪ್ಪಾಗಲಾರದು. ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ವಿಭಿನ್ನ ಮ್ಯಾನರಿಸಂ, ಕಿಕ್ ಕೊಡುವ ಡೈಲಾಗ್ಸ್ ರಕ್ಷಿತ್ ಶೆಟ್ಟಿ ಅವರ ಟ್ರೇಡ್ ಮಾರ್ಕ್ ಎನ್ನಬಹುದು. ತುಘಲಕ್’ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ ‘777 ಚಾರ್ಲಿ’ ಗೆ ಬಂದು ನಿಂತಿದ್ದಾರೆ. ಅವರ ಪ್ರತಿ ಸಿನಿಮಾವೂ ಡಿಫ್ರೆಂಟ್. ಇದೀಗ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ‘777 ಚಾರ್ಲಿ’ ಜೂನ್ 10ರಂದು ಬಿಡುಗಡೆಯಾಗಿದೆ.
ಈಗ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಿಸಿದ್ದಾರೆ. ಇವರಿಗೆ ಅನೇಕ ಸಚಿವರು, ಶಾಸಕರು ಸಾತ್ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ಈ ಮೊದಲಿನಿಂದಲೂ ಚಿತ್ರರಂಗಕ್ಕೆ ಬೆಂಬಲ ನೀಡುತ್ತಾ ಬಂದವರು. ಸಾಕಷ್ಟು ಸಿನಿಮಾ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ತೆರಳಿದ್ದರು. ಈಗ ‘777 ಚಾರ್ಲಿ’ ಚಿತ್ರವನ್ನು ಅವರು ವೀಕ್ಷಿಸಿದ್ದಾರೆ. ಇದರಿಂದ ರಕ್ಷಿತ್ ಆ್ಯಂಡ್ ಟೀಮ್ ಖುಷಿಪಟ್ಟಿದೆ.
ಭಾರೀ ಪ್ರಶಂಸೆಗೆ ಪಾತ್ರವಾಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ 777 ಚಾರ್ಲಿ ಚಿತ್ರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಖುದ್ದು ಸಿನಿಮಾ ಥಿಯೇಟರ್‍ಗೆ ತೆರಳಿ ವೀಕ್ಷಿಸಿದ್ದಾರೆ.ಬೆಂಗಳೂರಿನ ಒರಾಯನ್ ಮಾಲ್ನ ಪಿವಿಆರ್ನಲ್ಲಿ ‘777 ಚಾರ್ಲಿ’ ಚಿತ್ರವನ್ನು ಬೊಮ್ಮಾಯಿ ನೋಡಿದ್ದಾರೆ. ಶ್ವಾನ ಪ್ರೇಮಿ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಹದ್ಯೋಗಿಗಳ ಜೊತೆಯಲ್ಲಿ ‘777 ಚಾರ್ಲಿ’ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಒರಾಯನ್ ಮಾಲ್‌ನಲ್ಲಿ ಅವರು ಉಡುಪಿ ಶಾಸಕ ರಘುಪತಿ ಭಟ್, ಸಚಿವರಾದ ಆರ್.ಅಶೋಕ್, ಬಿ.ಸಿ.ನಾಗೇಶ್, ನಿರ್ದೇಶಕ ಕಿರಣ್ ರಾಜ್, ನಟ ರಕ್ಷಿತ್ ಶೆಟ್ಟಿ, ನಟಿ ಸಂಗೀತಾ ಶೃಂಗೇರಿ ಅವರೊಂದಿಗೆ ಸಿನಿಮಾ ವೀಕ್ಷಿಸಿದರು.
ಸಿನಿಮಾ ಬಗ್ಗೆ ಮಾತನಾಡಿರುವ ಅವರು, ‘ನಾನು ಶ್ವಾನಪ್ರಿಯ. ಈ ಸಿನಿಮಾ ನೋಡಿದಾಗ ಸತ್ತ ನನ್ನ ನಾಯಿ ನೆನಪಾಯಿತು. ಈಗ ದಿಯಾ ಹೆಸರಿನ ನಾಯಿ ಸಾಕಿದ್ದೇನೆ. ನಾನು ಮನೆಗೆ ಬಂದಾಗ ಚಾರ್ಲಿ ರೀತಿಯೇ ದಿಯಾ ನನ್ನನ್ನು ತಬ್ಬಿಕೊಳ್ಳುತ್ತದೆ’ ಎಂದಿದ್ದಾರೆ. ಚಾರ್ಲಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ನಾಯಿ ಪಾತ್ರ ಮೆಚ್ಚುವಂಥದ್ದು. ನಟ ರಕ್ಷಿತ್ ಶೆಟ್ಟಿ ಕೂಡ ತುಂಬ ಚೆನ್ನಾಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ನೋಡಿದ್ದೆ. ರಕ್ಷಿತ್ ಆಹ್ವಾನವೂ ಇತ್ತು. ಅದಕ್ಕಾಗಿ ಈ ಸಿನಿಮಾ ನೋಡಿದೆ’ ಎಂದಿದ್ದಾರೆ ಬೊಮ್ಮಾಯಿ.
ಚಾರ್ಲಿ ಸಿನಿಮಾ ನೋಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು. ಸಿನಿಮಾ ಕೊನೆಯಲ್ಲಿ ಚಾರ್ಲಿ ಶ್ವಾನ ಸಾವನ್ನಪ್ಪುತ್ತದೆ. ಈ ಸನ್ನಿವೇಶವನ್ನು ನೆನೆದು ಅವರು ದುಃಖಿತರಾದರು. 777 ಚಾರ್ಲಿ’ ಸಿನಿಮಾ ಮನುಷ್ಯ ಹಾಗೂ ಶ್ವಾನದ ನಡುವಿನ ಕಥೆಯನ್ನು ಒಳಗೊಂಡಿದೆ. ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರಿಗೂ ಈ ಸಿನಿಮಾ ಕಣ್ಣೀರು ತರಿಸುತ್ತದೆ. ಸಿಎಂ ಕೂಡ ಇದಕ್ಕೆ ಹೊರತಾಗಿಲ್ಲ. 777 ಚಾರ್ಲಿ, ಕೆಜಿಎಫ್ ಹೀಗೆ ಹಲವು ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಇದು ಹೆಮ್ಮೆಯ ವಿಚಾರ. ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಲು ಸರ್ಕಾರ ರೆಡಿ ಇದೆ. ಕೇವಲ ಸರ್ಕಾರವೊಂದೇ ಫಿಲ್ಮ್ ಸಿಟಿ ಮಾಡಲು ಆಗುವುದಿಲ್ಲ. ಸಿನಿ ತಾಂತ್ರಿಕರು ಮುಂದೆ ಬರಬೇಕು ಎಂಬುದು ಅವರ ಮಾತು.
ಮೂಕ ಪ್ರಾಣಿಗಳ ಮುಗ್ಧ ಪ್ರೀತಿಯನ್ನು ನಟ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದಲ್ಲಿ ಭಾವನಾತ್ಮಕವಾಗಿ ತೋರಿಸಲಾಗಿದೆ. ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ವಿಮರ್ಶಕರು, ಪ್ರೇಕ್ಷಕರು ಮತ್ತು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ದೇಶದಾಂದ್ಯಂತ ಬಿಡುಗಡೆಗೊಂಡಿರುವ ‘777 ಚಾರ್ಲಿ’ ಸಿನಿಮಾ ಎಲ್ಲರ ಹೃದಯವನ್ನು ಗೆಲ್ಲುತ್ತಿದೆ. ರಕ್ಷಿತ್ ಶೆಟ್ಟಿ ಟೀಂ ಹಾಗೂ ನಿರ್ದೇಶಕ ಕಿರಣ್ ರಾಜ್ ಶ್ರಮದಿಂದ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡದ ನಟ-ನಟಿಯರು ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ನಟ-ನಟಿಯರು ಬೆಂಬಲಕ್ಕೆ ನಿಂತು ಮತ್ತಷ್ಟು ಹುರುಪ್ಪನ್ನು ನೀಡಿದ್ದಾರೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಈ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ.