ವಾಸ್ತುಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿದೆ. ವಾಸ್ತುಪ್ರಕಾರವಾಗಿ ಎಲ್ಲವೂ ಇದ್ದರೆ ನೆಮ್ಮದಿ ಸುಖ ಸಂಪತ್ತು ನೆಲೆಸಿರುತ್ತದೆ. ಹಾಗಾಗಿ ವಾಸ್ತುಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ. ಮನೆಯಲ್ಲಿರುವ ಫೋಟೋಗಳು, ದೇವರ ಪ್ರತಿಮೆಗಳು, ಇನ್ನೂ ಅನೇಕ ಬಗೆಯ ವಿಶೇಷ ರೀತಿಯ ಚಿತ್ರಗಳು ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಚಿತ್ರಗಳಿಂದ ಸಕಾರಾತ್ಮಕ ಪ್ರಭಾವ ಉಂಟಾದರೆ ಮತ್ತೆ ಕೆಲವು ಫೋಟೋಗಳು, ಪೇಂಟಿಂಗ್ಗಳಿಂದ ನಕಾರಾತ್ಮಕ ಶಕ್ತಿಯ ಹರಿವು ಮನೆಯೊಳಗೆ ಆಗುತ್ತದೆ.
ಮನೆಯಲ್ಲಿ ಕುದುರೆಗಳ ಚಿತ್ರವಿದ್ದರೆ ಶ್ರೇಯಸ್ಸು ಎನ್ನುವ ನಂಬಿಕೆ ಬಹಳ ದಿನಗಳಿಂದಲೂ ಇದೆ. ಮನೆಯ ಮನಸಿನ ಒಳಿತಿಗೆ ಎಷ್ಟು ಕುದುರೆಯ ಚಿತ್ರ ಅಥವಾ ಪುತ್ಥಳಿ ಹೇಗಿರಬೇಕು, ಎಲ್ಲಿರಬೇಕು, ಅವು ಯಾವ ಕಡೆ ಮುಖ ಮಾಡಿರಬೇಕು, ಯಾವ ಗೋಡೆಗೆ ಹಾಕಬೇಕು ಎಂಬಿತ್ಯಾದಿ ವಿಷಯಗಳ ಕುರಿತ ಪುಟ್ಟ ಮಾಹಿತಿ ಇಲ್ಲಿದೆ.
ಒಂದೇ ಕುದುರೆ ಇರುವ ಪೇಂಟಿಂಗ್ ಅಥವಾ ಭಾವಚಿತ್ರವನ್ನು ಮನೆಯಲ್ಲಿ ಹಾಕಬಾರದು. ಇದರಿಂದ ನಷ್ಟ ಸಂಭವಿಸುತ್ತದೆ. ಓಡುತ್ತಿರುವ ಕುದುರೆಗಳು ಪ್ರಗತಿಯ ಪ್ರತೀಕವಾಗಿದೆ. ಈ ರೀತಿಯ ಭಾವಚಿತ್ರವನ್ನು ತೂಗು ಹಾಕುವುದರಿಂದ ಮನೆಯಲ್ಲಿ ಏಳಿಗೆ ಆಗುತ್ತದೆ. ಕೆಲಸದಲ್ಲಿ ಪ್ರಗತಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. ಪ್ರತಿ ದಿನ ಓಡುವ ಕುದುರೆಗಳ ಭಾವಚಿತ್ರವನ್ನು ನೋಡುವುದರಿಂದ ಕಾರ್ಯಕ್ಷಮತೆಯ ಮೇಲೆ ಉತ್ತಮ ಪರಿಣಾಮವಾಗುತ್ತದೆ. ಅಷ್ಟೇ ಅಲ್ಲದೆ ಕೆಲಸ ಬೇಗ ಸಾಗುತ್ತದೆ.
ಕುದುರೆಗಳು ಸಮೃದ್ಧಿ ಮತ್ತು ಶಕ್ತಿಯ ಪ್ರತೀಕವಾಗಿವೆ. ಕಚೇರಿಯಲ್ಲಿ ಕುದುರೆಗಳ ಭಾವಚಿತ್ರವನ್ನು ಹಾಕುವಾಗ ಗಮನವಿರಬೇಕು. ಈ ಸ್ಥಳದಲ್ಲಿ ಕುದುರೆಗಳ ಮುಖ ಕಚೇರಿ ಒಳಗೆ ಪ್ರವೇಶ ಮಾಡಿದಂತೆ ಇರಬೇಕು. ಇಲ್ಲದಿದ್ದರೆ ಕೆಡಕು ಎಂದೇ ಹೇಳಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಹಾಕಬೇಕಾಗುತ್ತದೆ. ಇಲ್ಲವಾದರೆ, ವಾಸ್ತು ತಜ್ಞರನ್ನು ಕರೆಸಿ ಹಾಕಿಸಿಕೊಳ್ಳಬಹುದು. ಭಾವಚಿತ್ರದಲ್ಲಿ ಕುದುರೆಗಳು ಬೇರೆ ಬೇರೆ ದಿಕ್ಕಿನ ಕಡೆ ಓಡುತ್ತಿದ್ದರೆ ಅಂತಹ ಚಿತ್ರವನ್ನು ಹಾಕದಿರುವುದು ಒಳಿತು. ಹೀಗೆ ಹಾಕುವುದರಿಂದ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕುದುರೆಗಳ ಫೋಟೋ ಮೇಲೆ ಧೂಳು ಇರುವಂತಿಲ್ಲ, ಅಲ್ಲದೆ, ಫೋಟೋ ಒಡೆದಿರಲೂಬಾರದು.
ಕುದುರೆಗಳ ಭಾವಚಿತ್ರವನ್ನು ಮನೆಯಲ್ಲಿ ಹಾಕುವಾಗ ಪೂರ್ವ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಮನೆಯಲ್ಲಿ ಧನ-ಧಾನ್ಯ ವೃದ್ಧಿಸುತ್ತದೆ. ಲಕ್ಷ್ಮೀ ದೇವಿ ಪ್ರಸನ್ನಳಾಗಿ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ. ಕುದುರೆಗಳು ಪ್ರಸನ್ನವಾಗಿ, ತೇಜಸ್ಸು ಹೊಂದಿದಂತೆ ಇರುವ ಫೋಟೋಗಳನ್ನೇ ಆಯ್ಕೆ ಮಾಡಿ ಮನೆ ಅಥವಾ ಕಚೇರಿಯಲ್ಲಿ ಹಾಕಿ. ಆಕ್ರೋಶದ ಮುಖವುಳ್ಳ ಫೋಟೋವನ್ನು ಹಾಕಿದರೆ ನಕಾರಾತ್ಮಕ ಶಕ್ತಿಯು ಪ್ರವಹಿಸುವಂತಾಗುತ್ತದೆ.
ನಾಗಾಲೋಟದಲ್ಲಿ ಓಡುತ್ತಿರುವ ಏಳು ಕುದುರೆಗಳಿರುವ ಚಿತ್ರಕಲೆಗೆ ವಾಸ್ತು ಪ್ರಕಾರ ಹೆಚ್ಚಿನ ಮಹತ್ವವಿದೆ. ಇದು ಯಶಸ್ಸು ಮತ್ತು ಅಧಿಕಾರವನ್ನು ಸಂಕೇತಿಸುತ್ತದೆ. ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಯಶಸ್ಸಿಗೆ ಇದು ಪುಷ್ಟಿ ನೀಡುತ್ತದೆ ಎನ್ನುವ ನಂಬಿಕೆ ಇದೆ. ನಾಗಾಲೋಟದಲ್ಲಿ ಓಡುತ್ತಿರುವ ಏಳು ಕುದುರೆಗಳ ಚಿತ್ರವನ್ನು ಲಿವಿಂಗ್ ರೂಮಿನಲ್ಲಿ ಹಾಕಬೇಕು. ಕುದುರೆಗಳು ಮುಖ ಮನೆಯ ಬಾಗಿಲಿನಿಂದ ಹೊರಗೆ ಹೋಗುವಂತೆ ಇರಬಾರದು.
ಮನೆಯ ದಕ್ಷಿಣ ವಲಯ ಯಶಸ್ಸು ಮತ್ತು ಖ್ಯಾತಿಗೆ ಸಂಬಂಧಿಸಿರುವುದರಿಂದ ಅದನ್ನು ದಕ್ಷಿಣ ಭಾಗಕ್ಕೇ ಹಾಕಬೇಕು. ಒಂದು ವೇಳೆ ಅದಕ್ಕೆ ಅವಕಾಶ ಇಲ್ಲದೇ ಇದ್ದಲ್ಲಿ ಪೂರ್ವ ಭಾಗದ ಗೋಡೆಯನ್ನು ಪರಿಗಣಿಸಬಹುದು. ಈ ಚಿತ್ರ ಅಥವಾ ಪೇಂಟಿಂಗ್ನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಚಿತ್ರದಲ್ಲಿರುವ ಕುದುರೆಗಳ ಮುಖದ ಮೇಲಿನ ಭಾವವನ್ನೂ ಪರಿಗಣಿಸಬೇಕಾಗುತ್ತದೆ. ಅಂದರೆ ಕುದುರೆಗಳು ಕೋಪದಲ್ಲಿ ಇರಬಾರದು. ಮುಖದಲ್ಲಿ ಸಂತಸದ ಛಾಯೆ ಇರಬೇಕು. ಕಿಟಕಿ, ಬಚ್ಚಲು ಅಥವಾ ಶೌಚಾಲಯಕ್ಕೆ ಮುಖ ಮಾಡಿ ಈ ಚಿತ್ರವನ್ನು ಹಾಕಬೇಡಿ.
ಚಿತ್ರದಲ್ಲಿರುವ ಎಲ್ಲಾ ಕುದುರೆಗಳೂ ಒಂದೇ ದಿಕ್ಕಿನತ್ತ ಓಡುವಂತಿರಬೇಕು, ಒಂದೊಂದು ಕುದುರೆಗಳು ಒಂದೊಂದು ದಿಕ್ಕಿಗೆ ಓಡುವಂತಿರಬಾರದು. ಲೋಹದ, ಮರದ, ಸೆರಾಮಿಕ್ ಪ್ರತಿಮೆಗಳ ಅಥವಾ ಚಿತ್ರಕಲೆಯ ರೂಪದಲ್ಲಿ ಮಾತ್ರ ಕುದುರೆಗಳನ್ನು ಪರಿಗಣಿಸಬೇಕು. ಬೆನ್ನಿನ ಮೇಲೆ ಚಿನ್ನದ ಗಟ್ಟಿಯನ್ನು ಹೊತ್ತು ನಿಂತಿರುವ ಕಂಚಿನ ಜೋಡಿ ಕುದುರೆಗಳನ್ನು ಕಚೇರಿ ಅಥವಾ ವ್ಯಾಪಾರ ಸ್ಥಳದಲ್ಲಿ ಇಟ್ಟುಕೊಳ್ಳುವುದು ಉತ್ತಮ. ಇವು ಯಶಸ್ಸು, ಖ್ಯಾತಿ, ಗೆಲುವು ಮತ್ತು ಗೌರವವನ್ನು ಪ್ರತಿನಿಧಿಸುತ್ತವೆ.
ನಾಣ್ಯಗಳ ರಾಶಿ ಮತ್ತು ನಿಧಿಯ ಮೇಲೆ ಕಾಲೂರಿ ನಿಂತಿರುವ ಕುದುರೆಯು ಸಂಪತ್ತು, ಉತ್ತಮ ಅದೃಷ್ಟ, ಖ್ಯಾತಿ, ಸ್ಥಿರತೆ ಮತ್ತು ಹರ್ಷವನ್ನು ಪ್ರತಿನಿಧಿಸುತ್ತದೆ.
ಸಪ್ತ ಋಷಿ,ಸಪ್ತಪದಿ,ಸಪ್ತ ಜನ್ಮ ಎಲ್ಲವೂ 7ರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಏಳು ಅಶ್ವಗಳು ಇರುವಂತಹ ಫೋಟೋ ಬಹಳ ವಿಶೇಷವಾದದು. ಈ ಫೋಟೋವನ್ನು ವ್ಯವಹಾರ ಮಾಡುವಲ್ಲಿ ಹಾಕಿದರೆ ಯಾವ ವ್ಯಕ್ತಿಯ ಕಣ್ಣು ಈ ಫೋಟೋ ಮೇಲೆ ಬಿದ್ದರೆ ಆ ವ್ಯಕ್ತಿಯಿಂದ ವ್ಯಾಪಾರಕ್ಕೆ ಲಾಭ ಆಗುತ್ತೆ ಅಂತ ಹೇಳಲಾಗುತ್ತದೆ. ಅತಿಯಾದ ಸಾಲದಲ್ಲಿ ಬಿದ್ದವರು ಮನೆ ಅಥವಾ ಕಚೇರಿಯ ವಾಯುವ್ಯ ದಿಕ್ಕಿನಲ್ಲಿ ಕುದುರೆಯ ಚಿತ್ರವನ್ನು ಹಾಕಬೇಕು. ಜೋಡಿ ಕುದುರೆ ಚಿತ್ರ ಹಾಕುವುದು ಬಹಳ ಶ್ರೇಯಸ್ಕರ. ಇನ್ನು ಕಚೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ 7 ಕುದುರೆಯ ಚಿತ್ರವನ್ನು ಹಾಕಬೇಕು. ಆಫೀಸ್ ಕಡೆಗೆ ಕುದುರೆಮುಖ ಮಾಡಿಕೊಂಡಿರಬೇಕು.
ಇನ್ನು ಬಹುಮುಖ್ಯವಾಗಿ ಯಾವುದಾದರೂ ರಥಗಳನ್ನು ಎಳೆಯುವಂತಹ ಫೋಟೋಗಳನ್ನು ಖಂಡಿತವಾಗಿಯೂ ಹಾಕಬಾರದು. ಶ್ವೇತ ವರ್ಣದ ಕುದುರೆಗಳು ಶಕ್ತಿ ಮತ್ತು ಸಮೃದ್ಧಿಯ ಪ್ರತೀಕವಾಗಿದೆ. ಯಾವ ಮನೆಯಲ್ಲಿ ಏಳು ಕುದುರೆಗಳ ಫೋಟೋವನ್ನು ಹಾಕಿರಲಾಗುತ್ತದೋ, ಅವರಿಗೆ ಧನ ಸಂಬಂಧೀ ಸಮಸ್ಯೆಗಳು ಉಂಟಾಗುವುದು ಕಡಿಮೆ.