ನಮ್ಮ ರಾಜ್ಯದಲ್ಲಿ ತೋಟದ ಬೆಳೆಗಳ ಕ್ಷೇತ್ರವು ಹೆಚ್ಚುತ್ತಿದೆ. ಬಾಳೆಯಂತಹ ಅಲ್ಪಾವಧಿ ವಾಣಿಜ್ಯ ಬೆಳೆಗಳು ಎಲ್ಲೇಡೆ ಕಾಣುತ್ತಿವೆ. ರಸಗೊಬ್ಬರಗಳಿಗೆ ಉತ್ತಮವಾಗಿ ಸ್ಪ೦ದಿಸಿ ಬಂಪರ್ ಇಳುವರಿ ಕೊಡಬಲ್ಲತಳಿಗಳು ರೈತರ ಮನಗೆಲ್ಲುತ್ತಿವೆ. ವರ್ಷವಿಡೀ ಬೆಳೆಯಬಹುದಾದ ಮತ್ತು ನಿರಂತರ ಬೇಡಿಕೆ-ಬಳಕೆ ಇರುವ ಏಕಮಾತ್ರ ಹಣ್ಣು ಈ ಬಾಳೆ. ಇಷ್ಟೆಲ್ಲಾ ಬೆಳೆಯಿದ್ದರೂ ನಮ್ಮ ಗ್ರಾಹಕರಿಗೆ ಸ್ಥಳೀಯ ಉತ್ಪಾದನೆ ಸಾಕಾಗದೇ ಸುತ್ತಲಿನ ಎಲ್ಲ ರಾಜ್ಯಗಳಿಂದ ಬಾಳೆಹಣ್ಣು ಆಮದಾಗುತ್ತಿದೆ.
ಹಣ್ಣುಗಳ ಪಟ್ಟಿಯಲ್ಲಿ ಮಾವಿನ ನಂತರದ ಸ್ಥಾನ ಈ ಬಾಳೆಯದು. ತಾಜಾ ಹಣ್ಣು, ಚಿಪ್ಸು, ಒಣಹಣ್ಣು, ತರಕಾರಿ ಹೀಗೆ ವಿವಿಧ ರೂಪಗಳಲ್ಲಿ ನಮ್ಮ ಆಹಾರದ ಪಟ್ಟಿಯಲ್ಲೂ ಬಾಳೆಗೆ ಅಗ್ರಸ್ಥಾನ. ಇನ್ನು ಗ್ರಾಮೀಣ ಬದುಕಿನಲ್ಲಿ ಕೃಷಿ ಉದ್ದೇಶಕ್ಕೆ ಬಾಳೆ ನಾರು, ಊಟಕ್ಕೆ ಬಾಳೆ ಎಲೆ, ಹೈನು ರಾಸುಗಳಿಗೆ ಹಸಿ ಮೇವಾಗಿ ಕೂಡ ಈ ಬಾಳೆಗೆ ಪ್ರಾಮುಖ್ಯತೆ ಇದೆ. ಅಡಿಕೆಯ ಚಿಕ್ಕ ಸಸಿಗಳಿಗೆ ನೆರಳು ನೀಡಲು ಬಾಳೆ ಬೆಳೆಸಲಾಗುತ್ತದೆ. ಈ ಸಸ್ಯದ ಉಗಮ ಸ್ಥಾನ ದಕ್ಷಿಣ ಪೂರ್ವ ಏಷ್ಯಾ ಪ್ರದೇಶ. ಹಾಗಾಗಿ ನಮ್ಮ ನಾಗರೀಕತೆಯ ಆರಂಭದ ಕಾಲದಿಂದಲೂ ಈ ಬಾಳೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ ಎನ್ನಬಹುದು.
ಬಾಳೆಬೆಳೆಯನ್ನು ಚೆನ್ನಾಗಿ ನೀರು ಬಸಿದು ಹೋಗುವಂತಹ ಕೆಂಪುಮಣ್ಣಿನಿಂದ ಹಿಡಿದು ಕಪ್ಪು ಮಣ್ಣಿನಲ್ಲಿಯೂ ಬೆಳೆಯಬಹುದು. ತೇವಾಂಶವನ್ನು ಹೆಚ್ಚುಕಾಲ ಕಾಯ್ದಿಟ್ಟುಕೊಳ್ಳುವಂತಹ ಹೆಚ್ಚು ಸಾವಯವ ಅಂಶವಿರುವ ಮಣ್ಣು ಈ ಬೆಳೆಗೆ ಅತೀ ಯೋಗ್ಯ ಬಾಳೆಯನ್ನು ನೀರಾವರಿ ಅನುಕೂಲವಿರುವ ಎಲ್ಲಾ ಕಡೆ ಬೆಳೆಯಬಹುದು.
ಬಾಳೆಗಿಡವನ್ನು ಚಳಿಗಾಲವನ್ನು (ನವೆಂಬರ್–ಡಿಸೆಂಬರ್) ಹೊರತುಪಡಿಸಿ ಬಾಳೆಯನ್ನು ವರ್ಷದ ಯಾವುದೇ ಕಾಲದಲ್ಲಿ ನಾಟಿ ಮಾಡಬಹುದಾದರೂ ಜೂನ್ ಜುಲೈ ತಿಂಗಳು ಅತೀ ಸೂಕ್ತ. ಬಾಳೆ, ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆ, ಪ್ರತಿಯೊಬ್ಬರೂ ತಿನ್ನಲು ಬಯಸುವ ಬಾಳೆಹಣ್ಣು ಕೆಲ ಖನಿಜಾಂಶಗಳು ಹಾಗೂ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಶೇಕಡಾ 27 ರಷ್ಟು ಶರ್ಕರಪಿಷ್ಟವನ್ನು ಹೊಂದಿದ್ದು ಶಕ್ತಿಯ ಆಗರವಾಗಿದೆ. ಬಾಳೆ ಹಣ್ಣಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೆಲೆಯೂ ಕೂಡ ಹೆಚ್ಚಾಗಿದೆ. ನೀವು ಈ ಬಾಳೆಯ ಕೃಷಿಯನ್ನು ಆಧುನಿಕ ತಂತ್ರಜ್ಞವನ್ನು ಅಳವಡಿಸಿಕೊಂಡು ಕೃಷಿ ಮಾಡಿದ್ದೆ ಆದಲ್ಲಿ ಉತ್ತಮ ಆದಾಯ ಗಳಿಸಬಹದು.