ಹಿಂದೂ ಧರ್ಮ ಸನಾತನ ಧರ್ಮ ಹಿಂದೂಗಳು ಅನೇಕ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿ ಹಾಗೂ ಸಂಪ್ರದಾಯಬದ್ಧ ಆಚರಣೆಗಳಿವೆ. ಪ್ರತಿಯೊಂದು ಒಂದಕ್ಕಿಂತ ಒಂದು ಭಿನ್ನ ಮತ್ತು ವಿಶಿಷ್ಟ. ಅವುಗಳನ್ನ ಕೇಳಲು ಹಾಗೂ ನೋಡಲು ಆಶ್ಚರ್ಯವಾಗುತ್ತದೆ. ಆದರೆ ಅದರ ಹಿಂದೆ ಅನೇಕ ಹಿನ್ನೆಲೆಗಳು ಕಥೆ, ಪುರಾಣಗಳು ರಚನೆಯಾಗಿವೆ. ದೇವರಿಗಾಗಿ ಮಾಡುವ ಈ ಕೆಲವು ಪದ್ಧತಿಗಳು ಮಾನವನ ಜೀವನದಲ್ಲಿ ಬದಲಾವಣೆ ಹಾಗೂ ಶ್ರೇಯಸ್ಸನ್ನು ತಂದುಕೊಡುತ್ತದೆ ಎಂಬ ಪವಿತ್ರ ನಂಬಿಕೆ ಇರುವುದು ವಿಶೇಷ. ಹಾಗೇ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಮುಡಿ ನೀಡುವುದರ ಹಿಂದೆ ಪ್ರಸಿದ್ಧ ಕಥೆ ಇದೆ. ಈ ಪವಿತ್ರ ಕ್ಷೇತ್ರದಲ್ಲಿ ಭಕ್ತಾದಿಗಳು ತಮ್ಮ ಅಂದದ ಸಂಕೇತವಾದ ಕೂದಲನ್ನು ಏಕೆ ನೀಡುತ್ತಾರೆ ಎಂಬುದನ್ನ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ದಕ್ಷಿಣಭಾರತದಲ್ಲಿರುವ ಪ್ರತಿಯೊಂದು ದೇವಾಲಯ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳಲ್ಲಿ ನಮ್ಮ ಕರ್ನಾಟಕದ ನೆರೆಯ ರಾಜ್ಯವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿಯ ತಿರುಮಲ ಬೆಟ್ಟದ ಮೇಲೆ ನೆಲೆಸಿ ಭಕ್ತರ ಉದ್ಧಾರ ಮಾಡುತ್ತಿರುವ ದಯಾಮಯಿ, ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿ ತಿಮ್ಮಪ್ಪ. ಇದು ಅತಿ ಪ್ರಾಚೀನ ದೇವಾಲಯವಾಗಿದ್ದು ಕೇರಳದ ಪದ್ಮನಾಭ ಸ್ವಾಮಿ ದೇವಾಲಯದ ನಂತರ ಭಾರತದಲ್ಲೇ ಎರಡನೇ ಶ್ರೀಮಂತ ದೇವಾಲಯವಾಗಿದೆ. ಪ್ರಪಂಚದಲ್ಲೇ ಅತಿಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಯಾತ್ರಾಸ್ಥಳ. ಇಲ್ಲಿ ಶ್ರೀದೇವಿ ಭೂದೇವಿ ಸಮೇತರಾಗಿ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾನೆ.
ತಿರುಪತಿ ತಿರುಮಲ ಕ್ಷೇತ್ರದಲ್ಲಿ ಮುಡಿ ನೀಡುವುದರ ಹಿಂದೆ ಒಂದು ವಿಶೇಷ ಕಥೆಯಿದೆ. ತಿರುಪತಿ ಶ್ರೀನಿವಾಸ ದೇವರ ಮೂರ್ತಿಯನ್ನು ಯಾರು ಸಹ ಸ್ಥಾಪನೆ ಮಾಡಿರುವುದಿಲ್ಲ ಅದು ಸ್ವಯಂ ಉದ್ಭವ ಮೂರ್ತಿ. ತಿರುಮಲ ಬೆಟ್ಟದಲ್ಲಿರುವ ಒಂದು ಹುತ್ತದೊಳಗೆ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದರು. ಅಲ್ಲಿಗೆ ದಿನನಿತ್ಯ ಕಾಮಧೇನು ಎಂಬ ಹಸುವೊಂದು ಬಂದು ಹಾಲನ್ನು ಎರೆಯುತಿತ್ತು. ಶಿವನು ಹಸುವಿನ ರೂಪದಲ್ಲಿ ಬರುತ್ತಿದ್ದ ಎಂದು ಹೇಳಲಾಗುವುದು. ಆ ಹಸು ರಾಜ ಚೋಳ ಅರಸನ ಹಸುಗಳಲ್ಲಿ ಒಂದಾಗಿತ್ತು. ಅಲ್ಲಿರುವ ಹಸುಗಳನ್ನ ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿತ್ತು.
ಆ ಗೊಲ್ಲ ಗಮನಿಸಿದಂತೆ ಕಾಮಧೇನು ಎಂಬ ಹಸು ಪ್ರತಿದಿನ ಹಾಲನ್ನು ನೀಡುತ್ತಿರಲಿಲ್ಲ. ಆ ಹಸು ಹಾಲನ್ನು ನೀಡದಿರುವುದಕ್ಕೆ ಆತನಿಗೆ ಅನುಮಾನ ಬಂದು ಹಸುವನ್ನು ಹಿಂಬಾಲಿಸಿ ಬಂದನು ಆಗ ಆತನ ಕಣ್ಣಿಗೆ ಹಸು ಹುತ್ತದ ಬಳಿ ಹಾಲನ್ನು ಎರೆಯುತಿತ್ತು. ಇದನ್ನು ನೋಡಿ ಆಶ್ಚರ್ಯ ಹಾಗೂ ಕೋಪದಿಂದ ತನ್ನ ಕೈಲಿದ್ದ ಕೊಡಲಿಯಿಂದ ಹಸುವನ್ನು ಹೊಡೆಯಲು ಮುಂದಾದನು. ಆಗ ಹಸುವಿಗೆ ಬೀಳಬೇಕಿದ್ದ ಏಟು ತಪ್ಪಿ ಹುತ್ತದ ಒಳಗಿದ್ದ ಶ್ರೀನಿವಾಸನ ತಲೆಗೆ ತಗುಲಿತ್ತು.
ಕೊಡಲಿ ತಾಗಿರುವ ತಲೆಯ ಭಾಗದ ಕೂದಲು ಕಿತ್ತು ಹೋಯಿತು. ನಂತರ ಶ್ರೀನಿವಾಸನ ಪರಮ ಭಕ್ತೆ ನೀಲಾದೇವಿಯು ತನ್ನ ಮುಡಿಯನ್ನು ಕತ್ತರಿಸಿ ಶ್ರೀನಿವಾಸನಿಗೆ ನೀಡಿದಳು. ಆಗ ನೀಲಾದೇವಿಯ ಭಕ್ತಿ ಹಾಗೂ ಕಾರ್ಯಕ್ಕೆ ಮೆಚ್ಚಿದ ದೇವನು ಆಕೆಗೆ ವರ ನೀಡಿದನು. ಕಲಿಯುಗದಲ್ಲಿ ತನ್ನ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ತಮ್ಮ ಮುಡಿಯನ್ನ ನೀಡುತ್ತಾರೆ. ಆ ಮುಡಿಯು ನಿನಗೆ ಅರ್ಪಣೆ ಆಗಲಿ ಎಂದು ಹೇಳಿದನು. ಈ ಹಿನ್ನಲೆಯಲ್ಲಿ ಭಕ್ತರು ಈಗಲು ಕೂಡ ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸುತ್ತಾರೆ.
ಮುಡಿ ನೀಡುವುದರ ಹಿಂದೆ ಆಧ್ಯಾತ್ಮಿಕ ಕಾರಣಗಳು ಸಹ ಇವೆ. ಮಾನವನಿಗೆ ಹುಟ್ಟಿನೊಂದಿಗೆ ನೈಸರ್ಗಿಕವಾಗಿ ಬಂದಿರುವ ಕೂದಲು ಸೌಂದರ್ಯ ಎನಿಸಿಕೊಳ್ಳುತ್ತದೆ. ಸೌಂದರ್ಯದಲ್ಲಿ ಕುಂದುಟಾಗುವುದು ಮಾನವನಿಗೆ ಇಷ್ಟವಿಲ್ಲದ ಸಂಗತಿಯಾಗಿದೆ. ಕೂದಲು ಬೋಳಿಸಿದರೆ ಸೌಂದರ್ಯ ಹಾಳಾಗುವುದು ಎಂಬುದು ಎಲ್ಲರ ಮನಸ್ಸಿನಲ್ಲಿರುವ ಸತ್ಯ. ಕೂದಲನ್ನು ಅಹಂನ ಸಂಕೇತ ಎಂದು ಹೇಳಲಾಗುವುದು. ಸಾಮಾನ್ಯವಾಗಿ ವ್ಯಕ್ತಿಯು ಕೂದಲನ್ನು ಕತ್ತರಿಸಲು ಇಷ್ಟ ಪಡುವುದಿಲ್ಲ. ಹಾಗೇನಾದ್ರೂ ಮಾಡಿದರೆ ಅದರ ಹಿಂದೆ ಬಲವಾದ ಕಾರಣವಿರುತ್ತದೆ.
ಕೂದಲು ಕತ್ತರಿಸುವ ಸ್ಥಳವನ್ನು ಕಲ್ಯಾಣ ಘಟ್ಟ ಎಂದು ಕರೆಯುತ್ತಾರೆ. ಕೂದಲು ನೀಡುವುದು ಅಹಂಕಾರವನ್ನು ತೊರೆಯುವ ಮತ್ತು ತ್ಯಾಗ ಮಾಡುವ ಒಂದು ಪರಿ ಮತ್ತು ಸಮರ್ಪಣೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ತಿರುಪತಿಯಲ್ಲಿ ಕೂದಲನ್ನು ತೆಗೆಯುವುದು ಎಂದರೆ ವ್ಯಕ್ತಿ ತನ್ನ ಅಹಂ ಮತ್ತು ಅಹಂಕಾರವನ್ನು ತೊರೆದು ದೇವರಿಗೆ ಶರಣಾಗುವುದು ಎನ್ನುವ ಸಂದೇಶವನ್ನು ನೀಡುತ್ತದೆ. ಇದಿಷ್ಟು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದೇವರಿಗೆ ಮುಡಿಕೊಡುವ ಹಿಂದಿರುವ ಕಥೆಯಾಗಿದೆ.