ಮನುಷ್ಯ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲಗಳಿಗೆ ಅನುಗುಣವಾಗಿ ಈ ಜನ್ಮದಲ್ಲಿ ಎಲ್ಲಾ ಬಗೆಯ ಕಷ್ಟ, ಸುಖ,ಸಂತೋಷ, ನೆಮ್ಮದಿಯನ್ನು ಅನುಭವಿಸುತ್ತಾನೆ ಎಂಬುದು ನಮ್ಮ ಹಿಂದೂಗಳ ನಂಬಿಕೆಯಾಗಿದೆ. ಗೊತ್ತಿದ್ದೂ ಗೊತ್ತಿಲ್ಲದೇ ಮಾಡಿದ ಅಪರಾಧಗಳನ್ನು ಕ್ಷಮಿಸುವಂತೆ ಸರ್ವಶಕ್ತನಾದ ದೇವನ ಮೊರೆಹೋಗುತ್ತಾರೆ ಭಕ್ತರು. ಈ ಭೂಲೋಕದಲ್ಲಿ ಮೂರ್ತಿ ರೂಪದಲ್ಲಿ ಗುಡಿ ಗೋಪುರಗಳಲ್ಲಿ ನೆಲೆ ನಿಂತಿರುವ ದೇವ ನಮ್ಮೆಲ್ಲರ ಕಷ್ಟಗಳಿಗೆ ಹಸನ್ಮುಖಿಯಾಗಿ ಪರಿಹಾರವನ್ನು ನೀಡುತ್ತಿದ್ದಾನೆ.

ಸಾವಿರಾರು ವರ್ಷಗಳ ಚರಿತ್ರೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ದೇವಾಲಯವಿದೆ. ಅವುಗಳಲ್ಲಿ ಕೆಲವು ದೇವಾಲಯಗಳನ್ನು ಭಕ್ತಾಧಿಗಳು ಅಥವಾ ರಾಜ ವಂಶಸ್ಥರು ನಿರ್ಮಿಸಿದರೆ ಮತ್ತೆ ಕೆಲವು ದೇವಾಲಯಗಳಲ್ಲಿ ದೇವರೇ ಸ್ವಯಂಭು ಆಗಿ ನೆಲೆ ನಿಂತಿದ್ದಾರೆ. ಹಾಗೇ ಸ್ವಯಂಭು ಆಗಿ ನೆಲೆ ನಿಂತಿರುವ ದೇವಾಲಯಗಳಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕೂಡ ಒಂದು. ಈ ದೇವಾಲಯ ಕುಮಾರ ಧಾರ ನದಿ ತೀರದಲ್ಲಿದೆ. ಈ ಲೇಖನದಲ್ಲಿ ಸರ್ಪದೋಷ ನಿವಾರಣೆಯ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ನೀಡಲಾಗಿದೆ.

ಪರಶುರಾಮನ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಸುಬ್ರಹ್ಮಣ್ಯ ದೇವಸ್ಥಾನವು ಕುಮಾರಧಾರ ನದಿ ತೀರದಲ್ಲಿದೆ. ಕುಕ್ಕೆ ಕ್ಷೇತ್ರದಲ್ಲಿ ಶಿವ ಪುತ್ರನಾದ ಸುಬ್ರಹ್ಮಣ್ಯ ಸ್ವಾಮಿ ಮತ್ತು ಸರ್ಪಗಳ ರಾಜ ವಾಸುಕಿಯ ಆವಾಸ ಸ್ಥಾನವಾಗಿದೆ. ಹಿಂದೂ ಪುರಾಣದ ಪ್ರಕಾರ ಮತ್ತೊಂದು ನಾಗನಾದ ಆದಿಶೇಷನ ಮೂರ್ತಿಯನ್ನು ಸಹ ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯವು ಸುಂದರವಾದ ಕುಮಾರ ಪರ್ವತವನ್ನು ಹಿನ್ನೆಲೆಯಾಗಿ ಹೊಂದಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹತ್ತಿರದಲ್ಲೇ ಆದಿ ಸುಬ್ರಹ್ಮಣ್ಯ ದೇವಸ್ಥಾನವಿದೆ. ಈ ಸ್ಥಳವು ಬ್ರಹ್ಮನ ನೆಲೆಯಾಗಿತ್ತೆಂದು ಯಮನ ಶಾಪದಿಂದ ತನ್ನ ಪ್ರಾಮುಖ್ಯತೆ ಕಳೆದುಕೊಂಡಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಅನಾದಿ ಕಾಲದಿಂದಲೂ ವಾಲ್ಮೀಕಿ ಎಂಬ ಹುತ್ತವನ್ನು ಪೂಜಿಸಿಕೊಂಡು ಬರಲಾಗುತ್ತಿದೆ. ಈ ಹುತ್ತ ನಾಗ ದೇವತೆಗಳ ಆವಾಸ ಸ್ಥಾನ ಎನ್ನಲಾಗುತ್ತದೆ. ಈ ಹುತ್ತದ ಮಣ್ಣನ್ನು ಭಕ್ತಾಧಿಗಳಿಗೆ ಮೃತ್ತಿಕಾ ಪ್ರಸಾದವೆಂದು ನೀಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಚರ್ಮ ಸಮಸ್ಯೆಯು ದೂರವಾಗುತ್ತದೆ.

ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಭಕ್ತರು ಪ್ರತಿದಿನ ಬೆಳಿಗ್ಗೆ ಆರರಿಂದ ಮಧ್ಯಾಹ್ನ ಒಂದು ಮೂವತ್ತರ ವರೆಗೆ ಹಾಗೂ ಸಾಯಂಕಾಲ ಮೂರು ಮೂವತ್ತರಿಂದ ಸಂಜೆ ಎಂಟು ಮೂವತ್ತರ ವರೆಗೆ ದರ್ಶನ ಪಡೆಯಬಹುದಾಗಿದೆ. ಭಕ್ತಾಧಿಗಳು ಶ್ರೀ ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಹಾಲು ಪಾಯಸ ಸೇವೆ, ನಂದಾದೀಪ ಸೇವೆ, ರಂಗಪೂಜೆ, ಅಷ್ಟೋತ್ತರ ಅರ್ಚನೆ, ಸರ್ಪ ಸಂಸ್ಕಾರ ಯಾಗ ಮತ್ತು ಆಶ್ಲೇಷ ಬಲಿ ಪೂಜೆ ಸೇವೆಗಳನ್ನು ಸಲ್ಲಿಸಬಹುದಾಗಿದೆ. ಇಲ್ಲಿ ಬರುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ.

ಜಾತಕಗಳಲ್ಲಿ ಸರ್ಪದೋಷ, ಕಾಳ ಸರ್ಪದೋಷವಿದ್ದರೆ ಅಂತಹವರಿಗೆ ಮಾನಸಿಕ ತೊಂದರೆ, ವಿವಾಹ ವಿಳಂಬ, ಸಂತಾನ ಸಮಸ್ಯೆ, ಉದ್ಯೋಗದಲ್ಲಿ ಅಸಮಾಧಾನ, ಕೌಟುಂಬಿಕ ಕಲಹ, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಇಂತಹ ಹಲವಾರು ಸಮಸ್ಯೆಗಳಿಗೆ ಈ ಕ್ಷೇತ್ರದಲ್ಲಿ ಸೇವೆ ಮಾಡುವುದರಿಂದ ಪರಿಹಾರ ದೊರೆಯುತ್ತದೆ. ಸಕಲವೂ ಒಳ್ಳೆಯದಾಗುತ್ತದೆ. ಕುಮಾರಧಾರ ನದಿಯ ಸ್ನಾನದಿಂದ ಮತ್ತು ಇಲ್ಲಿ ಮಡೆಸ್ನಾನ ಮಾಡುವುದರಿಂದ ಕುಷ್ಠರೋಗ ಸಹ ಶಮನವಾಗುತ್ತದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಪಡೆದು ನಮ್ಮ ಕೈಲಾದ ಸೇವೆಯನ್ನು ಭಕ್ತಿಯಿಂದ ಸಲ್ಲಿಸಿ ಶ್ರೀ ದೇವರ ಕೃಪಾ ಕಟಾಕ್ಷ ಪಡೆದು ನಮ್ಮ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!