ಹೆಣ್ಣು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸುತ್ತಾಳೆ ಎಂಬ ಮಾತಿದೆ. ಎಲ್ಲವೂ ಸೌಕರ್ಯವಿದ್ದು ಸಾಧನೆ ಮಾಡಿದವರಿಗಿಂತ ಏನು ಇಲ್ಲದೆ ಸಾಧನೆ ಮಾಡಿದವರ ಜೀವನ ಮಾದರಿಯಾಗಿರುತ್ತದೆ. ಬಡಕುಟುಂಬದಿಂದ ಬಂದು ಸಾಧನೆ ಮಾಡಿದ ಹೆಣ್ಣುಮಕ್ಕಳು ಬಹಳಷ್ಟು ಜನರಿದ್ದಾರೆ. ಬಡ ಕುಟುಂಬದಿಂದ ಬಂದು ಉನ್ನತ ಹುದ್ದೆ ಪಿಎಸ್ ಐ ಗೆ ಆಯ್ಕೆಯಾದ ಯುವತಿಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಮುಗಳಖೋಡ ಪಟ್ಟಣದ ಬಡ ಕುಟುಂಬದ ಯುವತಿ ಪ್ರೀತಿ ಮಲ್ಲಪ್ಪ ಬಾಳೋಜಿ ಎಂಬುವವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಬೇಕೆಂದು ಓದುತ್ತಿದ್ದರು. ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 25 ನೇ ರ್ಯಾಂಕ್ ಪಡೆದು ಪಿಎಸ್ ಐ ನೌಕರಿಗೆ ಆಯ್ಕೆಯಾಗಿದ್ದಾರೆ. ಪ್ರೀತಿ ಅವರು ತಮ್ಮ ಊರಿನಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಾ, ಮನೆ ಕೃಷಿ ಕೆಲಸ ಮಾಡುತ್ತಾ ಓದಿ ಸಾಧನೆ ತೋರಿ ಗಮನ ಸೆಳೆದಿದ್ದಾರೆ. 25 ವರ್ಷ ವಯಸ್ಸಿನ ಪ್ರೀತಿ ಈಗಾಗಲೆ ಎರಡು ಬಾರಿ ಪರೀಕ್ಷೆ ಬರೆದು ಸಿವಿಲ್ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದರು ಆದರೆ ಅವರು ತಮ್ಮ ಹೆಜ್ಜೆಯನ್ನು ಮುಂದೆ ಇಡಬೇಕೆಂದು ಅವರು ಪೊಲೀಸ್ ಕಾನ್ಸಟೇಬಲ್ ಹುದ್ದೆಯನ್ನು ನಿರಾಕರಿಸಿದರು.
ನಂತರ ಅವರು ಉನ್ನತ ಹುದ್ದೆ ಪಿಎಸ್ ಐ ಹುದ್ದೆಯನ್ನು ಪಡೆಯಬೇಕೆಂದು ಹಠದಿಂದ ಧಾರವಾಡದಲ್ಲಿದ್ದುಕೊಂಡು ಓದಿ ಕಷ್ಟ ಪಟ್ಟು ಪರೀಕ್ಷೆಯನ್ನು ಪಾಸು ಮಾಡಿದರು. ಪ್ರೀತಿ ಅವರ ಸ್ವಂತ ಊರು ಮುಗಳಖೋಡ ಆದರೆ ಅವರು ಅವರ ಅಜ್ಜಿ ಶಾಂತವ್ವ ಲಕ್ಕಪ್ಪ ಪಾಟೀಲ ಅವರ ಆಶ್ರಯದಲ್ಲಿ ಅಜ್ಜಿ ಊರಾದ ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದಲ್ಲಿ ಪ್ರೀತಿ ವಾಸವಾಗಿದ್ದರು. ಪ್ರಾಥಮಿಕ ಶಿಕ್ಷಣವನ್ನು ಅಜ್ಜಿಯ ಜೊತೆ ಇದ್ದು ಅವರ ಊರಿನಲ್ಲಿ ಪಡೆದಿದ್ದಾರೆ. ಸಂಕ್ರಟ್ಟಿ ಎಂಬ ಗ್ರಾಮದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು ನಂತರ ಎಸ್ಎಂಎಸ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಶಿಕ್ಷಣ ಓದಿದರು. ನಂತರ ಜಮಖಂಡಿಯ ಬಿಎಲ್ ಡಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.
ಸಣ್ಣ ಗ್ರಾಮದಲ್ಲಿ ವಾಸವಾಗಿದ್ದು ಸಾಧನೆ ಮಾಡಿದ ಪ್ರೀತಿ ತನ್ನ ತಂದೆ ತಾಯಿ, ಅಜ್ಜಿ ಶಾಂತವ್ವ ಹಾಗೂ ಸೋದರ ಮಾವನ ಮಾರ್ಗದರ್ಶನ ಹಾಗೂ ಸತತ ಅಧ್ಯಯನದಿಂದ ನನ್ನ ಕನಸು ನನಸಾಗಿದೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಸಾಧನೆ ಮಾಡುವವರಿಗೆ ಯಾವ ಕಷ್ಟ ಬಂದರೂ ಎದುರಿಸುತ್ತಾರೆ ಎನ್ನುವುದಕ್ಕೆ ಪ್ರೀತಿ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ಪ್ರೀತಿ ಅವರಂತೆ ಕಠಿಣ ಪರಿಶ್ರಮದಿಂದ ಓದಿದರೆ ಏನನ್ನಾದರೂ ಸಾಧಿಸಬಹುದು ಜೊತೆಗೆ ತಾಳ್ಮೆಯು ಮುಖ್ಯವಾಗಿದೆ. ಓದುವವರಿಗೆ ನಮಗೆ ಆದಷ್ಟು ಸಹಾಯ ಮಾಡಬೇಕು ಅವರಿಗೆ ಓದಲು ವಾತಾವರಣ ಕಲ್ಪಿಸಿ ಕೊಡಬೇಕು, ಬದಲಿಗೆ ಅವರನ್ನು ಹೀಯಾಳಿಸಬಾರದು. ಪ್ರೀತಿ ಅವರ ಜೀವನ ಇಂದಿನ ಹೆಣ್ಣುಮಕ್ಕಳಿಗೆ ಮಾದರಿಯಾಗಿದೆ.