ನಿಮಗೆಲ್ಲ ಗೊತ್ತಿರುವ ಹಾಗೆ ರೋಗ ಇಲ್ಲದ ತೆಂಗಿನ ತೋಟಗಳು ಸಿಗುವುದೇ ಅಪರೂಪ. ಒಂದಲ್ಲ ಒಂದು ಕಾಯಿಲೆಗಳು ತೆಂಗನ್ನು ಕಾಡುತ್ತಲೇ ಇರುತ್ತವೆ, ಕೊನೆಗೆ ಯಾವ ರೋಗವೂ ಇಲ್ಲವೆಂದರೆ ಕಾಂಡಕೊರಕ ಹುಳವಾದರೂ ತೊಂದರೆ ಕೊಡುತ್ತಿರುತ್ತದೆ. ಹಾಗೆಯೇ ಇತರ ತೋಟಗಳಿಗಿಂತ ತೆಂಗಿನ ತೋಟ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿರುತ್ತದೆ ಎಂಬುದು ಕೂಡ ಸತ್ಯ. ಹೆಂಗೊ ಬೆಳೆಯುತ್ತೆ ಬಿಡು ಅಂತ ನಾಟಿ ಮಾಡಿ ಮರೆತುಬಿಟ್ಟಿರುತ್ತಾರೆ.
ಕೆಲವರಿಗಂತೂ ತಿಂಗಳಿಗೆರಡು ಸಲ ನೀರು ಕೊಡುವುದು ಕಷ್ಟದ ಕೆಲಸವಾಗಿರುತ್ತದೆ. ಅಂಥವರೆಲ್ಲ ತೆಂಗು ತೋಟ ಮಾಡದಿರುವುದೇ ಒಳ್ಳೆಯದು. ಮನುಷ್ಯರಾಗಲಿ, ಮರವಾಗಲಿ ರೋಗ ಬರಲು ಮುಖ್ಯ ಕಾರಣ ಆಹಾರ, ನೀರು, ವಾತಾವರಣ. ಈ ಲೇಖನದಲ್ಲಿ ನಾವು ರೋಗಗಳಿಗೆ ಕಡಿವಾಣ ಹಾಕಿ ತೆಂಗಿನ ಕಾಯಿಗಳನ್ನು ಹೆಚ್ಚೆಚ್ಚು ಬೆಳೆಯುವ ಪದ್ಧತಿ ಹೇಗೆ? ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
ಬಹುವಾರ್ಷಿಕ ಬೆಳೆಯಾದ ತೆಂಗಿನ ಸಸಿ ನೆಡುವಾಗ ಉತ್ತಮ ತಳಿಯ ಬೀಜದಿಂದ ಸಿದ್ಧಪಡಿಸಿದ ತೆಂಗಿನ ಸಸಿಯನ್ನು ನಾಟಿ ಮಾಡಬೇಕು. ಆದರೆ ಇದಕ್ಕೆ ಯಾವಾಗ ಪೋಷಕಾಂಶಗಳು ಕಮ್ಮಿಯಾಗುತ್ತವೋ ಆಗ ಕಾಯಿಲೆ ಕಟ್ಟಿಟ್ಟ ಬುತ್ತಿ. ಬೇಗ ಜಾಗೃತರಾದರೆ ಕಮ್ಮಿಯಾದ ಆ ಪೋಷಕಾಂಶಗಳನ್ನು ಕೊಡುವ ಮೂಲಕ ಮತ್ತೆ ಮೊದಲಿನಂತೆ ಮಾಡಬಹುದು. ನಿರ್ಲಕ್ಷ್ಯ ವಹಿಸಿದರೆ ತೊಂದರೆ ಆಗುವುದಂತೂ ಖಂಡಿತ.
ಬಹುತೇಕ ಎಲ್ಲರ ತೆಂಗಿನ ತೋಟಗಳಲ್ಲಿ ಹರಳು ಉದುರುವ ಸಮಸ್ಯೆ ಇದ್ದೇ ಇರುತ್ತದೆ. ನುಶಿರೋಗ, ಕಾಯಿಗಳು ಬೆಳೆಯದೇ ಇರುವುದು, ವಿಕಾರವಾಗಿ ಬೆಳೆಯುವುದು ಹೀಗೆ ಏನೇನೋ ಸಮಸ್ಯೆ ಸಾಕಷ್ಟು ತೋಟಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಹರಳು ಉದುರುವ ಸಮಸ್ಯೆಯಂತೂ ತೋಟ ಅಷ್ಟೇ ಅಲ್ಲ, ಮನೆ ಮುಂದೆ ನೆಟ್ಟಿರೋ ಗಿಡದಲ್ಲೂ ಇರುತ್ತೆ.
ಈ ಸಮಸ್ಯೆಗೆ ಮುಖ್ಯ ಕಾರಣ ಏನೂ ಎಂದು ನೋಡುವುದಾದರೆ, ನೀರಿನ ಹಾಗೂ ಪೋಷಕಾಂಶಗಳ ಕೊರತೆ. ಇವೆರಡನ್ನು ತುಂಬಾ ಜನ ಗಂಭೀರವಾಗಿ ತಗೆದುಕೊಳ್ಳುವುದಿಲ್ಲ, ಆದರೆ ಅಂಥವರು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಅವರ ಗಿಡದ ಅರ್ದಕ್ಕರ್ದ ಕಾಯಿಗಳು ಹೀಗೆ ಉದುರಿಯೇ ಹಾಳಾಗುವುದರಿಂದ ಅವರ ಆದಾಯಕ್ಕೆ ಅರ್ದ ಕತ್ತರಿ ಇದೊಂದರಿಂದಲೇ ಬೀಳುತ್ತೆ ಎಂದು.
ನೀರಿನ ಕೊರತೆಯನ್ನಂತೂ ಹೇಗೆ ನಿವಾರಿಸಬೇಕು ಅಂತ ನಿಮಗೆ ಗೊತ್ತಿದೆ. ಇನ್ನು ಪೋಷಕಾಂಶಗಳ ಕೊರತೆಯನ್ನು ನಿಭಾಯಿಸುವ ಸಲುವಾಗಿ ಹಲವರು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವರು ಸಂಪೂರ್ಣ ಸಾವಯವ ಮಾರ್ಗ ತುಳಿದರೆ, ಮತ್ತೆ ಕೆಲವರು ಸಂಪೂರ್ಣ ರಾಸಾಯನಿಕ ಸುರಿಯುತ್ತಾರೆ. ಇನ್ನೂ ಕೆಲವರು ಎರಡನ್ನೂ ಸ್ವಲ್ಪ ಸ್ವಲ್ಪ ಪಾಲಿಸುತ್ತಾರೆ. ಮೊದಲಿನಿಂದಲೂ ಸಾವಯವದಲ್ಲಿ ಬೆಳೆದ ತೋಟಕ್ಕೆ ಸಂಪೂರ್ಣ ಸಾವಯವ ಚಿಕಿತ್ಸೆಯೇ ಬೆಸ್ಟ್. ರಾಸಾಯನಿಕ ಉಪಾಯ ಖರ್ಚುದಾಯಕ ಹಾಗೂ ನಿರಂತರ ಮಾಡುತ್ತಿರಬೇಕು.
ಇನ್ನು ಎರಡನ್ನೂ ಪಾಲಿಸುವುದು ಸರಿಯಾದ ಮಾರ್ಗವಲ್ಲ. ಹಾಗಾದರೆ ಹೆಚ್ಚೆಚ್ಚು ತೆಂಗಿನ ಕಾಯಿ ಬೆಳೆಯಲು ನಾವೇನು ಮಾಡಬಹುದು? ಎಂದು ನೋಡೋಣ. ತೆಂಗಿನ ಇಳುವರಿಯನ್ನು ಹೆಚ್ಚು ಮಾಡುವ ಹಂತಗಳನ್ನು ಸಂಕ್ಷಿಪ್ತವಾಗಿ ನಾವಿಲ್ಲಿ ನೋಡೋಣ. ತೆಂಗಿನ ಮರಕ್ಕೆ ತಾಯಿ ಬೇರು ಇರುವುದಿಲ್ಲ ಹಾಗಾಗಿ ತೆಂಗಿನ ಮರದ ಬೇರುಗಳು ಯಾವಾಗಲೂ ಕಣ್ಣಿಗೆ ಕಾಣುವ ಹಾಗೇ ಮೇಲ್ಭಾಗದಲ್ಲಿ ಇರುತ್ತವೆ.
ಹಾಗಾಗಿ ತೆಂಗಿನ ಮಾತಾಡ ಸುತ್ತಲಿನ ಮಣ್ಣನ್ನು ಸಡಿಲಗೊಳಿಸಬೇಕು. ಹೀಗೇ ಮಾಡುವಾಗ ಒಂದರಿಂದ ಎರಡು ವರ್ಷದ ತೆಂಗಿನ ಗಿಡ ಇದ್ದರೆ ಎರಡರಿಂದ ಮೂರು ಅಡಿಗಳಷ್ಟು ಮಣ್ಣನ್ನು ಸಡಿಲಗೊಳಿಸಬೇಕು. ಒಂದುವೇಳೆ ಮೂರು ವರ್ಷಕ್ಕೆ ಮೇಲ್ಪಟ್ಟ ಇದ್ದರೆ ನಾಲ್ಕು ಅಡಿಗಳಷ್ಟು ಮಣ್ಣನ್ನು ಸಡಿಲಗೊಳಿಸಬೇಕು. ಇದರಿಂದ ಸರಿಯಾಗಿ ಗಾಳಿ ನೀರು ದೊರೆಯುತ್ತದೆ.
ತೆಂಗಿನ ಮರದ ಬೇರುಗಳು ಸರಿಸುಮಾರು ಮೂರರಿಂದ ನಾಲ್ಕು ಅಡಿ ಇರುತ್ತವೆ. ಹಾಗಾಗಿ ಇವುಗಳಿಗೆ ಸರಿಯಾದ ಗೊಬ್ಬರ ನೀರು ನೀಡಲು ಹೀಗೇ ಮಣ್ಣನ್ನು ಸಡಿಲಗೊಳಿಸಿಕೊಳ್ಳಬೇಕು. ನಂತರ ಸುತ್ತ ಮುತ್ತಲೂ ಸಿಗುವ ಗೊಬ್ಬರ ಇವುಗಳಿಂದ ಅದನ್ನು ಮುಚ್ಚಬೇಕು. ಹೀಗೆ ಮಾಡುವುದರಿಂದ ಗಿಡ ತೇವಾಂಶದಿಂದ ಕೂಡಿರುತ್ತದೆ. ನಂತರ ಒಂದರಿಂದ ಎರಡೂ ಕೆಜಿ ಅಷ್ಟು ಅಡಿಗೆ ಉಪ್ಪನ್ನು ಗಿಡದ ಸುತ್ತಲೂ ಹಾಕಬೇಕಾಗುತ್ತದೆ.
ಇದರಿಂದ ಗಿಡ ಸಮೃದ್ಧವಾಗಿ ಬೆಳೆಯುತ್ತದೆ ಮತ್ತು ತೆಂಗಿನ ಕಾಯಿ ಕೂಡಾ ಹೆಚ್ಚಾಗಿ ಬೆಳೆಯುತ್ತದೆ. ಹಾಗೇ ಹಸುವಿನ ಸಗಣಿಯ ಗೊಬ್ಬರವನ್ನು ಸಹ ಸುಮಾರು ನಾಲ್ಕು ಅಡಿಗಳಷ್ಟು ಬಳಕೆ ಮಾಡಬೇಕು. ಇದರಿಂದ ಕಾಯಿಗಳು ಸಹ ದೊಡ್ಡದಾಗಿ ಬೆಳೆಯುತ್ತವೆ. ನೀರಿನ ನಿರ್ವಹಣೆ ಕೂಡಾ ಬಹಳ ಮುಖ್ಯವಾಗಿರುತ್ತದೆ. ನಾಲ್ಕರಿಂದ ಎಂಟು ದಿನಗಳ ಅಂತರದಲ್ಲಿ ನೀರನ್ನು ನೀಡಬೇಕು. ಆದರೆ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಈ ಎಲ್ಲಾ ವಿಧಾನಗಳನ್ನು ಸರಿಯಾಗಿ ಪಾಲಿಸಿದರೆ ತೆಂಗು ಇಳುವರಿಯಲ್ಲಿ ಹೆಚ್ಚು ಲಾಭ ಪಡೆಯಬಹುದು.