ಮಹಿಳೆಯರು ಪುರುಷರಿಗೆ ಸಮಾನವಾಗಿ ಎಲ್ಲಾ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ, ಕೆಲಸ ಮಾಡುವುದಷ್ಟೇ ಅಲ್ಲದೆ ಮಾದರಿಯಾಗಿದ್ದಾರೆ. ಅಂಥವರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಲ್ಪಾ ಪ್ರಭಾಕರ್ ಅವರು ಕೂಡ ಒಬ್ಬರು. ಶಿಲ್ಪಾ ಅವರು ಕರ್ನಾಟಕದ ಹಿಂದುಳಿದ ಜಿಲ್ಲೆಯವರಾಗಿದ್ದು ಇಂದು ತಮಿಳುನಾಡು ರಾಜ್ಯದ ಜಿಲ್ಲಾಧಿಕಾರಿಯಾಗಿ ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿ ಅನೇಕ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಶಿಲ್ಪಾ ಪ್ರಭಾಕರ್ ಅವರ ಬಗ್ಗೆ ಹಾಗೂ ಅವರು ಮಾಡಿದ ಜನಪರ ಕೆಲಸಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯ ನಿವಾಸಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್​ ಅವರ ಪುತ್ರಿ ಇದೀಗ ತಮಿಳುನಾಡು ಸಿಎಂ ಅವರ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಶಿಲ್ಪಾ ಅವರು 1981 ಆಗಸ್ಟ್ 31 ರಂದು ಗೌರಿಬಿದನೂರು ನಗರದಲ್ಲಿ ಜನಿಸಿದ್ದಾರೆ. ಶಿಲ್ಪಾ ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮತ್ತು ಪದವಿಪೂರ್ವ ಶಿಕ್ಷಣವನ್ನು ನ್ಯಾಷನಲ್ ಕಾಲೇಜ್​ನಲ್ಲಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಹೋಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲ್ಎಲ್ ಬಿ ಪದವಿ ಪಡೆದುಕೊಂಡಿದ್ದಾರೆ ನಂತರ ಭಾರತೀಯ ಆಡಳಿತ ಸೇವೆ ಮಾಡಲು ನಿರ್ಧರಿಸಿ UPSC ಪರೀಕ್ಷೆಯಲ್ಲಿ 46ನೇ ಸ್ಥಾನದೊಂದಿಗೆ ಉತ್ತೀರ್ಣರಾದರು. 2018ರಲ್ಲಿ ತಮಿಳುನಾಡಿನ ತಿರುವನ್ವೇಲಿ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.

ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅವರು ಮೊದಲು ತಮಿಳುನಾಡಿನ ಅಂಗನವಾಡಿ ಕೇಂದ್ರಗಳನ್ನು ದೇಶದಲ್ಲಿಯೇ ಮಾದರಿ ಅಂಗನವಾಡಿ ಮಾಡಲು ನಿರ್ಧರಿಸಿ ತಮ್ಮ ಮೂರು ವರ್ಷದ ಹೆಣ್ಣುಮಗುವನ್ನು ಅಂಗನವಾಡಿಗೆ ಸೇರಿಸುತ್ತಾರೆ. ದೊಡ್ಡ ಹುದ್ದೆಯಲ್ಲಿ ಇರುವವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಶಿಲ್ಪಾ ಅವರು ಈ ಮಾತನ್ನು ಸುಳ್ಳು ಮಾಡಿದ್ದಾರೆ ಅಲ್ಲದೆ ಇತರ ಅಧಿಕಾರಿಗಳಿಗೆ ಹುಬ್ಬೇರುವಂತೆ ಮಾಡಿ ದೇಶದಾದ್ಯಂತ ಮಾದರಿಯಾಗಿದ್ದಾರೆ. ಅವರು ಅಧಿಕಾರದಲ್ಲಿರುವಾಗ ಅಲ್ಲಿಯ ಜನರು ಪದೇ ಪದೇ ಖಾಯಿಲೆಗೆ ಒಳಗಾಗುತ್ತಿದ್ದರು ಇದಕ್ಕೆ ಕಾರಣವೇನೆಂದು ಪರಿಶೀಲಿಸುವಾಗ ನೀರಿನ ಸಮಸ್ಯೆ ಇರಬಹುದು ಎಂದು ನೀರಿನ ಟ್ಯಾಂಕನ್ನು ಪರಿಶೀಲಿಸಬೇಕೆಂದು ಅಧಿಕಾರಿಗಳ ಬಳಿ ಕೇಳಿದಾಗ ಅಧಿಕಾರಿಗಳು ನೀರಿನಟ್ಯಾಂಕ್ ಸ್ವಚ್ಛವಾಗಿದೆ ಎಂದು ಹೇಳುತ್ತಾರೆ ಆದರೆ ಇದನ್ನು ನಂಬದ ಶಿಲ್ಪಾ ಅವರು ತಾವೇ 140 ಅಡಿ ಎತ್ತರದ ನೀರಿನ ಟ್ಯಾಂಕ್ ಗಳನ್ನು ಪರಿಶೀಲಿಸುತ್ತಾರೆ ಆಗ ನೀರಿನ ಟ್ಯಾಂಕ್ ಸ್ವಚ್ಛವಾಗಿ ಇಲ್ಲದೆ ಇರುವುದು ಅವರ ಗಮನಕ್ಕೆ ಬರುತ್ತದೆ. ಆಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನೀರಿನಟ್ಯಾಂಕ್ ಗಳನ್ನು ಸ್ವಚ್ಛ ಮಾಡುವ ಆದೇಶವನ್ನು ಹೊರಡಿಸಿದರು ಇದರಿಂದ ಅಲ್ಲಿಯ ಜನರು ಶುದ್ಧ ನೀರನ್ನು ಕುಡಿದು ಖಾಯಿಲೆ ಬೀಳುವುದು ಕಡಿಮೆಯಾಯಿತು .

ಶಿಲ್ಪಾ ಪ್ರಭಾಕರ್​ ಅವರು 2013ರಲ್ಲಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ಲಾಸ್ಟಿಕ್ ಬ್ಯಾನ್ ಮಾಡುವ ವಿಚಾರದಲ್ಲಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ತಮಿಳುನಾಡಿನ ನೂತನ ಮುಖ್ಯ ಮಂತ್ರಿಗಳು ಇವರ ಕಾರ್ಯವೈಖರಿಯನ್ನು ಮೆಚ್ಚಿ ಸಿಎಂ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲು ಆದೇಶಿಸಿದ್ದಾರೆ. ಬರಪೀಡಿತ ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯ ಹೆಣ್ಣುಮಗಳು ಇಂತಹ ದೊಡ್ಡ ಹುದ್ದೆಯಲ್ಲಿರುವುದು ಪ್ರಶಂಸನೀಯ. ಇದೀಗ ಗೌರಿಬಿದನೂರು ತಾಲೂಕಿನಾದ್ಯಂತ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಶಿಲ್ಪಾ ಪ್ರಭಾಕರ್ ಅವರು ನಮ್ಮ ಕರ್ನಾಟಕದವರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಶಿಲ್ಪಾ ಅವರ ಜೀವನ ಇಂದಿನ ಎಲ್ಲ ಹೆಣ್ಣುಮಕ್ಕಳಿಗೆ ಮಾದರಿಯಾಗಿದೆ. ಅವರು ತಮ್ಮ ಅಧಿಕಾರವಧಿಯಲ್ಲಿ ಹೆಚ್ಚು ಜನಕಲ್ಯಾಣ ಕೆಲಸಗಳನ್ನು ಮಾಡಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!