ಕನ್ನಡ ಚಿತ್ರೋದ್ಯಮ ಈವರೆಗೂ ಅನೇಕ ಪ್ರತಿಭಾವಂತ ಖಳನಟರನ್ನ ಕಂಡಿದೆ. ಅವರಲ್ಲಿ ನಟ ಶೋಭರಾಜ್ ಅವರು ಪ್ರಮುಖರು. ಕನ್ನಡ ಚಿತ್ರೋದ್ಯಮದ ತೊಂಬತ್ತರ ದಶಕದ ಬಹುಬೇಡಿಕೆಯ ಹಾಗೂ ಬೀಭತ್ಸ ಖಳನಟರಲ್ಲಿ ಶೋಭರಾಜ್ ಅವರ ಹೆಸರು ಅತ್ಯಂತ ಪ್ರಧಾನವಾಗಿದೆ. ಶೋಭರಾಜ್ ಅವರ ಜೀವನ ಹಾಗೂ ವೃತ್ತಿಯ ಕುರಿತಾಗಿ ಕೆಲ ಸ್ವಾರಸ್ಯಕರ ಸಂಗತಿಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಶೋಭರಾಜ್ ಅವರು ಮೂಲತಃ ತುಮಕೂರಿನವರು ಅಲ್ಲಿನ ಬಾರ್ಲಿಂಗ್ ಎಂಬಲ್ಲಿ ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ ಶೋಭರಾಜ್ ಆರಂಭಿಕ ಜೀವನ ಅವರ ಹುಟ್ಟೂರಿನ ಸುತ್ತವೇ ಶುರುವಾಯಿತು. ಇವರು ಐದನೇ ತರಗತಿಯವರೆಗೂ ಹುಟ್ಟೂರಿನಲ್ಲೇ ವಿದ್ಯಾಭ್ಯಾಸ ಪಡೆದರು. ಅವರ ತಂದೆ ಮಧ್ಯಮ ಮಟ್ಟದ ವ್ಯಾಪಾರಿಯಾಗಿದ್ದರು. ಕ್ರಮೇಣ ತುಮಕೂರಿನಿಂದ ವ್ಯಾಪಾರದ ಸಲುವಾಗಿ ಬೆಂಗಳೂರಿಗೆ ಬಂದಾಗ ಅಲ್ಲಿನ ಸಂಪಂಗಿ ರಾಮ ನಗರದಲ್ಲಿ ತಮ್ಮ ಪರಿವಾರವನ್ನು ಕೂಡ ಸ್ಥಳಾಂತರ ಮಾಡುತ್ತಾರೆ. ಶೋಭರಾಜ್ ಅವರು ಹಿರಿಯ ಪ್ರಾರ್ಥಮಿಕ ಶಾಲಾ ಶಿಕ್ಷಣವನ್ನು ಸಂಪಂಗಿ ರಾಮ ನಗರದ ಖಾಸಗಿ ಶಾಲೆಯೊಂದರಲ್ಲಿ ಮುಗಿಸುತ್ತಾರೆ. ಮುಂದೆ ಪ್ರೌಢಶಾಲೆಯನ್ನು ಅಲ್ಲಿನ ಸೇಂಟ್ ಪ್ಯಾಟ್ರಿಕ್ ಶಾಲೆಗೆ ಸೇರಿಕೊಳ್ಳುತ್ತಾರೆ. ಶೋಭರಾಜ್ ಹಾಗೂ ಕನ್ನಡದ ಒಂದು ಕಾಲದ ಸುಪ್ರಸಿದ್ಧ ನಾಯಕರಾದಂತ ದಿವಂಗತ ರಘುವೀರ್ ಬಾಲ್ಯದ ಆತ್ಮೀಯ ಸ್ನೇಹಿತರಾಗಿದ್ದರು ಎಂಬ ಸಂಗತಿ ಹಲವರಿಗೆ ಬಹುಶಃ ತಿಳಿದಿಲ್ಲ. ಶೋಭರಾಜ್ ಅವರು ಹೈಸ್ಕೂಲಿನಲ್ಲಿದ್ದಾಗ ಮೊದಲ ಬಾರಿಗೆ ರಘುವೀರ ಅವರ ಪರಿಚಯವಾಗುತ್ತದೆ. ಶೋಭರಾಜ್ ಅವರು ಶಾಲೆಯಲ್ಲಿ ಹೇಳಿಕೊಳ್ಳುವಂತಹ ವಿದ್ಯಾರ್ಥಿಯಾಗಿರಲಿಲ್ಲ. ಸದಾ ತಮ್ಮ ಸ್ನೇಹಿತರ ಜೊತೆ ಸೇರಿ ಕ್ರಿಕೆಟ್ ಸಿನಿಮಾವನ್ನು ನೋಡಿ ಕಾಲಕಳೆಯುತ್ತಿದ್ದರು.

ಶೋಭರಾಜ್ ಅವರ ಸಿನಿಮಾ ಪಯಣದ ಬಗ್ಗೆ ಹೇಳುವುದಾದರೆ ಅವರಿಗೆ ಸಿನಿಮಾ ಬಗ್ಗೆ ಆಸಕ್ತಿ ಇತ್ತಾದರೂ ಸಿನಿಮಾದಲ್ಲಿ ನಟಿಸಬಲ್ಲೆ ನಟಿಸಬೇಕು ಎಂಬ ಹಂಬಲ ಆಕಾಂಕ್ಷೆ ಅವರಿಗಿರಲಿಲ್ಲ. ಹಾಗೆ ನೋಡಿದರೆ ಒರಟು ಬಾಹ್ಯರೂಪ ಮತ್ತು ಅವರ ಆರಡಿ ಎತ್ತರದ ಮೈಕಟ್ಟು ಅವರನ್ನು ಆರಂಭದಲ್ಲಿ ಸಿನಿಮಾ ಜಗತ್ತಿಗೆ ಪರಿಚಯ ಮಾಡಿದೆ ಎಂದು ಹೇಳಬಹುದು. ಶೋಭರಾಜ್ ಅವರು ತಮ್ಮ ಯೌವನದ ದಿನಗಳಲ್ಲಿ ಸದಾ ಕುರುಚಲು ಗಡ್ಡದೊಂದಿಗೆ ಇರುತ್ತಿದ್ದರು. ಅವರನ್ನು ಒಮ್ಮೆ ನೋಡಿದ ಎಟಿ.ರಘು ಎಂಬ ಕನ್ನಡದ ಖ್ಯಾತ ನಿರ್ದೇಶಕರು ಶೋಭರಾಜ್ ಅವರ ದಿರಿಸು ಹಾಗೂ ಬಾಹ್ಯರೂಪವನ್ನು ನೋಡಿ ಸಿನಿಮಾಗಳಲ್ಲಿ ರೌಡಿ ಪಾತ್ರ ಮಾಡೋಕೆ ಹೇಳಿಮಾಡಿಸಿದ ರೂಪದಲ್ಲಿ ಇದ್ದಾರೆ ಅಂತ ಒಂದು ಸಾರಿ ಹೇಳಿದ್ದರು. ಶೋಭರಾಜ್ ಅವರ ಮೊದಲ ಚಿತ್ರ ಎಸ್. ನಾರಾಯಣ್ ನಿರ್ದೇಶನದ ಸೂಪರ್ ಹಿಟ್ ಚಿತ್ರವಾದ ಚೈತ್ರದ ಪ್ರೇಮಾಂಜಲಿ ರಘುವೀರ್ ಅವರ ನಾಯಕತ್ವದಲ್ಲಿ ತೆರೆಕಂಡ ಕಡಿಮೆ ಬಜೆಟ್ ನ ಸಿನಿಮಾ ಆಗಿತ್ತು. ಅಂದಿನ ಕಾಲಕ್ಕೆ ಸಾರ್ವಕಾಲಿಕ ದಾಖಲೆ ನಿರ್ಮಿಸಿ ರಜತ ಮಹೋತ್ಸವ ಆಚರಿಸಿದ ಚಿತ್ರವಾಗಿತ್ತು. ಎಸ್. ನಾರಾಯಣ್ ಅವರು ಈ ಚಿತ್ರಕ್ಕೆ ಬೇರೆ ಕಲಾವಿದನಾದ ಜನಕರಾಜ್ ಎಂಬುವರನ್ನು ಆಯ್ಕೆ ಮಾಡಿದ್ದರು ಆದರೆ ಕಾರಣಾಂತರಗಳಿಂದ ಅವರಿಗೆ ಬರಲು ಸಾಧ್ಯವಾಗದಿದ್ದಾಗ ಆ ಪಾತ್ರವನ್ನು ಶೋಭರಾಜ್ ಅವರು ನಟಿಸಿದರು. ಶೋಭರಾಜ್ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಎಟಿ. ರವಿ ಅವರ ನಿರ್ದೇಶನದ ಜೈಲರ್ ಜಗನಾಥ ಚಿತ್ರಕ್ಕೆ .ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್ ಅವರು ನಾಯಕ ನಟರಾಗಿದ್ದರು, ಅತ್ಯಂತ ಸಣ್ಣ ಪಾತ್ರಕ್ಕೆ ನಟಿಸುವುದಕ್ಕೆ ಶೋಭರಾಜ್ ಆಯ್ಕೆಯಾಗಿದ್ದರು ಆದರೆ ಕಾರಣಾಂತರಗಳಿಂದ ಕೆಲ ದಿನಗಳ ಬಳಿಕ ಈ ಚಿತ್ರ ಸ್ಥಗಿತಗೊಂಡಿತ್ತು. ಒಂದು ವೇಳೆ ಚಿತ್ರ ತೆರೆಗೆ ಬಂದಿದ್ದರೆ ಅವರ ನಟನೆಯ ಮೊದಲ ಚಿತ್ರವಾಗುತ್ತಿತ್ತು. ಚೈತ್ರದ ಪ್ರೇಮಾಂಜಲಿ ಸಿನಿಮಾದ ಯಶಸ್ಸಿನ ನಂತರ ಶೋಭರಾಜ್ ಅವರು ಮೂರರಿಂದ ನಾಲ್ಕು ವರ್ಷಗಳ ಕಾಲ ಎಸ್. ನಾರಾಯಣ್ ಹಾಗೂ ರಘುವೀರ್ ಅವರ ಚಿತ್ರಗಳಲ್ಲಿ ನಟಿಸುತ್ತಿದ್ದರು. ಇನ್ನೊಂದು ವಿಶೇಷ ಸಂಗತಿಯೆಂದರೆ ಇವರ ಮೂಲ ಹೆಸರು ಸುರೇಂದ್ರಪಾಲ್, ಶೋಭರಾಜ್ ಅಂತ ಎಸ್. ನಾರಾಯಣ್ ಅವರು ಚೈತ್ರದ ಪ್ರೇಮಾಂಜಲಿ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಹೊಸ ಹೆಸರನ್ನು ನಾಮಕರಣ ಮಾಡಿದರು .

ಚೈತ್ರದ ಪ್ರೇಮಾಂಜಲಿ ಸಿನಿಮಾದ ಯಶಸ್ಸು ಶೋಭರಾಜ್ ಅವರಿಗೆ ನಿರ್ದೇಶಕರಿಂದ ಪಾತ್ರಗಳ ಅವಕಾಶ ಬರುವಂತೆ ಮಾಡಿತ್ತು. ಮುಂದೆ 1993 ರಲ್ಲಿ ದೇವರಾಜ್ ಅಭಿನಯದ ಗೋಲಿಬಾರ್ ಚಿತ್ರದಲ್ಲಿ ನಟಿಸಿದರು. 1994 ರಲ್ಲಿ ಲಾಕಪ್ ಡೆತ್, 1995 ರಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ ಬಂಗಾರದ ಕಳಶ , ಸಾಯಿಕುಮಾರ್ ಅವರ ಪೊಲೀಸ್ ಸ್ಟೋರಿ ಸಿನಿಮಾದಲ್ಲಿ ಪರಿಪೂರ್ಣ ಖಳನಾಯಕರಾಗಿ ನಟಿಸುತ್ತಾರೆ. ನಂತರ ಧೈರ್ಯ ಹಾಗೂ1999 ರಲ್ಲಿ ಓಂ ನಮಃ ಶಿವಾಯ, ಎರಡು ಸಾವಿರದ ಒಂದರಲ್ಲಿ ಗಲಾಟೆ ಅಳಿಯಂದಿರು ಹಾಗೂ ಡಾಕ್ಟರ್ ರಾಜಕುಮಾರ್ ಅವರ ಶಬ್ದವೇಧಿ ಸಿನಿಮಾದಲ್ಲಿ ನಟಿಸಿದರು. ಬಾವಬಾಮೈದ, ಸಿಂಹಾದ್ರಿಯ ಸಿಂಹ ಯಜಮಾನ, ಜಮಿಂನ್ದಾರ್ರು, ಹೃದಯವಂತ, ಡೆಡ್ಲಿ ಸೋಮ ಮುಂತಾದ ಸಿನಿಮಾ ಇವರಿಗೆ ಹೆಸರು ತಂದುಕೊಟ್ಟಿತ್ತು . 30 ವರ್ಷ ಸಿನಿ ಪಯಣದಲ್ಲಿ ಕನ್ನಡ ಸೇರಿದಂತೆ ತೆಲುಗು ತಮಿಳು ಭಾಷೆಗಳಲ್ಲಿ ನಟಿಸಿದ್ದಾರೆ. ಇವರು, ಖಳ ನಾಯಕ, ಹಾಸ್ಯ , ಪೌರಾಣಿಕ ಮುಂತಾದ ಮುಖ್ಯ ಆಯಾಮದ ಒಳಹೊಕ್ಕು ಎಲ್ಲಾ ವಿಧದ ಪಾತ್ರಗಳಿಗೂ ನ್ಯಾಯವನ್ನು ದೊರಕಿಸಿಕೊಟ್ಟ ಕನ್ನಡಕ್ಕೆ ಸಿಕ್ಕ ಅಪರೂಪದ ವಿಶಿಷ್ಟ ಬಗೆಯ ನಟನಾಗಿದ್ದಾರೆ. ತೆರೆಯೊಳಗೆ ಕ್ರೂರ ಅಮಾನುಷ ಪಾತ್ರಗಳಲ್ಲಿ ನಟಿಸಿದರೂ ಕೂಡ ತೆರೆಯ ಹೊರಗೆ ಶೋಭರಾಜ್ ಅಷ್ಟೇ ಕೋಮಲ ಹಾಗೂ ಸಹೃದಯ ವ್ಯಕ್ತಿತ್ವ ಇರುವ ವ್ಯಕ್ತಿಯಾಗಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!