ಸ್ನಾನವೆಂದರೆ ಬರೀ ದೇಹದ ಮೇಲಿರುವ ಕಳೆಯನ್ನು ತೆಗೆಯುವ ಕಾರ್ಯವಲ್ಲ. ಮನಸ್ಸಿನ ಆಳದಿಂದ ಮಾನಸಿಕ ಶುದ್ಧಿಕರಣ ಸ್ನಾನದಿಂದ ದೊರಕುವುದು ಆಗಿದೆ. ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಪ್ರತಿ ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಪ್ರಾತಃಕಾಲದಲ್ಲಿ ಎದ್ದು ಹಸ್ತವನ್ನು ನೋಡಿಕೊಂಡು ಕರಾಗ್ರೇ ವಸತೇ ಲಕ್ಷ್ಮೀ ಪಠಿಸುವುದರಿಂದ ಆರಂಭಿಸಿ ರಾತ್ರಿ ಮಲಗುವ ಸಮಯದಲ್ಲಿ ರಾಮಸ್ಕಂದಮ್ ಹನುಮಂತಮ್ ಸ್ತೋತ್ರವನ್ನು ಹೇಳುವವರೆಗಿನ ಸರ್ವಕಾರ್ಯಗಳಿಗಿರುವ ವಿಶೇಷತೆ ಮತ್ತು ಲಾಭವನ್ನು ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ನಿತ್ಯಕಾರ್ಯವಾದ ಸ್ನಾನದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸ್ನಾನವನ್ನು ಸರಿಯಾದ ಸಮಯದಲ್ಲಿ ಮಾಡುವುದರಿಂದ ಲಾಭಗಳು ಆಗುತ್ತದೆ. ಸ್ನಾನದಿಂದ ಹಲವು ರೀತಿಯ ಲಾಭಗಳಿವೆ. ಸ್ವಾಸ್ಥ್ಯ ಸಂರಕ್ಷಣೆಗೆ, ಶರೀರ ಮತ್ತು ಶಾರೀರದ ನೆಮ್ಮದಿಗೆ, ಶುಚಿಯಾಗಿರಲು ಪ್ರತಿನಿತ್ಯ ಸ್ನಾನ ಮಾಡುತ್ತೇವೆ. ಧಾರ್ಮಿಕ ದೃಷ್ಟಿಯಿಂದ ಸಹ ಪ್ರತಿನಿತ್ಯ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡುವುದು ಹೆಚ್ಚು ಶುಭವೆಂದು ಹೇಳಲಾಗುತ್ತದೆ. ಹಾಗಾಗಿಯೇ ನಮ್ಮ ಹಿರಿಯರು, ಪುರಾಣದ ಕಾಲದಲ್ಲಿ ಋಷಿ ಮುನಿಗಳು, ವಿದ್ವಾಂಸರು ಪ್ರಾತಃಕಾಲದಲ್ಲಿ ಅಂದರೆ ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯೋದಯದ ಸಮಯಕ್ಕೆ ಸ್ನಾನ ಮಾಡುತ್ತಿದ್ದರೆಂಬುದನ್ನು ಕೇಳಿರುತ್ತೇವೆ.
ಶಾಸ್ತ್ರಗಳ ಅನುಸಾರ ಸೂರ್ಯೋದಯದ ಸಮಯದಲ್ಲಿ ಸ್ನಾನಮಾಡಿ ಸೂರ್ಯನಿಗೆ ಜಲವನ್ನು ಅರ್ಪಿಸುವುದರಿಂದ ಅನೇಕ ರೀತಿಯ ಲಾಭಗಳುಂಟಾಗುತ್ತದೆ. ಸಮಾಜದಲ್ಲಿ ಸ್ಥಾನ-ಮಾನ ವೃದ್ಧಿಸುವುದಲ್ಲದೇ, ತ್ವಚೆಯ ಕಾಂತಿಯನ್ನು ಸಹ ಹೆಚ್ಚಿಸುತ್ತದೆ. ಆ ಸಮಯದಲ್ಲಿ ಶುರುವಾದ ನಿತ್ಯದ ಕಾರ್ಯಗಳೆಲ್ಲಾ ಸುಗಮವಾಗಿ ಸಾಗುವುದಲ್ಲದೇ, ಮಾನಸಿಕ ನೆಮ್ಮದಿ ಲಭಿಸುತ್ತದೆ. ಎಲ್ಲರೂ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯಕೊಡತಕ್ಕದ್ದಾಗಿ ಶಾಸ್ತ್ರ ಹೇಳುತ್ತದೆ.
ಸ್ನಾನ ಮಾಡುವ ಪರಿಯು ಹೇಗೆಂದರೆ ಮೊದಲ ನೀರನ್ನು ತಲೆಯ ಮೇಲೆ ಸುರಿದು ಕೊಳ್ಳಬೇಕು. ನೆತ್ತಿಯ ಮೇಲೆ ನೀರು ಬೀಳುವುದರಿಂದ ಮನಸ್ಸು ಎಚ್ಚೆತ್ತುಕೊಳ್ಳುತ್ತದೆ ಜೊತೆ ನೀರು ಪ್ರತಿಯೊಂದು ಭಾಗವನ್ನು ಒದ್ದೆ ಗೊಳಿಸುತ್ತದೆ. ನದಿಯಲ್ಲಿ ಮುಳುಗಿ ಹಾಕುವ ತರಹದಲ್ಲಿ ನೀರನ್ನು ಹಾಕಿಕೊಳ್ಳಬೇಕು. ಇದರಿಂದ ದೇಹವು ತಂಪಾಗುತ್ತದೆ. ಜೊತೆಗೆ ಸ್ನಾಯುಗಳಲ್ಲಿ ಚಟುವಟಿಕೆ ಆಗುತ್ತದೆ. ಎರಡನೆಯದಾಗಿ ವಾತಾವರಣದ ತಾಪಮಾನಕ್ಕಿಂತ ಸ್ವಲ್ಪ ತಣ್ಣಗಿರುವ ನೀರನ್ನು ಸ್ನಾನ ಮಾಡುವುದು ಉತ್ತಮ.
ಇದರಿಂದ ದೇಹದ ಮೇಲಿರುವ ಜೀವಕೋಶಗಳು ಸಂಕುಚಿತಗೊಂಡು ಬಹಳ ಕಾಲದವರೆಗೆ ತಾರುಣ್ಯದಿಂದ ಇರುತ್ತದೆ. ಪ್ರತಿನಿತ್ಯ ಎರಡು ಸ್ನಾನ ಮಾಡುವುದು ಒಳಿತಾಗುತ್ತದೆ. ಕಾರಣ ಮನಸ್ಸಿನ ಯೋಚನೆಗಳನ್ನು ಸ್ನಾನದ ಮೂಲಕ ಶುದ್ಧೀಕರಣಗೊಳಿಸಲು ಆಗುತ್ತದೆ. ನೀರಿನಿಂದ ಅಂತರಾಳದ ಶುದ್ಧೀಕರಣವು ಆಗುತ್ತದೆ. ಅದಕ್ಕಾಗಿಯೇ ಸ್ನಾನದಿಂದ ದೇಹದ ಜೊತೆಗೆ ಮನಸ್ಸು ಕೂಡ ಹೊಸ ಚೈತನ್ಯವನ್ನು ತುಂಬಿಕೊಳ್ಳುತ್ತದೆ.