ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ. ಇಲ್ಲಿ ಈಶ್ವರ ಪುತ್ರ ಷಣ್ಮುಖ ದೇವರನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತದೆ.ನಾಗಾರಾಧನೆ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ನಾಗಮಂಡಲವೆಂಬ ಸಾಂಪ್ರದಾಯಿಕ ನೃತ್ಯವನ್ನು ಕಾಣಬಹುದು.ಇಲ್ಲಿಯ ದೇವಸ್ಥಾನವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ. ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ.
ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ತಡವಿವಾಹ, ವೈವಾಹಿಕ ಸುಖಭಂಗ, ಪುತ್ರಹೀನತೆ (ಗಂಡು ಸಂತಾನ ಇಲ್ಲದಿರುವುದು),ಸಂತಾನಹೀನತೆ (ಮಕ್ಕಳೇ ಆಗದಿರುವುದು,ಉದ್ಯೋಗದಲ್ಲಿ ಅಸಮಾಧಾನ,ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರ ಈ ಮೇಲೆ ಹೇಳಲಾದ ದೋಷಗಳಿಗೆ ಪರಿಹಾರ ಮಾಡಿಸಲು ಕರ್ನಾಟಕದಲ್ಲಿರುವ ಅತ್ಯಂತ ಪವಿತ್ರವಾದ ನಾಗರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿರುವ ಕ್ಷೇತ್ರ ಎಂದರೆ ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರಪಂಚದ ನಾನಾ ಮೂಲೆಗಳಿಂದ ಭಕ್ತರು ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿ ಸುಖಜೀವನ ನಡೆಸುತ್ತಿದ್ದಾರೆ. ಕುಜದೋಷವಿರುವವರೂ ಸಹಾ ಇಲ್ಲಿ ಪರಿಹಾರ ಕಾಣುತ್ತಾರೆ. ಕಾರ್ತಿಕೇಯ, ಸುಬ್ರಹ್ಮಣ್ಯ ಎಂದೆಲ್ಲಾ ಕರೆಸಿಕೊಳ್ಳುವ ಈ ದೇವನು ಕ್ಷೀರಪ್ರಿಯನು. ಭಕ್ತರ ದೋಷಗಳನ್ನು ಪರಿಹಾರ ಮಾಡುವ ಸಲುವಾಗಿಯೇ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಎಂದರೆ ತಪ್ಪಾಗಲಾರದು.
ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಈ ಕ್ಷೇತ್ರದಲ್ಲಿ ನಡೆಯುವ ಪ್ರಮುಖ ಸೇವೆಗಳು. ಸರ್ಪ ಹತ್ಯೆ, ನಾಗದೋಷ ಪರಿಹಾರಕ್ಕಾಗಿ ಈ ಸೇವೆಗಳನ್ನು ಜನರು ಸಲ್ಲಿಸುತ್ತಾರೆ. ಮಹಾಪೂಜೆ, ಶೇಷ ಸೇವೆ, ಕಾರ್ತಿಕ ಪೂಜೆ ಮೊದಲಾದ ಸೇವೆಗಳೂ ಸಮರ್ಪಣೆಯಾಗುತ್ತವೆ. ಹಿಂದೂ ನಂಬಿಕೆಯ ಪ್ರಕಾರ, ಸರ್ಪ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಸರ್ಪ ದೋಷ ಎನ್ನುವುದು ಕಷ್ಟಕರ ಬದುಕಿನ ಸಂಕೇತವಾಗಿದೆ ಎಂದು ನಂಬಲಾಗಿದೆ.ದೋಷ ಪರಿಹರಿಸಲು ಇಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡುವ ಸಲುವಾಗಿ ಇಲ್ಲಿರುವ ನದಿಯಲ್ಲಿ ಮಿಂದೇಳುವುದು ಸಹಜವಾಗಿದೆ ಇದನ್ನು ಮಾಡುವುದು ತಪ್ಪೇನಲ್ಲ ಆದರೆ ಅಲ್ಲಿನ ವಾತಾವರಣ ಶುಚಿ ಸ್ವಚ್ಛತೆಯಿಂದ ಕೂಡಿರುವುದು ಅಗತ್ಯವಾಗಿದೆ ಆದ್ದರಿಂದ ಅಲ್ಲಿ ಸ್ನಾನ ಮಾಡಿದ ನಂತರ ನಮ್ಮ ಯಾವುದೇ ವಸ್ತುಗಳನ್ನು ಅಲ್ಲಿ ಬಿಸಾಡದೆ ನಮ್ಮ ನಮ್ಮ ಕರ್ತವ್ಯವನ್ನು ಮುಗಿಸಿ ಬಂದರೆ ಅಲ್ಲಿನ ಪರಿಸರವು ಸ್ವಚ್ಛವಾಗಿ ಕೂಡಿರುತ್ತದೆ.