ಸಮಸ್ಯೆ ಎದುರಾದಾಗ ಆಕಾಶವೇ ತಲೆಮೇಲೆ ಕಳಚಿ ಬಿದ್ದಂತೆ ಆಡುತ್ತೇವೆ. ಆದ್ರೆ ಸಮಸ್ಯೆಯ ಮೂಲ ನಮ್ಮೊಳಗೇ ಇರಬಹುದು, ಆದ್ರೆ ನಾವು ಆ ಬಗ್ಗೆ ಯೋಚಿಸದ ಕಾರಣ ಪರಿಹಾರವೂ ಗೋಚರಿಸೋದಿಲ್ಲ. ಉಗುರಲ್ಲಿ ಸರಿಪಡಿಸಬಹುದಾದ ಸಮಸ್ಯೆಗೆ ಕೊಡಲಿ ತೆಗೆದುಕೊಂಡರು ಎಂಬ ಮಾತಿದೆ. ಅಂದರೆ ಸಮಸ್ಯೆ ಇಲ್ಲವೇ ಕಷ್ಟ ಪುಟ್ಟದಾಗಿರುತ್ತೆ, ಆದರೆ ಅದನ್ನು ಸರಿಪಡಿಸಲು ಸರಳ ವಿಧಾನದ ಬದಲು ಜಟಿಲ ಮಾರ್ಗ ಅನುಸರಿಸುತ್ತೇವೆ. ಇದಕ್ಕೆ ಕಾರಣ ಸಮಸ್ಯೆ ಮೂಲ ಹುಡುಕಲು ವಿಫಲವಾಗೋದು. ಬಹುತೇಕ ಸಮಸ್ಯೆ ಮೂಲ ನಮ್ಮೊಳಗೇ ಇರುತ್ತದೆ. ನಮ್ಮೊಳಗೇ ಸೃಷ್ಟಿಯಾಗುವ ಸಮಸ್ಯೆಯನ್ನು ಪತ್ತೆ ಹಚ್ಚಲು ಜಾಗೃತ ಮನಸ್ಸಿನ ಅಗತ್ಯವಿದೆ.ಅಂದರೆ ಸೂಕ್ಷ್ಮವಾದ ಒಳಗಣ್ಣಿನ ಮೂಲಕ ಮಾತ್ರ ನಾವು ಅದನ್ನು ಪತ್ತೆಹಚ್ಚಲು ಸಾಧ್ಯ. ಈ ಸೂಕ್ಷ್ಮವಾದ ಒಳಗಣ್ಣು ನಮಗೆ ಆತ್ಮವಿಮರ್ಶೆ ಮೂಲಕ ಸಿಗುತ್ತದೆ.ಏಕಾಂತದಲ್ಲಿ ಕುಳಿತು ನಮ್ಮನ್ನು ನಾವು ವಿಮರ್ಶೆಗೊಳಪಡಿಸಿದಾಗ ಸಮಸ್ಯೆಯ ಸುಳಿವು ಸಿಗುತ್ತದೆ. ಸಮಸ್ಯೆ ಗೊತ್ತಾದ ಮೇಲೂ ಅದರ ಪರಿಹಾರದ ಬಗ್ಗೆ ಯೋಚಿಸದೆ ಕಾಲಹರಣ ಮಾಡಿದರೆ ಅದರಿಂದ ಇನ್ನಷ್ಟು ತೊಂದರೆ ಎದುರಾಗುತ್ತದೆ.

ಕೆಲವೊಮ್ಮೆ ಸಮಸ್ಯೆ ಸಣ್ಣದಿರುವಾಗಲೇ ನಮ್ಮ ಅರಿವಿಗೆ ಬಂದಿರುತ್ತದೆ. ಆದರೆ,ಇದು ಚಿಕ್ಕ ಸಮಸ್ಯೆ, ಇದರಿಂದ ದೊಡ್ಡ ತೊಂದರೆಯಾಗುವುದಿಲ್ಲ ಎಂದು ಭಾವಿಸಿಕೊಂಡು ಸುಮ್ಮನಿದ್ದು ಬಿಡುತ್ತೇವೆ. ಕೆಲವೊಮ್ಮೆ ಸಮಸ್ಯೆ ಚಿಕ್ಕದೆಂದು ನಾವು ತೋರುವ ನಿರ್ಲಕ್ಷ್ಯದಿಂದ ಅದು ದೊಡ್ಡದಾಗಿ ಬೆಳೆದು ನೆಮ್ಮದಿಯನ್ನೇ ಕಸಿದು ಬಿಡುತ್ತದೆ. ಆದಕಾರಣ ಸಮಸ್ಯೆ ಚಿಕ್ಕದಿರುವಾಗಲೇ ಅದನ್ನು ಪರಿಹರಿಸಿಕೊಂಡು ಬಿಟ್ಟರೆ ಭವಿಷ್ಯದಲ್ಲಿ ಅದು ಹೆಮ್ಮರವಾಗಿ ಬೆಳೆಯೋದನ್ನು ತಡೆಯಬಹುದು. ಮನಸ್ಸಿಗೆ ಕಿರಿಕಿರಿ ಉಂಟು ಮಾಡುವ, ಸದಾ ನೆಮ್ಮದಿ ಕೆಡಿಸುವ ವಿಷಯ ಯಾವುದು ಎಂಬುದನ್ನು ಗುರುತಿಸಿ. ಅದೇ ನಿಮಗೆ ಸಮಸ್ಯೆಯಾಗಿ ಕಾಡುತ್ತಿರುತ್ತದೆ. ಹೀಗೆ ಸಮಸ್ಯೆಯ ಮೂಲ ಸಿಕ್ಕಿದ ಬಳಿಕ ಅದನ್ನು ಪರಿಶೀಲನೆಗೊಳಪಡಿಸಿ. ಆ ಸಮಸ್ಯೆ ಹೇಗೆ ಹುಟ್ಟಿಕೊಂಡಿತು? ಆ ಸಮಸ್ಯೆಯಿಂದ ನಿಮಗೆ ಹೇಗೆ ತೊಂದರೆಗಳು ಎದುರಾಗುತ್ತಿವೆ? ಎಂಬುದನ್ನು ಪತ್ತೆ ಹಚ್ಚಿ. ಆ ಬಳಿಕ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಯೋಚಿಸಿ. ಇದೇ ರೀತಿ ನಮಗೆ ಬಂದಿರುವ ಕಷ್ಟಗಳನ್ನು ಕೂಡಾ ನಾವು ಪರಿಹರಿಸಿಕೊಳ್ಳಬಹುದು.

ಕಷ್ಟಗಳು ಮನುಷ್ಯನಿಗೆ ಅಲ್ಲದೆ ಮರಗಳಿಗೆ ಬರುತ್ತದೆಯೇ? ಎನ್ನುವ ಮಾತೇ ಇದೆ. ಸುಖವೇ ಆಗಿರಲಿ ದುಃಖವೇ ಆಗಿರಲಿ ಅದು ಮನುಷ್ಯನಿಗೆ ಬರುವುದು. ಹೇಗೆ ಹಗಲು ಮತ್ತು ರಾತ್ರಿ ಇರುವುದೋ ಅದೇ ರೀತಿ ಎಲ್ಲವೂ ಸಮಾಧಾನವಾಗಿ ಇರುತ್ತವೆ. ಜೀವನವನ್ನು ಎರಡೂ ಕೈಯಿಂದ ಸರಿದುಗಿಸಬೇಕು. ನಮಗೆ ಮಾತ್ರ ಯಾಕೆ ಕಷ್ಟ ಉಳಿದವರಿಗೆ ಕಷ್ಟವೇ ಇಲ್ಲವೇ ಎಂದೆಲ್ಲ ನಾವು ಚಿಂತೆ ಮಾಡುತ್ತೇವೆ. ಕಷ್ಟಗಳು ಅವರವರ ಕರ್ಮಗಳಿಗೆ ಅನುಸಾರವಾಗಿ ಬರುತ್ತವೆ. ಉದಾಹರಣೆಗೆ ಒಂದು ಪುಟ್ಟ ಕಥೆಯನ್ನು ನೋಡೋಣ.

ಒಂದು ಊರಿನಲ್ಲಿ ಒಬ್ಬ ಸನ್ಯಾಸಿ ಬರುತ್ತಾರೆ ಅಲ್ಲಿಯ ಜನರು ಆ ಸನ್ಯಾಸಿಯನ್ನು ನೋಡಿ ಇವರು ತಮ್ಮೆಲ್ಲ ಕಷ್ಟಗಳನ್ನು ದೂರ ಮಾಡುತ್ತಾರೆ ಎಂದುಕೊಂಡು ನಂಬಿ ಅವರ ಬಳಿ ಹೋಗುತ್ತಾರೆ. ಆ ಸನ್ಯಾಸಿ ಊರಿನ ಜನರಿಗೆ ಮಾರನೇ ದಿನ ಬರಲು ಹೇಳಿ ಬರುವಾಗ ಪ್ರತಿಯೊಬ್ಬರಿಗೂ ಒಂದೊಂದು ಪೇಪರ್ ಮತ್ತು ಪೆನ್ ತರಲು ಹೇಳುತ್ತಾರೆ. ಮಾರನೇ ದಿನ ಸನ್ಯಾಸಿ ಹೇಳಿದ ಹಾಗೆ ಊರಿನ ಜನರು ಪೇಪರ್ ಪೆನ್ ತೆಗೆದುಕೊಂಡು ಹೇಳಿದ ಸಮಯಕ್ಕೆ ಹೋಗುತ್ತಾರೆ. ಆಗ ಸನ್ಯಾಸಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಸಮಸ್ಯೆ ಏನಿದೆ ಎಂದು ಪೇಪರ್ ನಲ್ಲಿ ಬರೆದು ತಾನಿಟ್ಟ ಒಂದು ದೊಡ್ಡ ಪಾತ್ರೆಯಲ್ಲಿ ಹಾಕಲು ಹೇಳುತ್ತಾರೆ. ಅದರಂತೆ ಜನರು ತಮ್ಮ ಸಮಸ್ಯೆಗಳನ್ನು ಬರೆದು ಸನ್ಯಾಸಿ ಇಟ್ಟ ಪಾತ್ರೆಯಲ್ಲಿ ಹಾಕುತ್ತಾರೆ ನಂತರ ಸನ್ಯಾಸಿ ಆ ಚೀಟಿಗಳನ್ನು ಎಲ್ಲರಿಗೂ ಎತ್ತಿಕೊಳ್ಳಲು ಹೇಳುತ್ತಾರೆ. ಆಗ ಪ್ರತಿಯೊಬ್ಬರಿಗೂ ಬೇರೆ ಬೇರೆ ಚೀಟಿ ಬಂದಿರುತ್ತದೆ. ಅದರಲ್ಲಿ ಅವರ ಸಮಸ್ಯೆ ಬಿಟ್ಟು ಬೇರೆ ಬೇರೆ ಜನರ ಬೇರೆ ಬೇರೆ ರೀತಿಯ ಸಮಸ್ಯೆಗಳು ಬರೆದಿರುತ್ತದೆ. ಅದನ್ನ ನೋಡಿದ ಜನರಿಗೆ ಬೇರೆಯವರ ಸಮಸ್ಯೆ / ಕಷ್ಟಗಳು ತಿಳಿದು ತನ್ನ ಕಷ್ಟ ಸಣ್ಣದು ತಾನು ತನಗೆ ಬಂದ ಕಷ್ಟವನ್ನು ಎದುರಿಸಬಲ್ಲೆ ಎಂದು ಎನಿಸುತ್ತದೆ. ಇನ್ನೊಬ್ಬರ ಕಷ್ಟಗಳು ನಾವು ಎದುರಿಸಲಾಗದೆ ಇದ್ದಾಗ ಅವರ ಕಷ್ಟ ನಮಗೆ ದೊಡ್ಡದಾಗಿ ಕಾಣುತ್ತದೆ. ಆಗ ನಾವು ಬೇರೆಯವರ ಕಷ್ಟಕ್ಕೆ ಹೋಲಿಕೆ ಮಾಡಿದರೆ ನಮಗೆ ನಮ್ಮ ಕಷ್ಟವೇ ನಮಗೆ ಸಾಕು ಎನಿಸುವುದು.

ಇದೆ ರೀತಿ ನಮ್ಮ ಕರ್ಮಕ್ಕೆ ತಕ್ಕಂತೆ ನಾವು ಎದುರಿಸುವ ಕಷ್ಟಗಳೇ ನಮಗೆ ಬಂದಿವೆ. ಒಂದು ಕಾಲು ಇಲ್ಲದ ವ್ಯಕ್ತಿ ತನ್ನ ಕಷ್ಟವೇ ದೊಡ್ಡದು ಎಂದುಕೊಂಡು ಇರುತ್ತಾನೆ ಆದರೆ ಎರಡೂ ಕಾಲು ಇಲ್ಲದ ವ್ಯಕ್ತಿಯನ್ನು ನೋಡಿ ತನ್ನ ಕಷ್ಟ ಏನೂ ಅಲ್ಲ ಎಂದುಕೊಳ್ಳುತ್ತಾರೆ. ಅದೇ ಆನಂದ ಬಂದಾಗ ನನಗೆ ಯಾಕೆ ಈ ಆನಂದ ಬಂತು ಅಂತಾ ನಾವು ಎಂದಿಗೂ ಯೋಚಿಸುವುದೇ ಇಲ್ಲ ಅದೇ ಕಷ್ಟ ಬಂದಾಗ ನನಗೆ ಮಾತ್ರ ಕಷ್ಟ ಎಂದು ಯೋಚಿಸುತ್ತೇವೆ. ಆದರೆ ನಾವು ಒಂದು ಕೈಯ್ಯಲ್ಲಿ ಆನಂದವನ್ನು ಇನ್ನೊಂದು ಕೈಯಿಂದ ಕಷ್ಟವನ್ನು ಎದುರಿಸುವುದನ್ನು ಕಲಿತರೆ ಜೀವನವನ್ನು ಸಮದೂಗಿಸಿಕೊಂಡು ಹೋಗಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!