ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ಸಲಾರ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ರಾಕಿಂಗ್ ಸ್ಟಾರ್ ಯಶ್ ಅತಿಥಿಯಾಗಿ ಪಾಲ್ಗೊಂಡಿದ್ದ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್  ನಿರ್ದೇಶನದ ಸಲಾರ್ ಚಿತ್ರದ ಮೂಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ಇದು ಗ್ಯಾಂಗ್ಸ್ಟರ್ ಚಿತ್ರ ಎಂದು ಹೇಳಲಾಗುತ್ತಿದ್ದು, ಈ ದೊಡ್ಡ ಬಜೆಟ್ ಚಿತ್ರದಲ್ಲಿ ಪ್ರಭಾಸ್ ವಾಯ್ಲೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲಾರ್ ಚಿತ್ರ ಘೋಷಣೆಯಾದಾಗಿನಿಂದಲೂ, ಎಂ.ಎಸ್.ಧೋನಿ ಖ್ಯಾತಿಯ ಬಿ ಟೌನ್ ನಟಿ ದಿಶಾ ಪಟಾನಿ ಪ್ರಭಾಸ್ ಗೆ ಜೋಡಿಯಾಗಿ ನಟಿಸಲಿದ್ದಾರೆ ಎಂಬ ಉಹಾಪೋಹಗಳು ಕೇಳಿಬರುತ್ತಿತ್ತು. ಆದರೆ ಚಿತ್ರರಂಗದ ಇತ್ತೀಚಿನ ವರದಿಗಳ ಪ್ರಕಾರ ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಸಾರಿಕಾ ಮತ್ತು ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ನಟಿಸಲಿದ್ದಾರಂತೆ.

ಒಂದು ವೇಳೆ ಶ್ರುತಿ ಈ ಚಿತ್ರದಲ್ಲಿ ನಟಿಸಿದ್ದೇ ಆದಲ್ಲಿ, ಇದೇ ಮೊದಲ ಬಾರಿಗೆ ಪ್ರಭಾಸ್ ಜೊತೆ ಶ್ರುತಿ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶ್ರುತಿ ಹಾಸನ್ ಕೂಡ ವಿಜಯ್ ಕಿರಗಂದೂರು ನಿರ್ಮಾಣದ ಸಲಾರ್ ನಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ಸಲಾರ್ ಚಿತ್ರದಲ್ಲಿ  ಪ್ರಭಾಸ್ ಎದುರಾಳಿಯಾಗಿ ನಟಿಸಲು ತಮಿಳು ನಟ ವಿಜಯ್ ಸೇತುಪತಿಯನ್ನು ಸಂಪರ್ಕಿಸಲಾಗಿದೆ ಎಂದು ಕೇಳಿಬರುತ್ತಿದೆ. ಆಕ್ಷನ್ ಎಂಟರ್‌ಟೈನರ್ ಮಾಸ್ಟರ್‌ನಲ್ಲಿ ವಿಜಯ್ ಅಭಿನಯದಿಂದ ಪ್ರಭಾವಿತರಾದ ಪ್ರಶಾಂತ್ ನೀಲ್, ವಿಜಯ್ ಅವರನ್ನು ಸಲಾರ್ ಗೆ ಕರೆತರಲು ಯೋಜಿಸಿದ್ದಾರೆ. ಆದರೆ, ಡೇಟ್ಸ್  ಸಮಸ್ಯೆಗಳಿಂದಾಗಿ, ಸಲಾರ್ ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸುವುದು ಇನ್ನು  ಕನ್ ಫರ್ಮ್ ಆಗಿಲ್ಲ. ಪ್ರಸ್ತುತ ಶ್ರುತಿ ಹಾಸನ್ ಇತ್ತೀಚೆಗೆ ಬಿಡುಗಡೆಯಾದ ಕ್ರ್ಯಾಕ್ ಚಿತ್ರದ ಯಶಸ್ಸನ್ನು ಮೆಲುಕು ಹಾಕುತ್ತಿದ್ದಾರೆ. ಇದರಲ್ಲಿ ಮಾಸ್ ಮಹಾರಾಜ ರವಿ ತೇಜಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಪ್ರಶಾಂತ್ ನೀಲ್ ಪ್ರಭಾಸ್ ಸಲಾರ್ ಚಿತ್ರಕ್ಕೆ ಮಾಡೆಲ್ ಅನ್ನು ಹಾಕಿಕೊಳ್ಳಲು ಯೋಜಿಸುತ್ತಿದ್ದಾರೆ ಎಂಬುದು ಬಹಿರಂಗವಾಗಿತ್ತು. ಪ್ರಶಾಂತ್ ನೀಲ್ ಅವರ ಪ್ರಕಾರ, ಹೊಸ ಎಂಟ್ರಿ ಮಾತ್ರ ಸಲಾರ್’ನಲ್ಲಿ ಈ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಆದ್ದರಿಂದ ಸಲಾರ್ ಚಿತ್ರಕ್ಕಾಗಿ ಪ್ರಭಾಸ್ ಮಾಡೆಲ್’ಗಳ ಹುಡುಕಾಟದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಸಲಾರ್ ಚಿತ್ರ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.  ಈ ಹಿಂದೆ ಶ್ರದ್ಧಾ ಕಪೂರ್, ಕತ್ರೀನಾ  ಅಥವಾ ದಿಶಾ ಪಟಾನಿ ಸಲಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ  ಎಂಬ ಮಾತು ಕೇಳಿಬರುತ್ತಿತ್ತು. ಸಲಾರ್’ ಚಿತ್ರಕ್ಕೆ ಹೀರೋಯಿನ್ ಯಾರು ಎಂಬ ವಿಚಾರವೇ ದೊಡ್ಟ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ, ದಕ್ಷಿಣ ಭಾರತದ ಖ್ಯಾತ ನಟ ಸಲಾರ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪ್ರಸ್ತುತ, ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋ ಆಗಿ ಮಿಂಚುತ್ತಿರುವ ಹೀರೋ ಈಗ ಸಲಾರ್ ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಎಂದೂ ಮಾಹಿತಿಗಳು ಬರುತ್ತಿವೆ.

ವಿಜಯ್ ನಟಿಸಿದ್ದ ಮಾಸ್ಟರ್ ಚಿತ್ರದಲ್ಲಿ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದರು. ಸೇತುಪತಿ ಪರ್ಫಾಮೆನ್ಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಂದ್ಹಾಗೆ, ಸೇತುಪತಿ ಭಾಷೆಯ ಗಡಿ ಮೀರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ, ಪ್ಯಾನ್ ಇಂಡಿಯಾ ಚಿತ್ರ ಸಲಾರ್‌ಗೆ ಸೇತುಪತಿ ಎಂಟ್ರಿ ಹೈಪ್ ಕ್ರಿಯೇಟ್ ಮಾಡಬಹುದು ಎನ್ನುವ ಲೆಕ್ಕಾಚಾರ ಇದೆ. ಇತ್ತೀಚಿಗಷ್ಟೆ ಸಲಾರ್ ಮುಹೂರ್ತ ನೆರವೇರಿದೆ. ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ ಪೂರ್ವ ತಯಾರಿ ನಡೆಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಫೆಬ್ರವರಿಯಿಂದ ಚಿತ್ರೀಕರಣ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *