ತುಪ್ಪ ಭಾರತೀಯ ಅಡುಗೆಯಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿರುವ ಸಾಮಾಗ್ರಿಯಾಗಿದೆ. ಇದರ ಪ್ರಯೋಜನಗಳನ್ನು ನಮ್ಮ ಹಿರಿಯರು ನೂರಾರು ವರ್ಷಗಳಿಂದಲೂ ಅರಿತು ನಮ್ಮ ಆರೋಗ್ಯವನ್ನು ಕಾಪಾಡಲು ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ತುಪ್ಪದ ಬಗ್ಗೆ ಜನಸಾಮಾನ್ಯರಿಗೆ ದುಬಾರಿಯಾದ ಮತ್ತು ತಿಂದರೆ ದಪ್ಪನಾಗುವ ಭಯ ಎಂಬ ಮೊದಲಾದ ಭಾವನೆಗಳಿವೆ. ಆದ್ದರಿಂದ ನಾವು ಇಲ್ಲಿ ತುಪ್ಪದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಅತಿ ಹೆಚ್ಚು ಕೆಲಸ ಮಾಡುವವರು ಎಮ್ಮೆಯ ತುಪ್ಪವನ್ನು ಸೇವನೆ ಮಾಡಬೇಕು. ಹಾಗೆಯೇ ಕಡಿಮೆ ಕೆಲಸ ಮಾಡುವವರು ಮತ್ತು ವಿದ್ಯಾರ್ಥಿಗಳು ಹಸುವಿನ ತುಪ್ಪವನ್ನು ಸೇವನೆ ಮಾಡಬೇಕು. ತುಪ್ಪವನ್ನು ಅನ್ನ ಚಪಾತಿಗಳನ್ನು ಸೇವನೆ ಮಾಡುವಾಗ ಬಳಸುತ್ತಾರೆ. ಯಾವಾಗ ತುಪ್ಪದ ಸೇವನೆಯ ಪ್ರಮಾಣ ಮಿತಿಗಿಂತಲೂ ಹೆಚ್ಚುತ್ತದೋ ಆಗಲೇ ಅನಿವಾರ್ಯವಾಗಿ ಅಪಾರ ಪ್ರಮಾಣದ ಕೊಬ್ಬನ್ನು ದೇಹ ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ತೂಕ ಹೆಚ್ಚುತ್ತದೆಯೇ ಹೊರತು ಮಿತ ಪ್ರಮಾಣದ ತುಪ್ಪದ ಸೇವನೆಯಿಂದ ತೂಕ ಏರುವುದಿಲ್ಲ.
ತುಪ್ಪವು ಸಂಸ್ಕರಿಸಿದ ಅಥವಾ ಬಿಸಿ ಮಾಡಿದ ಬೆಣ್ಣೆಯಾಗಿದೆ ಎಂದು ಹೇಳಬಹುದು. ಇದು ಉಪ್ಪುರಹಿತವಾಗಿರುತ್ತದೆ. ಬೆಣ್ಣೆಯನ್ನು ಚಿಕ್ಕ ಉರಿಯಲ್ಲಿ ನಸು ಹಳದಿ ದ್ರವವಾಗುವವರೆಗೆ ಬಿಸಿ ಮಾಡಿ ಬಳಿಕ ಉರಿ ಆರಿಸಿ ತಣಿಸಿದಾಗ ತುಪ್ಪ ತಯಾರಾಗುತ್ತದೆ. ಬೆಣ್ಣೆಯಲ್ಲಿರುವ ನೀರಿನ ಅಂಶ ಬಿಸಿಯಾಗುವಾಗ ಆವಿಯಾಗಿ ಹೋಗುತ್ತದೆ. ನಂತರದಲ್ಲಿ ಆ ದ್ರವವನ್ನು ಸೋಸಿದಾಗ ತುಪ್ಪ ಸಿಗುತ್ತದೆ. ಇದು ಜೀರ್ಣಾಂಗಗಳ ಆರೋಗ್ಯವನ್ನು ಕಾಪಾಡುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ.
ಈ ಅದ್ಭುತ ಸಾಮಗ್ರಿ ಕೇವಲ ರುಚಿಕಾರಕ ಮಾತ್ರವಲ್ಲ, ಔಷಧೀಯ, ಸೌಂದರ್ಯವರ್ಧಕ ಗುಣಗಳನ್ನೂ ಹೊಂದಿದೆ. ಹಾಗೆಯೇ ವಿದ್ಯಾರ್ಥಿಗಳಿಗೆ ದಿನನಿತ್ಯ ತುಪ್ಪವನ್ನು ನೀಡಿದರೆ ಅವರ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇಂದಿನ ದಿನಗಳಲ್ಲಿ ಲಾಭವೇ ಮುಖ್ಯವಾಗಿರುವಾಗ ಕಲಬೆರಕೆಯೂ ಕಂಡುಬರುತ್ತಿದೆ. ಹಾಗಾಗಿ ತುಪ್ಪವನ್ನು ಖರೀದಿ ಮಾಡುವಾಗ ನೋಡಿಕೊಂಡು ಖರೀದಿ ಮಾಡಬೇಕು. ಈಗಿನ ದಿನಗಳಲ್ಲಿ ಹಣಕ್ಕೆ ಹೆಚ್ಚಿನ ಬೆಲೆ ಇದೆ.