ತಂದೆ ಮಗಳ ಸಂಬಂಧ ಅನ್ನೋದೇ ಒಂದು ರೀತಿ ಚೆಂದ. ಹೆಣ್ಣುಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ ಸಹ ತಾಯಿಗಿಂತ ಹೆಚ್ಚು ತಂದೆಯನ್ನು ಹಚ್ಚಿಕೊಳ್ಳುತ್ತಾರೆ ಹೆಚ್ಚಾಗಿ ತಂದೆಯ ಜೊತೆಗೆ ಒಡನಾಟ ಹೊಂದಿರುತ್ತಾರೆ. ತಂದೆ ಕೂಡಾ ಇದಕ್ಕೆ ಹೊರತಾಗಿ ಏನೂ ಇರುವುದಿಲ್ಲ. ಮಗಳನ್ನು ಅರ್ಥ ಮಾಡಿಕೊಂಡು , ಅತಿಯಾಗಿ ಮಗಳನ್ನು ಹಚ್ಚಿಕೊಳ್ಳುತ್ತಾನೆ. ಮಗಳಿಗೆ ಬೇಕಾಗಿದ್ದು ಎಲ್ಲಾದೂ, ಮಗಳಿಗೆ ಸ್ವಾತಂತ್ರ್ಯ ಕೂಡಾ ದೊರೆಯುವುದು ತಂದೆಯಿಂದಲೇ ಹೆಚ್ಚು. ಅದಕ್ಕೇ ಹೆಣ್ಣುಮಕ್ಕಳು ಅಪ್ಪ ಅಂದರೆ ಅಷ್ಟೊಂದು ಇಷ್ಟ ಪಡೋದು, ಅಪ್ಪನಿಗಾಗಿ ಪ್ರಾಣ ಕೊಡೋಕೂ ತಯಾರಿರುತ್ತಾರೆ. ಜೀವನದಲ್ಲಿ ಹೆಣ್ಣುಮಕ್ಕಳು ತೀರಾ ಆತ್ಮೀಯವಾಗಿ ಇರುವ ಮೊದಲ ಪುರುಷ ಅಂದರೆ ಅದು ಆಕೆಯ ತಂದೆ ಮಾತ್ರ. ಅದೇ ರೀತಿಯ ತಂದೆ ಮಗಳ ಕುರಿತಾಗಿ ನಾವು ಈ ಲೇಖನದ ಮೂಲಕ ಪುಟ್ಟ ಮಾಹಿತಿಯನ್ನು ತಿಳಿದುಕೊಳ್ಳೋಣ.
ತಿರುಪತಿ, ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯಲ್ಲೀಗ ಆ ತಂದೆ ಮಗಳದೇ ಚರ್ಚೆ. ಇಲಾಖೆಯ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳು, ಅಧಿಕೃತ ಟ್ವಿಟರ್, ಫೇಸ್‍ಬುಕ್ ಖಾತೆಗಳಲ್ಲಿ ಹರಿದಾಡುತ್ತಿರುವ ಆ ನಿಷ್ಕಲ್ಮಶ ನಗೆಯ ಫೋಟೋವನ್ನು ನೋಡಿ ಎಂತಹವರ ಮನಸ್ಸಿನಲ್ಲಾದರೂ ಸಣ್ಣ ಭಾವಲಹರಿ ದ್ರವಸಿ ಗಂಟಲು ಉಬ್ಬದೇ ಇರದು. ಗುಂಟೂರು ನಗರ ದಕ್ಷಿಣ ವಿಭಾಗದಲ್ಲಿ ಡಿವೈಎಸ್‍ಪಿಯಾಗಿರುವ ಜೆಸ್ಸಿ ಪ್ರಶಾಂತಿ ತನ್ನ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದ ವೇಳೆ ಇನ್ಸ್‍ಪೆಕ್ಟರ್ ರ್ಯಾಂಕ್‍ನ ಅಧಿಕಾರಿಯೊಬ್ಬರು ಎದುರು ನಿಂತು ಕಾಲನ್ನು ನೆಲಕ್ಕಪ್ಪಳಿಸಿ ಬಿಗಿಗತ್ತಿನಲ್ಲಿ ಪೊಲೀಸ್ ಸಲ್ಯೂಟ್ ಹೊಡೆದು ನಮಸ್ತೆ ಮೇಡಮ್ ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜೆಸ್ಸಿ ಪ್ರಶಾಂತಿ ಏನು ಅಪ್ಪಾ ಎಂದು ಕೇಳುತ್ತಾ ನಗುತ್ತಾಳೆ.
ಆ ಕ್ಷಣವನ್ನು ಅಲ್ಲಿದ್ದ ಇತರ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಆ ಫೋಟೋದಲ್ಲಿ ಸಮವಸ್ತ್ರದಲ್ಲಿರುವ ಮಗಳ ನಿಷ್ಕಲ್ಮಶ ನಗು, ಅಪ್ಪನ ಗೌರವ, ಪ್ರೀತಿ ತುಂಬಿದ ನಗು ಭಾವೋದ್ವೇಗಕ್ಕೆ ಕಾರಣವಾಗಿದೆ. ಇನ್ಸಪೆಕ್ಟರ್ ಶ್ಯಾಮ್ ಸುಂದರ್ ತಿರುಪತಿ ಕಲ್ಯಾಣಿ ಡ್ಯಾಮ್ ಪೊಲೀಸ್ ತರಬೇತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 2021ರ ವರ್ಷದ ಆರಂಭದ ಸಲುವಾಗಿ ತಿರುಪತಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಪೊಲೀಸ್ ಸಮಾವೇಶ ಆಯೋಜಿಸಲಾಗಿತ್ತು. ಡಿಜಿಪಿ ಗೌತಮ್ ಸ್ವಾಂಗ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
2018ರ ಬ್ಯಾಚ್‍ನ ಡಿವೈಎಸ್‍ಪಿ ಆಗಿರುವ ಜೆಸ್ಸಿ ಪ್ರಶಾಂತಿ ಕೂಡ ಆ ಸಮಾವೇಶಕ್ಕೆ ಬಂದಿದ್ದರು. ಅಲ್ಲೇ ಕೆಲಸ ಮಾಡುತ್ತಿದ್ದ ಇನ್ಸ್‍ಪೆಕ್ಟರ್ ಶ್ಯಾಮ್ ಸುಂದರ್ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತಿರುವ ತಮ್ಮ ಪುತ್ರಿಯನ್ನು ಕಂಡು ಹತ್ತಿರ ಹೋಗಿ ಹೆಮ್ಮೆಯಿಂದ ಸಲ್ಯೂಟ್ ಮಾಡಿದ್ದಾರೆ. ಯಾವುದೇ ಕೃತಿಮತೆಗಳಿಲ್ಲದೆ ಸಹಜವಾಗಿ ಕ್ಲಿಕ್ಕಿಸಲಾಗಿರುವ ಈ ಫೋಟೋ ಸದ್ಯ ಆಂಧ್ರ ಪ್ರದೇಶದಲ್ಲಿ ಟ್ರೆಂಡಿಂಗ್‍ನಲ್ಲಿದೆ. ಶಿಷ್ಯ ಗುರುವನ್ನು ಮೀರಿಸಬೇಕು, ಮಗ ತಂದೆಯನ್ನು ಮೀರಿಸಬೇಕು ಎಂಬ ಮಾತಿದೆ. ಇಲ್ಲಿ ಮಗಳು ಅಪ್ಪನಿಗಿಂತ ಉನ್ನತ ಅಧಿಕಾರಿಯಾಗಿದ್ದಾಳೆ. ಮಗಳ ಸಾಧನೆಯ ಬಗ್ಗೆ ಸಂತೃಪ್ತಿ ಹೊಂದಿರುವ ಇನ್ಸ್‍ಪೆಕ್ಟರ್ ಶ್ಯಾಮ್ ಸುಂದರ್, ಹೆಮ್ಮೆಯಿಂದ ಸಲ್ಯೂಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮಗಳನ್ನು ಪೊಲೀಸ್ ಸಮವಸ್ತ್ರದಲ್ಲಿ ನೋಡಿ ತುಂಬಾ ಖುಷಿ ಆಯ್ತು. ಆಕೆ ಸೇವೆಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಾಳೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ತಂದೆಯ ಬಗ್ಗೆ ಪ್ರೀತಿಯಿಂದ ಮಾತನಾಡಿರುವ ಡಿವೈಎಸ್‍ಪಿ ಜೆಸ್ಸಿ ಪ್ರಶಾಂತಿ, ನನಗೆ ನನ್ನ ತಂದೆಯೇ ಆದರ್ಶ. ವೃತ್ತಿಯಲ್ಲಿ ಅವರ ಬದ್ಧತೆ, ನಿಷ್ಠೆ ನನಗೆ ಸದಾ ಸ್ಪೂರ್ತಿ. ಅವರ ಆಶಯಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾಳೆ. ತಂದೆ ಮಗಳ ಈ ಮಧುರ ಕ್ಷಣಕ್ಕೆ ತಿರುಪತಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ರೆಡ್ಡಿ ಸಾಕ್ಷಿಯಾಗಿದ್ದಾರೆ.