ಬ್ಯಾಡಗಿ ಕೆಂಪು ಮೆಣಸಿನಕಾಯಿ ಅಡುಗೆಗೆ ಬಳಸಿದರೆ ಅಡುಗೆಯ ರುಚಿ, ಬಣ್ಣಾನೆ ಬೇರೆ ಅದರ ರುಚಿ, ಬಣ್ಣವನ್ನು ಬೇರೆ ಯಾವುದೇ ಮೆಣಸಿನಕಾಯಿ ಕೊಡುವುದಿಲ್ಲ. ಬ್ಯಾಡಗಿ ಮೆಣಸಿನಕಾಯಿಗೆ ದೂರದ ಊರಿನಿಂದಲೂ ಬೇಡಿಕೆ ಇರುತ್ತದೆ. ಈ ವಾರದಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ ಗಗನಕ್ಕೇರಿದೆ ಇದು ಮೆಣಸು ಬೆಳೆಗಾರರಿಗೆ ಸಿಹಿ ಸುದ್ದಿ. ಬ್ಯಾಡಗಿ ಮೆಣಸಿನಕಾಯಿ ದರ ಎಷ್ಟಿದೆ, ಅದರ ಮಾರುಕಟ್ಟೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಅಂತರರಾಷ್ಟ್ರೀಯ ಖ್ಯಾತಿ ಪಡೆದ ಬ್ಯಾಡಗಿ ಮೆಣಸಿನಕಾಯಿಯ 1,05,090 ಚೀಲಗಳು ಮಾರುಕಟ್ಟೆಗೆ ಬಂದಿದೆ. ಬ್ಯಾಡಗಿ ಮೆಣಸಿನಕಾಯಿಯ ಬೆಲೆ ಹೆಚ್ಚಾಗಿದೆ, ಬ್ಯಾಡಗಿ ಡಬ್ಬಿ ತಳಿ ಕ್ವಿಂಟಲ್ 50,111ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ. ದೇಶದಲ್ಲಿ ಆಂಧ್ರದ ಗುಂಟೂರು ಮೆಣಸಿನಕಾಯಿ ಮಾರುಕಟ್ಟೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ನಮ್ಮ ಬ್ಯಾಡಗಿ ಮಾರುಕಟ್ಟೆ ಇದೆ. ಬ್ಯಾಡಗಿ ಮೆಣಸಿನಕಾಯಿಯ ರುಚಿ ಹಾಗೂ ಬಣ್ಣವನ್ನು ಮೀರಿಸುವ ಮೆಣಸಿನಕಾಯಿ ಯಾವುದು ಇಲ್ಲ ಹೀಗಾಗಿ ದೆಹಲಿ ಮಸಾಲ ಕಂಪನಿ, ಕೇರಳ, ಚೆನ್ನೈ ಸೇರಿದಂತೆ ದೇಶದ ಹಲವು ಭಾಗಗಳಿಗೆ ಬ್ಯಾಡಗಿ ಮೆಣಸಿನಕಾಯಿ ರಫ್ತಾಗುತ್ತದೆ. ಇಲ್ಲಿನ ವಿಶೇಷವೇನೆಂದರೆ ಆನ್ಲೈನ್ ಟೆಂಡರ್ ಮೂಲಕ ಗುಣಮಟ್ಟಕ್ಕೆ ತಕ್ಕಂತೆ ಉತ್ತಮ ದರ ನೀಡಲಾಗುತ್ತದೆ. ಈ ಕಾರಣದಿಂದಲೇ ಮಾರುಕಟ್ಟೆಗೆ ಮೆಣಸಿನಕಾಯಿ ಚೀಲಗಳು ಬಂದು ಬೀಳುತ್ತವೆ ಅದು ಅಲ್ಲದೆ ದೂರದ ಆಂಧ್ರ ಸೇರಿ ಬಳ್ಳಾರಿ, ರಾಯಚೂರು ಪ್ರದೇಶದಲ್ಲಿ ರೈತರು ತಾವು ಬೆಳೆದ ಮೆಣಸಿನಕಾಯಿಯನ್ನು ತರುತ್ತಾರೆ.
ಹಿಂದೆಂದೂ ಕೇಳದ ಬೆಲೆಯನ್ನು ಮೆಣಸಿನಕಾಯಿಗೆ ಕೊಡಬೇಕಾಗಿರುವುದರಿಂದ ಮೆಣಸು ಬೆಳೆಗಾರರಿಗೆ ಸಂತೋಷವೇ ಸಂತೋಷ. ಇದಕ್ಕೂ ಮೊದಲು ಮೆಣಸಿನಕಾಯಿ ಅಬ್ಬಬ್ಬಾ ಎಂದರೆ 28,000 ರೂ ದಿಂದ 30,000 ರೂಪಾಯಿಗೆ ಮಾರಾಟವಾಗುತಿತ್ತು. ಕೊರೋನ, ಅತಿವೃಷ್ಟಿ, ಎಪಿಎಂಸಿ ಕಾಯಿದೆ ತಿದ್ದುಪಡಿ ನಡುವೆಯೂ ಮಾರುಕಟ್ಟೆಯಲ್ಲಿ ಈ ಬದಲಾವಣೆ ಆಶ್ಚರ್ಯ ತರುತ್ತದೆ. ಕಳೆದ ವಾರ ಎಂದರೆ 2020 ನೆ ಇಸವಿಯ ಕೊನೆಯ ವಾರದಲ್ಲಿ ಕ್ವಿಂಟಲ್ ಮೆಣಸಿನಕಾಯಿ 33,000-45,000 ರೂಪಾಯಿಗೆ ಮಾರಾಟವಾಗಿದೆ. ಆದರೆ ಸೋಮವಾರ ಏಕಾಏಕಿ ದರ ಹೆಚ್ಚಾಗಿದೆ. ಕ್ವಿಂಟಲ್ ಮೆಣಸಿನಕಾಯಿಗೆ ತೊಲೆ ಬಂಗಾರದ ದರ ನಿಗದಿಯಾಗಿದೆ. ಬಂಗಾರ ಖರೀದಿಸುವುದು ಮೆಣಸನ್ನು ಖರೀದಿಸುವುದು ಒಂದೇ ಆಗಿದೆ. ಮೆಣಸಿನಕಾಯಿ ಖರೀದಿಸಲು ಅರ್ಧ ಲಕ್ಷ ಕೊಡಬೇಕಾಗಿದೆ. ಪ್ರತಿ ವಾರ ಮಾರುಕಟ್ಟೆಯಲ್ಲಿ ದರ ಏರುತ್ತಿದೆ ಇದರಿಂದ ಮೆಣಸು ಬೆಳೆದ ರೈತರ ಸಂತೋಷಕ್ಕೆ ಪಾರವೇ ಇಲ್ಲ. ರೈತರ ಜೊತೆಗೆ ದಲ್ಲಾಳಿಗಳು ಸಂತಸ ಪಟ್ಟಿದ್ದಾರೆ. ಒಟ್ಟಿನಲ್ಲಿ ಕೊರೋನದಿಂದ ಕಷ್ಟಕ್ಕೆ ಸಿಲುಕಿದ ರೈತರಲ್ಲಿ ಮೆಣಸು ಬೆಳೆಗಾರರು ಸಂತಸ ಪಡುವಂತಾಗಿರುವುದು ಒಳ್ಳೆಯ ಲಕ್ಷಣವಾಗಿದೆ.