ಚಿಕ್ಕವಯಸ್ಸಿನಲ್ಲಿ ಹೆಚ್ಚಾಗಿ ಮರಹತ್ತಿ ತಿನ್ನುತ್ತಿರುವ ಹಣ್ಣು ಪೇರಳೆ ಹಣ್ಣು. ಈ ಹಣ್ಣಿಗೆ ಸೀಬೆಹಣ್ಣು ಎಂತಲೂ ಕರೆಯುತ್ತಾರೆ. ಹಳ್ಳಿಗಳಲ್ಲಿ ಹೆಚ್ಚಾಗಿ ಕಂಡುಬರುವ ಪೇರಳೆ ಹಣ್ಣಿನ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಹಾಗಾದರೆ ಪೇರಳೆ ಹಣ್ಣಿನ ಸೇವನೆಯಿಂದ ಯಾವೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಹಳ್ಳಿಗಳಲ್ಲಿ ಸಾಮಾನ್ಯವಾಗಿ ಪೇರಳೆ ಹಣ್ಣು ಕಂಡುಬರುತ್ತದೆ. ಈ ಹಣ್ಣು ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ, ಈ ಹಣ್ಣಿಗೆ ಉಪ್ಪು ಖಾರ ಸೇರಿಸಿಕೊಂಡು ತಿಂದರೆ ಅದರ ರುಚಿಯೇ ಬೇರೆ. ಪೇರಳೆ ಹಣ್ಣುಗಳಲ್ಲಿ ಕೆಂಪು ಪೇರಳೆ ಹಣ್ಣು ಮತ್ತು ಬಿಳಿ ಪೇರಳೆ ಹಣ್ಣು ಎಂದು ಎರಡು ರೀತಿಯಲ್ಲಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪೇರಳೆ ಹಣ್ಣಿನ ಬೆಲೆ ಸ್ವಲ್ಪ ಹೆಚ್ಚಳವಾಗಿದೆ. ಪೇರಳೆ ಗಿಡವನ್ನು ಬೆಳೆಸುವುದು ಬಹಳ ಸುಲಭ. ಪೇರಳೆ ಗಿಡದ ಎಲೆ ಹಾಗೂ ಹಣ್ಣು ಎಲ್ಲವೂ ಔಷಧೀಯ ಗುಣವನ್ನು ಹೊಂದಿರುತ್ತದೆ.
ಪೇರಳೆ ಹಣ್ಣಿನ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. 4 ಸೇಬು ಹಣ್ಣನ್ನು ತಿನ್ನುವುದು ಒಂದು ಪೇರಳೆ ಹಣ್ಣನ್ನು ತಿನ್ನುವುದು ಸಮ ಎಂದು ಹೇಳುತ್ತಾರೆ. ಪೇರಳೆ ಹಣ್ಣಿನಲ್ಲಿ ಅತ್ಯಧಿಕ ಪೌಷ್ಟಿಕಾಂಶಗಳಿವೆ ಈ ಕಾರಣದಿಂದಲೆ ಈ ಹಣ್ಣಿನ ಬೆಲೆ ಹೆಚ್ಚಳವಾಗುತ್ತಿದೆ. ಆಗಾಗ ಪೇರಳೆ ಹಣ್ಣನ್ನು ಸೇವಿಸುವುದರಿಂದ ಅನೇಕ ರೋಗಗಳು ಹತ್ತಿರ ಸುಳಿಯುವುದಿಲ್ಲ.
ಸಕ್ಕರೆ ಖಾಯಿಲೆ ಇರುವವರು ಪೇರಳೆ ಹಣ್ಣನ್ನು ಸೇವಿಸುವುದು ಉತ್ತಮ. ಈ ಹಣ್ಣಿನಲ್ಲಿರುವ ಬೀಟಾ-ಕ್ಯಾರೋಟಿನ್, ನಾರಿನಂಶ, ಪೊಟ್ಯಾಷಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ಕಿತ್ತಳೆ ಹಣ್ಣಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದ್ದು ಈ ಹಣ್ಣಿನ ಸೇವನೆಯಿಂದ ಮರೆವು ಖಾಯಿಲೆ, ಸಂಧಿವಾತಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರ ಇಡುತ್ತದೆ.
ಪೇರಳೆ ಹಣ್ಣಿನಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಪೇರಳೆ ಹಣ್ಣು ಮತ್ತು ಎಲೆಗಳ ಸೇವನೆಯಿಂದ ವಾಂತಿ-ಬೇಧಿಯಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಪೇರಳೆ ಹಣ್ಣು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿರುವವರು ಮುಖ್ಯವಾಗಿ ಪೇರಳೆ ಹಣ್ಣನ್ನು ಸೇವಿಸಲೇಬೇಕು. ಪೇರಳೆ ಹಣ್ಣಿನಲ್ಲಿರುವ ವಿಟಮಿನ್ ಇ ಅಂಶವು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ ಅಲ್ಲದೆ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಕಣ್ಣಿನ ಪೊರೆ ಆಗದಂತೆ ನೋಡಿಕೊಳ್ಳುತ್ತದೆ.
ಮುಖದಲ್ಲಿ ಆಗಿರುವ ಪಿಂಪಲ್ಸ್ ಹೋಗಿಸಲು ಪೇರಳೆ ಎಲೆಗಳನ್ನು ನುಣ್ಣಗೆ ಅರೆದು ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಪಿಂಪಲ್ಸ್ ನಿವಾರಣೆಯಾಗುತ್ತದೆ. ಪೇರಳೆ ಹಣ್ಣಿನ ಸೇವನೆಯಿಂದ ತ್ವಚೆಗೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಬಾಯಿಯಲ್ಲಿ ಹುಣ್ಣು ಆಗುತ್ತಿದ್ದರೆ ಪೇರಳೆ ಎಲೆಯನ್ನು ಅರೆದು ಹುಣ್ಣಿನ ಜಾಗಕ್ಕೆ ಹಚ್ಚಿಕೊಂಡರೆ ಬೇಗನೆ ವಾಸಿಯಾಗುತ್ತದೆ.
ಪೇರಳೆ ಹಣ್ಣಿನ ಸೇವನೆಯಿಂದ ನಮ್ಮ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಪೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ, ನಾರಿನಂಶ, ಪ್ರೊಟೀನ್, ಕಾರ್ಬೊಹೈಡ್ರೇಟ್, ವಿಟಮಿನ್ ಎ, ಬಿ, ಸಿ ಹಾಗೂ ಇ ಹೇರಳವಾಗಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ. ಸಾಧ್ಯವಾದರೆ ಪೇರಳೆ ಹಣ್ಣಿನ ಗಿಡವನ್ನು ಬೆಳೆಸಿ ಜೊತೆಗೆ ಪ್ರತಿದಿನ ಒಂದು ಪೇರಳೆ ಹಣ್ಣನ್ನು ಸೇವಿಸಿ.