ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ ಆಸ್ತಿಗಳನ್ನು ರಿಜಿಸ್ಟರ್ ಮಾಡಬೇಕಾಗುತ್ತದೆ. ಸಾರ್ವಜನಿಕರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಿಯಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದಲ್ಲಿ ಅಥವಾ ಸೈಟ್ ಅಥವಾ ಮನೆಯನ್ನು ಖರೀದಿ ಮಾಡಿದ್ದಲ್ಲಿ ಅಥವಾ ಈಗಿರುವ ಆಸ್ತಿಗಳನ್ನು ಸರ್ಕಾರ ಸಿದ್ಧಪಡಿಸಿರುವ ಈ ಸ್ವತ್ತು ಎಂಬ ತಂತ್ರಾಂಶದಿಂದ ಆಸ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಯನ್ನು ಸಲ್ಲಿಸಿ ವಿಶಿಷ್ಟ ಸಂಖ್ಯೆಯನ್ನು ಪಡೆದುಕೊಂಡು ಆಸ್ತಿಯನ್ನು ನೋಂದಾಯಿಸುವುದು ಆಗಿದೆ. ಇದನ್ನು ಈ ಸ್ವತ್ತು ಎಂದು ಕರೆಯಲಾಗುತ್ತದೆ. ಈ ಸ್ವತ್ತನ್ನು ಮಾಡಿಸಲು ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಆದ್ದರಿಂದ ನಾವಿಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಾಲೀಕನ ವಿಳಾಸದ ಗುರುತಿನ ಪತ್ರ ಮತ್ತು ಆಧಾರ್ ಕಾರ್ಡ್, ವೋಟರ್ ಕಾರ್ಡ್, ಯಾವುದಾದರು  ಒಂದು ಮಾಲೀಕನ ಗುರುತಿನ ಪತ್ರ ಬೇಕಾಗುತ್ತದೆ. ಇದಕ್ಕೆ ಸ್ವತ್ತಿನ ಮಾಲೀಕತ್ವದ ದಾಖಲಾತಿಗಳು ಮುಖ್ಯವಾಗಿ ಬೇಕಾಗುತ್ತದೆ. ಚೆಕ್ ಬಂದಿ ವಿವರವು ಬೇಕಾಗುತ್ತದೆ. ಮುಖ್ಯವಾಗಿ ಅರ್ಜಿದಾರರ ಆಧಾರ್ ಕಾರ್ಡ್ ಜೆರಾಕ್ಸ್ ಕಾಫಿ ಬೇಕಾಗುತ್ತದೆ ಮತ್ತು ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ ಸಹ ಇಲ್ಲಿ ಬೇಕಾಗುತ್ತದೆ. ಆಸ್ತಿಯ ನಿವೇಶನದ ನಕ್ಷೆಯು ಕೂಡ ಬೇಕಾಗುತ್ತದೆ. ಕ್ರಯಪತ್ರ ಪಾಣಿ ಪತ್ರ ಗಳು ಬೇಕಾಗುತ್ತದೆ. ಇದರ ಜೊತೆಗೆ ಕಟ್ಟಡದ ತೆರಿಗೆಯ ರಸೀದಿ ಪತ್ರ ಮತ್ತು ವಿದ್ಯುತ್ ಬಿಲ್ ಬೇಕಾಗುತ್ತದೆ.

ಇವಿಷ್ಟು ಅಗತ್ಯ ದಾಖಲೆಗಳೊಂದಿಗೆ  ಗ್ರಾಮಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಿಡಿಒ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ. ನಂತರ ಪಿಡಿಓ ಅವರು ಈ ಸ್ವತ್ತು ತಂತ್ರಾಂಶದ ಮೂಲಕ ನೀಡಿರುವ ಅರ್ಜಿಯನ್ನು ಅಪ್ಲೋಡ್ ಮಾಡುತ್ತಾರೆ. ಆಸ್ತಿ ನಕ್ಷೆಯನ್ನು ಪಡೆಯಲು ಮೋಜಿನಿಗೆ ವರ್ಗಾಯಿಸುತ್ತಾರೆ. ನಂತರ ಅರ್ಜಿ ಸಲ್ಲಿಸಿದವರು ನಾಡಕಚೇರಿಗೆ ಮೋಜಿನಿಗೋಸ್ಕರ 800 ರೂ ಶುಲ್ಕ ಪಾವತಿಯನ್ನು ತುಂಬಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು.

ಇದಾದ 21 ದಿನಗಳ ಒಳಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅರ್ಜಿದಾರರು ಮತ್ತು ಬಾಜುದಾರರ ಸಮ್ಮುಖದಲ್ಲಿ ಸ್ಥಳಪರಿಶೀಲನೆಯು ನಡೆಯುತ್ತದೆ. ಆಸ್ತಿಗೆ ನಕ್ಷೆ ಬಂದ ನಂತರ ದ್ವಿತೀಯ ದರ್ಜೆ ಸಹಾಯಕ ಅದನ್ನು ಅನುಮೋದಿಸಿ ಕಾರ್ಯದರ್ಶಿ ಅಥವಾ ಪಿಡಿಓಗೆ ಕಳಿಸುತ್ತಾರೆ. ನಂತರ ಈ ಸ್ವತ್ತಿನ ಮೇಲೆ ಪಿಡಿಒ ಅವರು ಡಿಜಿಟಲ್ ಸೈನ್ ಮಾಡುವ ಮೂಲಕ ಅನುಮೋದಿಸುತ್ತಾರೆ. ಗ್ರಾಮ ಪಂಚಾಯಿತಿಯಲ್ಲಿ ಈ ಸ್ವತ್ತು ಮಾಡಿಸಲು ಕೇವಲ ಐವತ್ತು ರೂಪಾಯಿ ಶುಲ್ಕ ಇರುತ್ತದೆ. ಈ ಸ್ವತ್ತಿಗೆ ಅರ್ಜಿ ಸಲ್ಲಿಸಿದರೆ 45 ದಿನಗಳ ಒಳಗಾಗಿ ಈ ಸ್ವತ್ತು ನೀಡಬೇಕೆಂಬ ನಿಯಮವಿದೆ. ಈ ರೀತಿಯಾಗಿ ಈ ಸ್ವತ್ತನ್ನು ಪಂಚಾಯತಿ ವ್ಯಾಪ್ತಿಯಲ್ಲಿರುವ ಜಮೀನಿಗೆ ಮಾಡಿಸಬಹುದಾಗಿದೆ.

Leave a Reply

Your email address will not be published. Required fields are marked *