ಸಿನಿಮಾ ನಿರ್ಮಾಪಕಿ ಒಬ್ಬರು ತಮ್ಮ ಎದೆಹಾಲನ್ನು ದಾನ ಮಾಡಿದ್ದಾರೆ. ಅವರು ಯಾರು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶಿಶುವಿಗೆ ಎದೆ ಹಾಲಿಗಿಂತ ಉತ್ತಮ ಆಹಾರ ಬೇರೆ ಯಾವುದು ಇಲ್ಲ. ಎದೆ ಹಾಲಿನಲ್ಲಿ ಮಗುವಿಗೆ ಬೇಕಾಗುವ ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ಇರುವುದಲ್ಲದೇ ಮಗುವಿನ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ಸಿನಿಮಾ ನಿರ್ಮಾಪಕರೊಬ್ಬರು ತಮ್ಮ ಎದೆ ಹಾಲನ್ನು ದಾನ ನೀಡುವ ಮೂಲಕ ಮಾತೃತ್ವ ಮೆರೆದಿದ್ದಾರೆ. ಅವರು 42 ಲೀಟರ್ ತಮ್ಮ ಎದೆ ಹಾಲನ್ನು ದಾನ ಮಾಡಿದ್ದಾರೆ. ತಾಪ್ಸಿ ಪನ್ನು ಹಾಗೂ ಭೂಮಿ ಪೆಡ್ನೇಕರ್ ಅಭಿನಯದ ಸಾಂಡ್ ಕಿ ಆಂಖ ಎಂಬ ಬಾಲಿವುಡ್ ಸಿನಿಮಾದ ನಿರ್ಮಾಪಕಿ ನಿಧಿ ಪಾರಮಾರ್ ಹೀರಾನಂದಾನಿ ಈ ಮಹಾನ್ ಕಾರ್ಯ ಮಾಡಿದ್ದಾರೆ.
ಕಳೆದ ಮೇ ತಿಂಗಳಿನಿಂದ ಸುಮಾರು 42 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದಾರೆ. ಈ ಮೂಲಕ ಎದೆ ಹಾಲು ಉಣಿಸಲು ಕಷ್ಟ ಆಗುತ್ತಿರುವ ಬಾಣಂತಿಯರ ಮಕ್ಕಳಿಗೆ ಅಥವಾ ತಾಯಿಯಿಲ್ಲದ ಮಕ್ಕಳಿಗೆ ಆಪದ್ಭಾಂದವರಾಗಿದ್ದಾರೆ. ನಿಧಿ ಅವರು ಇದೇ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಅವರು ತಮ್ಮ ಮಗುವಿಗೆ ಎದೆ ಹಾಲನ್ನು ನೀಡುವ ಜೊತೆಗೆ ಇತರ ನವಜಾತ ಶಿಶುಗಳ ಸಹಾಯಕ್ಕೆ ನಿಂತಿರುವುದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ನನ್ನ ಮಗನಿಗೆ ಎದೆ ಹಾಲು ಉಣಿಸಿದ ಬಳಿಕ ಸಾಕಷ್ಟು ಎದೆ ಹಾಲು ಉಳಿಯುವುದನ್ನು ಅರಿತುಕೊಂಡೆ ಅಲ್ಲದೇ ಫ್ರಿಜ್ಜನಲ್ಲಿ ಹಾಲನ್ನು ಶೇಖರಿಸಿಟ್ಟರೆ 3-4 ತಿಂಗಳುಗಳ ಕಾಲ ಕೆಡುವುದಿಲ್ಲ ಎಂದು ಎಲ್ಲೋ ಓದಿದ ನೆನಪಿತ್ತು. ನನ್ನ ಮಗುವಿಗೆ ಒಂದುವರೆ ತಿಂಗಳು ಕಳೆದ ಬಳಿಕ ಹಾಲನ್ನು ಶೇಖರಿಸಿಡಲು ಆರಂಭಿಸಿದೆ ನಂತರ ಅದನ್ನು ದಾನ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಬಾಂದ್ರಾದ ಮಹಿಳಾ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರನ್ನು ಸಂಪರ್ಕ ಮಾಡಿ ಅವರ ಸಲಹೆಯ ಮೇರೆಗೆ ಆಸ್ಪತ್ರೆಯೊಂದಕ್ಕೆ ಎದೆ ಹಾಲನ್ನು ದಾನ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಎದೆ ಹಾಲಿನಿಂದ ವಂಚಿತರಾದ ಮಕ್ಕಳಿಗೆ ಹಾಲು ಸಿಕ್ಕಂತಾಗಿದೆ. ಮಕ್ಕಳ ಪಾಲಿಗೆ ನಿಧಿ ಅನ್ನಪೂರ್ಣೆಯಾಗಿದ್ದಾರೆ. ಎದೆ ಹಾಲಿನ ಕೊರತೆಯಿಂದ ಮಕ್ಕಳು ದುರ್ಬಲರಾಗಿರುವುದನ್ನು ನೋಡಿದ ನಿಧಿ ಅವರು ಮುಂದಿನ ಒಂದು ವರ್ಷದವರೆಗೆ ಎದೆ ಹಾಲನ್ನು ದಾನ ಮಾಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ವಿಭಿನ್ನವಾಗಿ ಮಕ್ಕಳ ಪೋಷಣೆಯ ಕೊರತೆಯನ್ನು ನೀಗಿಸಲು ಮುಂದಾಗಿರುವ ನಿಧಿ ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸೋಣ.