ನಟ ಕಿಚ್ಚ, ಮುಖ್ಯಮಂತ್ರಿಗಳು ಹಾಗೂ ಹಲವು ಗಣ್ಯರಿಂದ ರಾಜ್ಯದ 1,200 ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಮಾಡಲಾಗಿದೆ. ಇವರ ಜೊತೆಗೆ ಅನೇಕ ಶಿಕ್ಷಣ ತಜ್ಞರು, ಸಂಘ ಸಂಸ್ಥೆಗಳು, ಉಪ ಕುಲಪತಿಗಳು, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಕೂಡ ಕೈಜೋಡಿಸಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋದರೆ ಸರ್ಕಾರಿ ಶಾಲೆಗಳಲ್ಲಿ ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬಹುದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕೊರೊನಾದಿಂದ ಶಾಲಾ ಬಾಗಿಲು ಮುಚ್ಚಲಾಗಿದ್ದು, ಕೆಲ ಪೋಷಕರು ಆನ್ಲೈನ್ ಕ್ಲಾಸ್ಗೆ ಫೀಸ್ ಕಟ್ಟೋದು ಅಸಾಧ್ಯ ಅಂತ ಸರ್ಕಾರಿ ಶಾಲೆಗಳ ಕಡೆ ಮುಖ ಮಾಡ್ತಿದ್ದಾರೆ. ಇತ್ತ ಡಿಸೆಂಬರ್ವರೆಗೂ ಶಾಲೆಗಳನ್ನ ಓಪನ್ ಮಾಡಲ್ಲ ಅಂತ ಶಿಕ್ಷಣ ಸಚಿವರು ಹೇಳುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವಲ್ಲೇ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರಕ್ಕೆ ದೊಡ್ಡ ದೊಡ್ಡ ಜನರು ಮುಂದೆ ಬರುತ್ತಿದ್ದಾರೆ. ಸರಿಯಾದ ಮೂಲ ಸೌಕರ್ಯವಿಲ್ಲದೆ, ಮಕ್ಕಳ ಹಾಜರಾತಿಯ ಕೊರತೆ ಹೀಗೆ ಸಾಕಷ್ಟು ಕಾರಣಗಳಿಂದ ಅದೆಷ್ಟೋ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರಿ ಶಾಲೆ ಅಂದಾಕ್ಷಣ ಮೂಗು ಮುರಿಯುವ ಜನರೇ ಹೆಚ್ಚು. ಹೀಗಾಗಿ ಈ ವ್ಯವಸ್ಥೆಯನ್ನ ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರರಾದ ಪ್ರೊ ಎಂ.ಆರ್. ದೊರೆಸ್ವಾಮಿ, ದೆಹಲಿ ಹಾಗೂ ತೆಲಂಗಾಣ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರದ ಪ್ಲಾನ್ ಅನ್ನು ಸರ್ಕಾರದ ಮುಂದಿಟ್ಟರು. ಇದಕ್ಕೆ ಒಪ್ಪಿಗೆ ಕೂಡ ಸಿಕ್ಕಿತ್ತು.
ಇದೀಗ ಈ ಯೋಜನೆಗೆ ವ್ಯಾಪಕ ಬೆಂಬಲ ಸಿಕ್ಕಿದ್ದು, ಸಿಎಂ ಬಿಎಸ್ವೈ ಸೇರಿದಂತೆ ಕೆಲವು ನಟರು, ವಿಶ್ವವಿದ್ಯಾಲಯಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕಂಪನಿಗಳು ಎಲ್ಲಾ ಸೇರಿ ಒಟ್ಟು 1200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಇನ್ನು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಪ್ರಮುಖರ ಹೆಸರುಗಳು ಹಾಗೂ ಅವರು ದತ್ತು ಪಡೆದ ಶಾಲೆಗಳ ಸಂಖ್ಯೆ ಈ ರೀತಿಯಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 10 ಶಾಲೆ ಗಳನ್ನು ದತ್ತು ಪಡೆದಿದ್ದಾರೆ ಹಾಗೂ ನಟ ಕಿಚ್ಚ ಸುದೀಪ್ 8 ಶಾಲೆ ದತ್ತು ಪಡೆದಿದ್ದಾರೆ. ಸೇಂಟ್ ಜೋಸೆಫ್ ಮಹಾವಿದ್ಯಾಲಯ 18 ಸರ್ಕಾರಿ ಶಾಲೆಗಳನ್ನೂ ದತ್ತು ಪಡೆದಿದೆ.
ರಾಜೀವ್ ಗಾಂಧಿ ಯೂನಿವರ್ಸಿಟಿ 10 ಸರ್ಕಾರಿ ಶಾಲೆ, ಮೈಸೂರು ವಿಶ್ವವಿದ್ಯಾಲಯ 10 ಸರ್ಕಾರಿ ಶಾಲೆ, ಡಿಸಿಎಂ ಅಶ್ವಥ್ ನಾರಾಯಣ್ ಅವರು 8 ಸರ್ಕಾರಿ ಶಾಲೆ, ಮೌಂಟ್ ಕಾರ್ಮಲ್ ಕಾಲೇಜು 5 ಸರ್ಕಾರಿ ಶಾಲೆ, ಶ್ರೀಕೃಷ್ಣ ಇಂಟರ್ ನ್ಯಾಷನಲ್ ಸ್ಕೂಲ್ 5 ಸರ್ಕಾರಿ ಶಾಲೆ ಗಳನ್ನೂ ದತ್ತು ಪಡೆದಿವೆ.
ಇನ್ನು ಶಾಲೆಗಳನ್ನು ದತ್ತು ಪಡೆಯುವವರ ಜೊತೆ ಶಿಕ್ಷಣ ಇಲಾಖೆ ಒಂದು ಒಪ್ಪಂದ ಮಾಡಿಕೊಳ್ಳುತ್ತೆ. ಆ ಪ್ರಕಾರ ದತ್ತು ಪಡೆದವರು ಈ ಕೆಳಕಂಡ ಸೌಲಭ್ಯಗಳನ್ನು ಶಾಲೆಗಳಿಗೆ ಒದಗಿಸಬೇಕು. ಶಾಲೆಗೆ ನೀಡಬೇಕಾದ ಮೂಲಭೂತ ಸೌಕರ್ಯಗಳು e ರೀತಿಯಾಗಿ ಇರುತ್ತವೆ. ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ಪೂರೈಕೆ, ಬೇಡಿಕೆಗೆ ತಕ್ಕಂತೆ ಶಿಕ್ಷಕರು ಮತ್ತು ತರಗತಿ ಕೊಠಡಿಗಳನ್ನು ಒದಗಿಸುವುದು. ಲೈಬ್ರರಿ, ಶಾಲೆಗೆ ಕಾಂಪೌಂಡ್ ಹಾಕಿಸೋದು, ಯೋಗ ಶಾಲೆಗಳು, ಕಂಪ್ಯೂಟರ್ ಅಂಡ್ ಸ್ಮಾರ್ಟ್ ಬೋರ್ಡ್, ಬೇಸಿಗೆ ಶಿಬಿರ, ರಿಪೇರಿ ಮತ್ತು ಪೇಂಟಿಂಗ್, ಕ್ರೀಡೆ, ಫಿಟ್ನೆಸ್ ಉಪಕರಣಗಳನ್ನು ಒದಗಿಸುವುದು ಇವುಗಳನ್ನು ಮಾಡಬೇಕಿದೆ. ರಾಜ್ಯದಲ್ಲಿ ಒಟ್ಟು 45 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಸದ್ಯ 1200 ಶಾಲೆಗಳನ್ನ ದತ್ತು ಪಡೆಯಲಾಗಿದ್ದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ದತ್ತು ಸ್ವೀಕಾರ ಪತ್ರ ವಿತರಣೆ ಮಾಡಲಿದ್ದಾರೆ. 200 ಖಾಸಗಿ ಕಂಪನಿಗಳಿಗೆ, ಒಂದು ಕಂಪನಿ ನೂರು ಶಾಲೆಗಳನ್ನು ದತ್ತು ಪಡೆಯುವಂತೆ ಮನವಿ ಮಾಡಲಾಗಿದೆ. ಅವರು ಒಪ್ಪಿದರೆ 20 ಸಾವಿರ ಶಾಲೆಗಳು ಅಭಿವೃದ್ಫಿಯಾಗುವ ಭರವಸೆಯಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಶಾಲೆಗಳನ್ನು ದತ್ತು ಪಡೆಯುವ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ ಉತ್ತಮ ಮೂಲಸೌಕರ್ಯದ ಜೊತೆಗೆ ಗುಣಮಟ್ಟದ ಶಿಕ್ಷಣ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.