ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಇನ್ನೊಬ್ಬರ ಹೆಸರಿಗೆ ಬರೆಯಬೇಕು ಎಂದರೆ, ಅದನ್ನು ವಿಲ್ ಆಗಿ ಅಥವಾ ದಾನಪತ್ರವಾಗಿ ನೀಡುತ್ತಾರೆ. ವಿಲ್ ಅನ್ನು ಉಯಿಲು, ಮರಣ ಪತ್ರ, ಮೃತ್ಯು ಪತ್ರ ಎಂದು ಕೂಡ ಕರೆಯುತ್ತಾರೆ. ಇನ್ನು ದಾನ ಪತ್ರವನ್ನು ಗಿಡ್ತ್ ಡೀಡ್, ಭಕ್ಷೀಸು ಪತ್ರ, ಉಡುಗೊರೆ ಪತ್ರ ಎಂದು ಕೂಡ ಕರೆಯುತ್ತಾರೆ. ಇವುಗಳಲ್ಲಿ ಆಸ್ತಿ ವರ್ಗಾವಣೆಯನ್ನು ಯಾವ ರೀತಿ ಮಾಡುವುದು ಒಳ್ಳೆಯದು?
ಈ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ, ಅದಕ್ಕೆ ಇಂದು ಉತ್ತರ ತಿಳಿಸುತ್ತೇವೆ. ಮತ್ತೊಬ್ಬರಿಗೆ ಆಸ್ತಿ ವರ್ಗಾವಣೆ ಮಾಡಬೇಕು ಎಂದರೆ ಆ ವ್ಯಕ್ತಿಗೆ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಇರಬೇಕು. ಹಾಗೆಯೇ ಅದು ಆತನ ಸ್ವಯಾರ್ಜಿತ ಆಸ್ತಿ ಆಗಿರಬೇಕು. ತಮ್ಮ ಆಸ್ತಿಯನ್ನು ಇನ್ನೊಬ್ಬರಿಗೆ ಕೊಡಬೇಕು ಎಂದರೆ, ಅದನ್ನು ವಿಲ್ ಅಥವಾ ದಾನಪತ್ರ ಯಾವ ರೀತಿಯಾದರು ಕೊಡಬಹುದು. ಆದರೆ ಯಾವ ರೀತಿ ಕೊಡಬೇಕು ಎನ್ನುವುದನ್ನು ಸರಿಯಾಗಿ ಯೋಚಿಸಬೇಕು. ಇದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವುದಕ್ಕೆ ಕೆಲವು ಅಂಶಗಳನ್ನು ಪರಿಗಣಿಸಬೇಕು.
ಎಲ್ಲವನ್ನು ತಿಳಿದು ನಂತರ ವರ್ಗಾವಣೆ ಮಾಡಿ. ಕಡಿಮೆ ಖರ್ಚಿನಲ್ಲಿ ಆಸ್ತಿ ವರ್ಗಾವಣೆ ಮಾಡಬೇಕು ಎಂದರೆ, ನಿಮಗೆ ವಿಲ್ ಅತ್ಯುತ್ತಮವಾದ ಆಯ್ಕೆ ಆಗಿರುತ್ತದೆ. ವಿಲ್ ಅನ್ನು ಕಡಿಮೆ ಖರ್ಚಿನಲ್ಲಿ ಸುಲಭವಾಗಿ ವರ್ಗಾವಣೆ ಮಾಡಬಹುದು. ವಿಲ್ ಮಾಡಿಸಲು ಖರ್ಚು ಮಾಡುವ ಅವಶ್ಯಕತೆ ಇಲ್ಲ. ಒಂದು ಬಿಳಿ ಹಾಳೆಯಲ್ಲಿ ನೀವು ಏನು ಬರೆಯಬೇಕೋ ಅದೆಲ್ಲವನ್ನು ಬರೆದು, ಸಾಕ್ಷಿಗಳ ಸೈನ್ ಹಾಕಿಸಿದರೆ ಸಾಕು. ಅದನ್ನು ರಿಜಿಸ್ಟರ್ ಮಾಡಿಸಲೇಬೇಕು ಎನ್ನುವ ಅವಶ್ಯಕತೆ ಕೂಡ ಇರುವುದಿಲ್ಲ.
ನಿಮಗೆ ಮಾಡಿಸಬೇಕು ಎನ್ನಿಸಿದರೆ ರಿಜಿಸ್ಟರ್ ಮಾಡಿಸಬಹುದು ಅಥವಾ ನೋಟರಿ ಮಾಡಿಸಿದರು ಸಾಕು. ವಿಲ್ ಮೂಲಕ ಆಸ್ತಿ ವರ್ಗಾವಣೆ ಮಾಡಲು ಮುದ್ರಂಕ ಶುಲ್ಕವನ್ನು ಕೂಡ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಹೆಚ್ಚಿನ ಜನರು ವಿಲ್ ಮೂಲಕ ಆಸ್ತಿ ವರ್ಗಾವಣೆ ಮಾಡುತ್ತಾರೆ. ಆದರೆ ದಾನಪತ್ರದಿಂದ ಆಸ್ತಿ ವರ್ಗಾವಣೆ ಮಾಡುವುದರಿಂದ, ಖರ್ಚು ಜಾಸ್ತಿ ಆದರೂ ಕೂಡ, ಹೆಚ್ಚು ಅನುಕೂಲಗಳು ಸಿಗುತ್ತದೆ. ಹಾಗಾಗಿ ಆಸ್ತಿ ವರ್ಗಾವಣೆಗಿಂತ ಮೊದಲು ಯೋಚಿಸಿ ನಿರ್ಧಾರ ಮಾಡಿ.