ಉತ್ತರಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ಬಾರಿ ಬಹಳ ಪ್ರವಾಹ ಉಂಟಾಗಿದೆ. ಎಕರೆ ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದೆ. ಇದರಿಂದ ಈರುಳ್ಳಿಯ ಬೆಲೆ ಗಗನಕ್ಕೇರಿದೆ. ದಸರಾ ಸಮಯದಲ್ಲಿ ಈರುಳ್ಳಿ ಬೆಳೆ ಬೆಲೆಯು ಏರಿಕೆಯನ್ನು ಕಂಡ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈಗ 14 ರಿಂದ 15 ದಿನಗಳ ಹಿಂದೆ ಈರುಳ್ಳಿಯ ಬೆಲೆಯು 40 ರಿಂದ 50 ರೂಪಾಯಿ ಇತ್ತು. ಹಾಗೆಯೇ ಅದೇ ಬೆಲೆಗೆ ಮಾರಾಟವಾಗುತ್ತಿತ್ತು. ಆದರೆ ಈಗ ಅದೇ ಈರುಳ್ಳಿಯ ಬೆಲೆ ಗಗನಕ್ಕೇರಿದೆ. ಅಂದರೆ ಒಂದು ಕಿಲೋಗ್ರಾಮ್ ಗೆ ಅಂದರೆ ಒಂದು kg100ರೂಪಾಯಿ ಗಡಿ ದಾಟಿದೆ. ಹೀಗಾಗಿ ಈರುಳ್ಳಿ ಖರೀದಿಸುವುದು ಹೇಗೆ ಎನ್ನುವುದು ಗ್ರಾಹಕರ ದೊಡ್ಡ ಚಿಂತೆಯಾಗಿದೆ. ಏಕೆಂದರೆ ಈರುಳ್ಳಿ ಇಲ್ಲದೇ ದಿನ ಕಳೆಯುವುದು ಸ್ವಲ್ಪ ಕಷ್ಟ ಸಾಧ್ಯ. ಹೆಚ್ಚಾಗಿ ಬಯಲು ಸೀಮೆಯಲ್ಲಿ ಈರುಳ್ಳಿ ಇಲ್ಲದೇ ದಿನವೇ ಕಳೆಯುವುದಿಲ್ಲ. ಹೋಟೆಲ್ ಮತ್ತು ಖಾನಾವಳಿಗಳಲ್ಲಿ ಅಲಂಕಾರಕ್ಕಾದರೂ ಈರುಳ್ಳಿ ಬೇಕು.
ಹೊರರಾಜ್ಯ ಮತ್ತು ಜಿಲ್ಲೆಗಳಾದ ಕೊಪ್ಪಳ, ಗದಗ, ಧಾರವಾಡ, ರಾಯಚೂರು, ವಿಜಯಪುರ ಹಾಗೂ ಇತರೆ ಉತ್ತರಕರ್ನಾಟಕದ ಜಿಲ್ಲೆಗಳಿಂದ ಈರುಳ್ಳಿ ಸರಬರಾಜು ಆಗಬೇಕಿತ್ತು. ಆದರೆ ಮಳೆ ಪ್ರಭಾವದಿಂದಾಗಿ ಅಲ್ಲಿ ಬೆಳೆದ ಈರುಳ್ಳಿಗಳು ಶೇಕಡಾ 70ರಷ್ಟು ಹಾನಿಯಾಗಿದೆ. ಸಣ್ಣ ಕಳಪೆ ಮಟ್ಟದ ಈರುಳ್ಳಿಗೂ ಬೆಲೆ ಬಂದಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಬಹಳಷ್ಟು ಏರಿಕೆಯಾಗಬಹುದು ಎಂದು ವ್ಯಾಪಾರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಇದನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಸಣ್ಣ ಪ್ರಮಾಣದ ಈರುಳ್ಳಿಗೆ ಕಿಲೋಗ್ರಾಮ್ ಗೆ 70 ರೂಪಾಯಿ ಆಗಿ ಮಾರಾಟವಾಗುತ್ತಿದೆ.
ದೊಡ್ಡಗಾತ್ರದ ಈರುಳ್ಳಿಗೆ 120 ರೂಪಾಯಿಯವರೆಗೆ ಹೋಗಲಿದೆ. ಇದರಿಂದಲೇ ಹೋಟೆಲ್ ಗಳಲ್ಲಿ ಸಹ ಈರುಳ್ಳಿ ದೋಸೆಯನ್ನು ನಿಷೇಧಿಸಲಾಗಿದೆ. ನಂತರದ ದಿನಗಳಲ್ಲಿ ಈರುಳ್ಳಿ 150ರೂಪಾಯಿ ದಾಟಿದರೂ ಆಶ್ಚರ್ಯ ಇಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಈರುಳ್ಳಿ ಆಮದು ಮಾಡಿಕೊಳ್ಳುವುದು ಕಡಿಮೆ ಆಗಿದೆ. ಎಲ್ಲಿಯೂ ಸಹ ಸಿಗುತ್ತಿಲ್ಲ. ಇರುವ ಸ್ಟಾಕ್ ನಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಇದರ ಬೆಲೆ ಹೆಚ್ಚಾಗಿದ್ದರೂ ಸಹ ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆದರೆ ಇದರಿಂದ ಮಧ್ಯವರ್ತಿಗಳಿಗೆ ಆದಾಯವಾಗಲಿದೆ. ರೈತರಿಗೆ ಲಾಭವಾಗುವ ಸಾಧ್ಯತೆ ಕಡಿಮೆ. ಇದರಿಂದ ರೈತರಿಗೆ ಬರೆ ಎಳೆದಂತಾಗುತ್ತದೆ.