ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಹಿರಿಯ ಪತ್ರಕರ್ತ, ಹಾಯ್‌ ಬೆಂಗಳೂರು ಟ್ಯಾಬ್ಲಾಯ್ಡ್‌ನ ಪ್ರಧಾನ ಸಂಪಾದಕರಾದ ರವಿ ಬೆಳಗೆರೆ (62) ಶುಕ್ರವಾರ ಬೆಳಗಿನ ಜಾವ ನಿಧನರಾದರು. ಗುರುವಾರ ತಡರಾತ್ರಿ ಹಾಯ್ ಬೆಂಗಳೂರ್ ಕಚೇರಿಯಲ್ಲೇ ಅವರಿಗೆ ಹೃದಯಾಘಾತವಾಗಿದೆ. ಕೂಡಲೆ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ  ಫಲಕಾರಿಯಾಗಿಲ್ಲ. ಮೂಲತಃ ಬಳ್ಳಾರಿಯವರಾದ ರವಿ ಬೆಳಗೆರೆ ಅವರು ಜನಿಸಿದ್ದು 1958 ಮಾರ್ಚ್ 15 ರಲ್ಲಿ. ಪತ್ರಿಕಾರಂಗದ ಹಲವು ವಿಭಾಗದಲ್ಲಿ ಕೆಲಸ ಮಾಡಿದವರು.  ಅಪರಾಧ ಜಗತ್ತಿನ ಬಗ್ಗೆ ಅವರು ಬರೆದ ಪುಸ್ತಕಗಳು ಲೆಕ್ಕವೇ ಇಲ್ಲ. 

1995ರಲ್ಲಿ ಹಾಯ್‌ ಬೆಂಗಳೂರು ಆರಂಭಿಸಿದ್ದರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ. ಸರ್ಪ ಸಂಬಂಧ, ಭೀಮಾತೀರದ ಹಂತಕರು, ನೀ ಹಿಂಗ ನೋಡಬೇಡ ನನ್ನ,ಡಿ ಕಂಪನಿ, ರಾಜ್ ಲೀಲಾ ವಿನೋದ ಸೇರಿದಂತೆ ಹಲವು ಕೃತಿಗಳು ಬೆಳಗೆರೆ ಕೊಡುಗೆ. ಶಿಕ್ಷಣವನ್ನ ಬಳ್ಳಾರಿಯಲ್ಲಿ ಮುಗಿಸಿದ್ದ ರವಿಬೆಳಗೆರೆ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಆರಂಭ ಮಾಡುತ್ತಾರೆ.

ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ರವಿಬೆಳಗೆರೆ ಭಾವನ ಆಡಿಯೋ , ಭಾವನ ಪ್ರಕಾಶನ , ಪ್ರರ್ಥಾನ ಶಾಲೆಯ ಸಂಸ್ಥಾಪಕರು. ಕ್ರೈಂ ಡೈರಿ ಕಾರ್ಯಕಮದ ನಿರೂಪಕರಾಗಿದ್ದ ರವಿ ಬೆಳಗೆರೆ ದೊಡ್ಡ ಹೆಸರು ಸಂಪಾದಿಸಿದ್ದರು. ಯುವ ಮನಸುಗಳಿಗಾಗಿ ಅವರು ಆರಂಭಿಸಿದ್ದ ಓ ಮನಸೆ ಪಾಕ್ಷಿಕ ಸಹ ಜನಮನ್ನಣೆಗೆ ಪಾತ್ರವಾಗಿತ್ತು. ಕಿರುತೆರೆಯಲ್ಲಿಯೂ ಬೆಳಗೆರೆ ಕಾಣಿಸಿಕೊಂಡಿದ್ದು ಅವರ ನಿರೂಪಣೆ ಮೆಚ್ಚುಗೆಗೆ ಪಾತ್ರವಾಗಿತ್ತು. ಬಿಗ್ ಬಾಸ್ ನ ಕೊನೆಯ ಸೀಸನ್ ನಲ್ಲಿಯೂ ಬೆಳಗೆರೆ ಭಾಗವಹಿಸಿದ್ದರು. ಪ್ರಾರ್ಥನಾ ಶಾಲೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದಾಗಿ ತಿಳಿದು ಬಂದಿದೆ. ಅವರಿಗೆ ಇಬ್ಬರು ಪತ್ನಿಯರು, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ. ತಡರಾತ್ರಿ ಹೃದಯಾಘಾತ ಆದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧರಾದರು. ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!