ಎಲ್‌ಪಿಜಿ ಸಿಲಿಂಡರ್ ಬೆಲೆ ಸಾವಿರ ರೂಪಾಯಿ ದಾಟಿದೆ, ಉದ್ದಿನ ಬೇಳೆ, ಅಕ್ಕಿ ದರದಲ್ಲೂ ಏರಿಕೆಯಾಗಿದೆ. ಹೀಗಿದ್ದರೂ ‘ಇಡ್ಲಿ ಅಮ್ಮ’ ರೂಪಾಯಿಗೊಂದು ಇಡ್ಲಿ ಕೊಡುವುದು ಮುಂದುವರಿಸಿದ್ದಾರೆ. ಹಸಿದು ಬಂದವರಿಗೆ ಸೌದೆ ಒಲೆ, ಗೋಡೆ ಕುಸಿದಿರುವ ಮನೆಯಲ್ಲೇ ಕಡಿಮೆ ದುಡ್ಡಿನಲ್ಲಿ ಹೊಟ್ಟೆ ತುಂಬ ಇಡ್ಲಿ ಬಡಿಸುತ್ತಿದ್ದ ಅಜ್ಜಿಗೆ ತಾಯಂದಿರ ದಿನದಂದು ಹೊಸ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಆನಂದ್ ಮಹೀಂದ್ರಾ. ದಕ್ಷಿಣ ಭಾರತದ ಬಹುತೇಕ ಎಲ್ಲ ಹೋಟೆಲ್‌ಗಳಲ್ಲೂ ಸಿಗುವ ತಿಂಡಿ ‘ಇಡ್ಲಿ’. ಮೈಸೂರು ಮಲ್ಲಿಗೆ ಇಡ್ಲಿ, ಬಿಡದಿಯ ತಟ್ಟೆ ಇಡ್ಲಿ, ಕಾಂಚೀಪುರಂ ಇಡ್ಲಿ,
ಹೀಗೆ ಜನಪ್ರಿಯ ಇಡ್ಲಿ ತಾಣಗಳೂ ಇವೆ. ಈ ನಡುವೆ ಕೇವಲ ಒಂದು ರೂಪಾಯಿಗೆ ಇಡ್ಲಿ ಕೊಡುವ ಮೂಲಕ ದೇಶದಾದ್ಯಂತ ಸುದ್ದಿಯಾದವರು ತಮಿಳುನಾಡಿನ ಕಮಲತ್ತಾಳ್. 85ರ ವಯಸ್ಸಿನಲ್ಲೂ ನಿತ್ಯ ಸೂರ್ಯೋದಯದ ಹೊತ್ತಿಗೆ ನೂರಾರು ಇಡ್ಲಿ ಬೇಯಿಸುವ ಈ ‘ಅನ್ನಪೂರ್ಣೆಗೆ’ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಚೊಕ್ಕವಾದ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಿನ್ನೆ ತಾಯಂದಿರ ದಿನದಂದು, ಇಡ್ಲಿ ಅಮ್ಮ ತನ್ನ ಹೊಸ ಮನೆಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಉಡುಗೊರೆಯಾಗಿ ನೀಡಲು ಸಮಯಕ್ಕೆ ಸರಿಯಾಗಿ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ನಮ್ಮ ತಂಡಕ್ಕೆ ಅಪಾರ ಕೃತಜ್ಞತೆಗಳು. ಅವಳು ತಾಯಿಯ ಸದ್ಗುಣಗಳ ಸಾಕಾರ, ಪೋಷಣೆ, ಕಾಳಜಿ ಮತ್ತು ನಿಸ್ವಾರ್ಥಳು. ಅವಳನ್ನು ಮತ್ತು ಅವಳ ಕೆಲಸವನ್ನು ಬೆಂಬಲಿಸಲು ಸಂತೋಷವೆನಿಸುತ್ತಿದೆ. ನಿಮ್ಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಸೌದೆ ಒಲೆಯಲ್ಲಿ ಇಡ್ಲಿ ಬೇಯಿಸಿ, ರುಬ್ಬುಕಲ್ಲು ಬಳಸಿ ಚಟ್ನಿ ರುಬ್ಬುತ್ತಿದ್ದ ಇಡ್ಲಿ ಅಮ್ಮನ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಂತೆ ಆನಂದ್ ಮಹೀಂದ್ರಾ, ಎಲ್‌ಪಿಜಿ ಸಿಲಿಂಡರ್ ಸಂಪರ್ಕ ಕೊಡಿಸುವುದಾಗಿ 2019ರ ಸೆಪ್ಟೆಂಬರ್‌ನಲ್ಲಿ ಟ್ವೀಟಿಸಿದ್ದರು. ಅವರು ಟ್ವೀಟ್ ಮಾಡಿದ ಮಾರನೆಯ ದಿನವೇ ಎಚ್‌ಪಿಸಿಎಲ್ ಕಂಪನಿಯವರು ಎಲ್‌ಪಿಜಿ ಸಿಲಿಂಡರ್ ಮತ್ತು ಒಲೆಯ ಸಂಪರ್ಕ ಕಲ್ಪಿಸಿದ್ದರು ಹಾಗೂ ವೆಟ್ ಗ್ರೈಂಡರ್ ಸಹ ಕೊಟ್ಟಿದ್ದರು. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡುವ ಭರವಸೆಯನ್ನು ಈಡೇರಿಸಿದ್ದಾರೆ. ಈ ಮೂಲಕ ಮತ್ತೆ ಜನರ ಮೆಚ್ಚುಗೆಗೆ ಮಹೀಂದ್ರಾ ಪಾತ್ರರಾಗಿದ್ದಾರೆ.
2021ರ ಏಪ್ರಿಲ್‌ನಲ್ಲಿ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದ ಮಹೀಂದ್ರಾ, ಜನರಿಗೆ ಅವರ ಪ್ರಸಿದ್ಧ ಮನೆ-ಬೇಯಿಸಿದ ಆಹಾರವನ್ನು ಬಡಿಸಲು ಇಡ್ಲಿ ಅಮ್ಮಾ ಶೀಘ್ರದಲ್ಲೇ ತಮ್ಮ ಸ್ವಂತ ಮನೆಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದರು. ಈಗ ಆ ಭರವಸೆಯನ್ನು ಮಹೀಂದ್ರ ಈಡೇರಿಸಿದ್ದಾರೆ. ಈ ಕುರಿತ ಪುಟ್ಟ ವೀಡಿಯೋವನ್ನು ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಇಡ್ಲಿ ಅಮ್ಮ ತನ್ನ ಹೊಸ ಮನೆಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದಾಗಿದೆ. ಕಮಲಾತಾಲ್ ಎಂದು ಕರೆಯಲ್ಪಡುವ ಇಡ್ಲಿ ಅಮ್ಮ ಅವರು ತಮಿಳುನಾಡಿನ ಪೆರು ಬಳಿಯ ವಡಿವೇಲಂಪಾಳ್ಯಂ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.
ಅವರು ಸುಮಾರು 37 ವರ್ಷಗಳಿಂದ ಕೇವಲ 1 ರೂಪಾಯಿಗೆ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. 2019ರಲ್ಲಿ ಆಕೆಯ ಕಥೆ ವೈರಲ್ ಆಗಿತ್ತು. ಈ ಕುರಿತಂತೆ ಮಾಹಿತಿ ಪಡೆದ ಮಹೀಂದ್ರಾ ಅವರು ಆಕೆಯ ಮೇಲೆ ಬಂಡವಾಳ ಹೂಡಿಕೆ ಮಡಲು ಸಂತೋಷಪಡುತ್ತೇನೆ ಎಂದು ತಿಳಿಸಿದ್ದರು. ಕಮಲಾತಲ್ ಅವರು ಸೂರ್ಯೋದಯದಿಂದ ಇಡ್ಲಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ ಮತ್ತು ಪ್ರಾಥಮಿಕವಾಗಿ ದೈನಂದಿನ ಕೂಲಿ ಕಾರ್ಮಿಕರಿಗೆ ಆಹಾರ ಒದಗಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ನೀಡಿದ ಭರವಸೆಯಂತೆ ತಾಯಂದಿರ ದಿನದಂದು ಮಹೀಂದ್ರಾ ಅವರು ಹೊಸ ಮನೆಯನ್ನು ನೀಡಿದ್ದು, ಇದೀಗ ಆನಂದ್ ಮಹೀಂದ್ರಾ ಅವರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.