ನಮ್ಮ ದೇಶದ ಗಡಿ ಭಾಗದಲ್ಲಿ ಯುದ್ಧ ನಡೆಯುತ್ತಿರುವಾಗ ನಮ್ಮ ದೇಶದ ಯೋಧರು ವೀರಾವೇಶದಿಂದ ಹೋರಾಡಿ ನಮ್ಮ ದೇಶವನ್ನು, ನಮ್ಮನ್ನು ಶತ್ರು ಪಡೆಯಿಂದ ರಕ್ಷಿಸುವುದು ನಮಗೆಲ್ಲ ಗೊತ್ತಿರುವ ವಿಷಯವಾಗಿದೆ. ಮಂಗಗಳು ಶತ್ರುಗಳ ವಿರುದ್ಧ ಹೋರಾಡಿರುವುದನ್ನು ಎಲ್ಲಾದರೂ ಕೇಳಿದ್ದೀರಾ. ಆಂಜನೇಯ ಸ್ವಾಮಿಯ ರೂಪವಾದ ಮಂಗಗಳ ಪವಾಡ ನಡೆಯುವ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬೀದರ್ ಜಿಲ್ಲೆಯ ಆಂಜನೇಯ ದೇವಸ್ಥಾನದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ನಮ್ಮ ರಾಜ್ಯದಲ್ಲಿ ಅನೇಕ ಪ್ರಸಿದ್ದ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವು ತನ್ನದೆ ಆದ ವಿಶೇಷತೆ, ಪೌರಾಣಿಕ ಹಿನ್ನಲೆ, ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುತ್ತದೆ. ಅದೆ ರೀತಿ ನಮ್ಮ ಕರ್ನಾಟಕದ ಗಡಿ ಜಿಲ್ಲೆ ಬೀದರ್ ನ ಭಾಲ್ಕಿ ತಾಲೂಕಿನ ಚಳಕಾಪುರ ಎಂಬ ಸ್ಥಳದಲ್ಲಿ ಪುರಾಣ ಪ್ರಸಿದ್ಧ ಆಂಜನೇಯ ದೇವಾಲಯವಿದೆ. ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ಸ್ಥಳಕ್ಕೆ ಚಳಕಾಪುರ ಎಂಬ ಹೆಸರು ಬರಲು ಕಾರಣವಿದೆ. ಈ ಹಿಂದೆ ಚಳಕಾದೇವಿ ಎಂಬ ರಾಮನ ಭಕ್ತೆ ಇಲ್ಲಿ ವಾಸವಾಗಿರುತ್ತಾಳೆ. ಆಕೆಯ ಪತಿಯ ಹೆಸರು ಚಳಕಾಸುರ ಅವನೊಬ್ಬ ರಕ್ಕಸ. ಅವನು ಈ ಸ್ಥಳದಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದ್ದನು, ಈ ಸಮಯದಲ್ಲಿ ಶ್ರೀ ರಾಮ, ಲಕ್ಷ್ಮಣ, ಸೀತೆ ವನವಾಸಕ್ಕೆಂದು ಇಲ್ಲಿಯ ಕಾಡಿನಲ್ಲಿ ವಾಸವಾಗಿರುತ್ತಾರೆ. ನಂತರ ಚಳಕಾ ದೇವಿಯ ಕೋರಿಕೆಯ ಮೇರೆಗೆ ಶ್ರೀರಾಮಚಂದ್ರನು ಚಳಕಾಸುರನನ್ನು ವಧಿಸುತ್ತಾರೆ. ಹೀಗಾಗಿ ಈ ಸ್ಥಳಕ್ಕೆ ಚಳಕಾಪುರ ಎಂಬ ಹೆಸರು ಬಂದಿದೆ.

ಪುರಾಣಪ್ರಸಿದ್ಧವಾದ ಈ ಸ್ಥಳದಲ್ಲಿ ಆಂಜನೇಯ ದೇವಾಲಯದಲ್ಲಿರುವ ಆಂಜನೇಯನು ಉತ್ತರಾಭಿಮುಖವಾಗಿ ನೆಲೆಸಿದ್ದಾನೆ. ಈ ದೇವಾಲಯದಲ್ಲಿ ಆಂಜನೇಯನ ಉದ್ಭವ ಮೂರ್ತಿ ಇದೆ. ಸಾಮಾನ್ಯವಾಗಿ ಆಂಜನೇಯ ದೇವಾಲಯದಲ್ಲಿ ಆಂಜನೇಯಸ್ವಾಮಿ ದಕ್ಷಿಣಾಭಿಮುಖವಾಗಿ ನಿಂತಿರುತ್ತಾನೆ, ಉತ್ತರಾಭಿಮುಖವಾಗಿ ನಿಂತಿರುವುದು ಇಲ್ಲಿಯ ವಿಶೇಷವಾಗಿದೆ. ಚಳಕಾಪುರದಲ್ಲಿರುವ ಆಂಜನೇಯ ದೇವಾಲಯಕ್ಕೆ ಬಂದು ಹರಕೆಯನ್ನು ತೀರಿಸಿದರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಇಲ್ಲಿಯ ಭಕ್ತಾದಿಗಳ ಅಚಲ ನಂಬಿಕೆಯಾಗಿದೆ.

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಅನೇಕ ಕಡೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಶಕ್ತಿಶಾಲಿ ಆಂಜನೇಯ ದೇವರ ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ಚಳಕಾಪುರದಲ್ಲಿರುವ ಆಂಜನೇಯ ಸ್ವಾಮಿಯು ತೆಂಗಿನಕಾಯಿ ಪವಾಡಕ್ಕೆ ಹೆಸರುವಾಸಿಯಾಗಿದ್ದಾರೆ. ಈ ದೇವಾಲಯಕ್ಕೆ ಬಂದ ಭಕ್ತಾದಿಗಳು ತಮ್ಮ ಕಷ್ಟವನ್ನು ಹೇಳಿಕೊಂಡು ತೆಂಗಿನಕಾಯಿಯನ್ನು ಕಟ್ಟುತ್ತಾರೆ. ಕಷ್ಟ ಪರಿಹಾರ ಆದನಂತರ ಕಟ್ಟಿದ ತೆಂಗಿನಕಾಯಿಯನ್ನು ಬಿಚ್ಚಿಕೊಂಡು ತೆರಳುತ್ತಾರೆ. ಅದರಲ್ಲೂ ಮಕ್ಕಳಾಗದ ಮಹಿಳೆಯರು ಈ ದೇವಾಲಯಕ್ಕೆ ಬಂದು ದೇವಾಲಯದ ಗೋಡೆಗೆ ತೆಂಗಿನಕಾಯಿಯನ್ನು ಕಟ್ಟಿದರೆ ಮಕ್ಕಳಾಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಪ್ರತಿ ಶನಿವಾರ ಇಲ್ಲಿಯ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಮಂಗಳಾರತಿ ನಡೆಯುತ್ತದೆ ಆ ಸಮಯಕ್ಕೆ ಸರಿಯಾಗಿ ನೂರಾರು ಮಂಗಗಳು ದೇವಾಲಯಕ್ಕೆ ಬರುತ್ತವೆ. ಉಳಿದ ದಿನ ಒಂದು ಮಂಗವು ದೇವಾಲಯದ ಒಳಗೆ ಬರುವುದಿಲ್ಲ. ಈ ದೇವಾಲಯಕ್ಕೆ ಪ್ರತಿ ಶನಿವಾರ ಬರುವ ಮಂಗಗಳಲ್ಲಿ ದೇವರ ಸ್ವರೂಪವಿದೆ ಎಂದು ನಂಬಲಾಗಿದೆ.

ಮಂಗಗಳ ಪವಾಡವನ್ನು ನೋಡಿ ಇಲ್ಲಿಗೆ ಬಂದ ಭಕ್ತಾದಿಗಳು ಮಂಗಗಳಿಗೆ ಹಣ್ಣು, ತಿನಿಸನ್ನು ನೀಡಿ ದರ್ಶನ ಪಡೆಯುತ್ತಾರೆ. ಇಲ್ಲಿಯ ಮಂಗಗಳು ಸಾಮಾನ್ಯವಾದವುಗಳಲ್ಲ. ಸುಮಾರು 200 ವರ್ಷಗಳ ಹಿಂದೆ ಈ ಸ್ಥಳವನ್ನು ನಿಜಾಮರು ಆಕ್ರಮಿಸಿ ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರ ನಡೆಸುತ್ತಿದ್ದಾಗ ಸಾವಿರಾರು ಮಂಗಗಳು ಒಟ್ಟಾಗಿ ನಿಜಾಮರ ವಿರುದ್ಧ ದಿಟ್ಟತನದಿಂದ ಹೋರಾಡಿ ಅಲ್ಲಿಯ ಜನರನ್ನು ನಿಜಾಮರ ಹಿಡಿತದಿಂದ ಮುಕ್ತಿಗೊಳಿಸಿದವು. ಅಲ್ಲಿಯ ಸ್ಥಳೀಯರ ಪ್ರಕಾರ ಸಾಕ್ಷಾತ್ ಆಂಜನೇಯ ದೇವನೆ ಮಂಗಗಳ ರೂಪದಲ್ಲಿ ಆಗಮಿಸಿ ಜನರನ್ನು ನಿಜಾಮರಿಂದ ರಕ್ಷಿಸಿದರು ಎಂದು ನಂಬಿದ್ದಾರೆ. ವಿಶೇಷವೆಂದರೆ ಇಂದಿಗೂ ಈ ಕ್ಷೇತ್ರದಲ್ಲಿ ಮಂಗಗಳ ಪವಾಡ ನಡೆಯುತ್ತಲೆ ಇರುತ್ತದೆ.

ಚಳಕಾಪುರದಲ್ಲಿರುವ ಆಂಜನೇಯ ದೇವಾಲಯದ ಬಳಿ ಪರ್ವತ ಒಂದಿದೆ, ಈ ಪರ್ವತವನ್ನು ಸಂಜೀವಿನಿ ಪರ್ವತ ಎನ್ನುತ್ತಾರೆ. ಆಂಜನೇಯಸ್ವಾಮಿ ಲಂಕೆಗೆ ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಹೋಗುತ್ತಿರುವಾಗ ಸ್ವಾಮಿಯ ಕೈಯಲ್ಲಿರುವ ಪರ್ವತದ ಸಣ್ಣ ಕಲ್ಲು ಚಳಕಾಪುರದ ದಕ್ಷಿಣಭಾಗದಲ್ಲಿ ಬಿದ್ದಿತ್ತು, ಅದೆ ಕಲ್ಲು ಈಗ ಪರ್ವತವಾಗಿ ಬೆಳೆದಿದೆ ಎಂದು ನಂಬಲಾಗಿದೆ. ಈ ಬೆಟ್ಟದ ಮೇಲೆ ರಾಮನ ಭಕ್ತೆಯಾದ ಚಳಕಾದೇವಿಯ ಮೂರ್ತಿ ಹಾಗೂ ಶಿವಲಿಂಗವಿದೆ. ಈ ಸಂಜೀವಿನಿ ಪರ್ವತದಲ್ಲಿ ಹಲವಾರು ಋಷಿ-ಮುನಿಗಳು ಇಂದಿಗೂ ತಪಸ್ಸನ್ನಾಚರಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಐತಿಹಾಸಿಕ ಪ್ರಸಿದ್ದಿಯನ್ನು ಪಡೆದ ಶಕ್ತಿಶಾಲಿ, ನಮ್ಮೆಲ್ಲರ ಉದ್ಧಾರಕ ಆಂಜನೇಯ ಸ್ವಾಮಿ ನಮ್ಮೆಲ್ಲರನ್ನು ಕಾಪಾಡಿ, ಹರಸಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!