ಕೋಟಿ ಲಿಂಗವಾಗಲು ಒಂದೇ ಒಂದು ಲಿಂಗ ಕಡಿಮೆಯಾದ ಕಾರಣ ಈ ಕ್ಷೇತ್ರ ಕಾಶಿಯಾಗುವ ಅವಕಾಶ ಕಳೆದುಕೊಂಡಿತ್ತು ಎಂದು ಇಲ್ಲಿನ ಇತಿಹಾಸ ಹೇಳುತ್ತದೆ. ಬರಗಾಲ ಉಂಟಾಗಿ ಎಲ್ಲಾ ಕಡೆ ನೀರು ಬತ್ತಿದರೂ ಸಹ ಈ ದೇವಾಲಯದ ಕೊಳದಲ್ಲಿ ಮಾತ್ರ ನೀರು ಬತ್ತುವುದಿಲ್ಲ. ನೀರು ಯಾವಾಗಲೂ ತುಂಬಿಕೊಂಡಿಯೇ ಇರುತ್ತದೆ. ನಾವು ಇಲ್ಲಿ ಅಂತಹ ಒಂದು ದೇವಾಲಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ 14ಕಿಲೋಮೀಟರ್ ಸಾಗಿದರೆ ಮಹಾಕೂಟ ಸಿಗುತ್ತದೆ. ಈ ದೇವಾಲಯವನ್ನು ದಕ್ಷಿಣಕಾಶಿ ಎಂದು ಕರೆಯಲಾಗುತ್ತದೆ. ಪ್ರಾಚೀನ ದೇವಾಲಯಗಳ ಕೂಟ ಇದಾಗಿದೆ. ಇಲ್ಲಿ ಹಸಿರಿನಿಂದ ಕೂಡಿದ ಬೆಟ್ಟಗಳ ನಡುವೆ ಗುಡಿಗಳ ಗುಂಪು ಇದೆ. ಜಲ ಹಾಗೂ ಹಸಿರಿನಿಂದ ಕೂಡಿದ ಈ ಪ್ರದೇಶ ಪ್ರವಾಸಿಗರನ್ನು ಮತ್ತು ಭಕ್ತರನ್ನು ಕೈ ಬೀಸಿ ಕರೆಯುತ್ತದೆ. ನಾನಾ ದೇವರುಗಳು ಒಂದೇ ಆವರಣದಲ್ಲಿ ಇದ್ದು ಈ ಭಾಗದ ಜನರಿಗೆ ದಕ್ಷಿಣಕಾಶಿ ಎಂದೆ ಪ್ರಸಿದ್ಧಿ ಪಡೆದಿದೆ.
ನಾನಾಲಿಂಗಗಳ ಕೂಟವಾದ ಇದು ಮಹಾನ್ ಲಿಂಗವೆಂದೇ ಕರೆಯಲ್ಪಡುತ್ತದೆ. ಇಲ್ಲಿನ ಕಲ್ಯಾಣಿ ವಿಷ್ಣುಪುಷ್ಕರಣಿ ಎಂದು ಹೆಸರುವಾಸಿಯಾಗಿದೆ. ಶಿವ, ವಿಷ್ಣು, ಸರಸ್ವತಿ, ವೀರಭದ್ರ ಇನ್ನಿತರ ದೇವರುಗಳ ಕಲೆ ಇಲ್ಲಿ ನೋಡುಗರನ್ನು ಮೂಕವಿಸ್ಮಿತಗೊಳಿಸುತ್ತದೆ. ಇಲ್ಲಿಯ ಈಶ್ವರನನ್ನು ಮಹಾಕೂಟೇಶ್ವರ ಎಂದು ಕರೆಯಲಾಗುತ್ತದೆ. ಈ ದೇವಾಲಯ ದ್ರಾವಿಡ ಶೈಲಿಯನ್ನು ಹೊಂದಿದೆ. ವಿಷ್ಣುಪುಷ್ಕರಣಿ ದಡದಲ್ಲಿ ಇರುವ ಸಂಗಮೇಶ್ವರ ದೇಗುಲ ವಾಸ್ತುಶಿಲ್ಪ ಶೈಲಿಯಿಂದ ಕೂಡಿದೆ. ಬಯಲು ಸೀಮೆಯಲ್ಲಿ ಬೇಸಿಗೆಕಾಲ ಬಂತೆಂದರೆ ಸಾಕು ಹಳ್ಳ, ಕೊಳ್ಳಗಳು ಬತ್ತಿ ಹೋಗುತ್ತವೆ.
ಆದರೆ ಮಹಾಕೂಟದಲ್ಲಿ ಮಾತ್ರ ವಿಷ್ಣುಪುಷ್ಕರಣಿ ಮತ್ತು ಕಾಶಿತೀರ್ಥವೆಂಬ ಎರಡು ಹೊಂಡಗಳು ಎಂತಹ ಬರಗಾಲದಲ್ಲಿಯೂ ಕೂಡ ಬತ್ತುವುದಿಲ್ಲ. ಸದಾ ಕಾಲ ನೀರಿನ ಝರಿ ಇಲ್ಲಿ ಹರಿಯುತ್ತಿರುತ್ತದೆ. ನಿಸರ್ಗದ ಮಡಿಲಲ್ಲಿ ಕಂಗೊಳಿಸುವ ಈ ಕ್ಷೇತ್ರ ಬೇಸಿಗೆಯಲ್ಲಿ ಪ್ರವಾಸಿಗರಿಗೆ ತಣ್ಣನೆಯ ಸುಖ ನೀಡುತ್ತದೆ. ಇಲ್ಲಿ ಉದ್ಭವ ಆಗುವ ಹೆಚ್ಚಿಗೆ ನೀರನ್ನು ಕಾಲುವೆ ಮೂಲಕ ಹೊರ ಹಾಕಿದರೂ ಕೂಡ ಬೊಗಸೆಯಷ್ಟು ಸಹ ನೀರು ಕಡಿಮೆಯಾಗುವುದಿಲ್ಲ. ಹೊಂಡದಲ್ಲಿ ಈಶ್ವರನ ಲಿಂಗವಿದ್ದು ನೀರಿನಲ್ಲಿ ಮುಳುಗಿ ಲಿಂಗದ ದರ್ಶನ ಮಾಡುವುದು ಒಂದು ವಿಶೇಷವಾಗಿದೆ.
ಪುಷ್ಕರಣಿ ಹೊಂಡದ ಮಧ್ಯದಲ್ಲಿ ತುಂಬಾ ವಿಶೇಷವಾದ ಚತುರ್ಮುಖ ಲಿಂಗವಿದೆ. ಇದನ್ನು ಅಗಸ್ತ್ಯ ಮುನಿಗಳು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಪ್ರತಿವರ್ಷ ಬೌದ್ಧ ಪೂರ್ಣಿಮದಂದು ಹೂವಿನ ರಥೋತ್ಸವ ನಡೆಯುತ್ತದೆ. ಇಲ್ಲಿಗೆ ಬರಲು ಬಾದಾಮಿಯಿಂದ ಅರ್ಧ ಗಂಟೆಗೊಮ್ಮೆ ಬಸ್ಸಿನ ಸೌಕರ್ಯ ಇದೆ. ಸ್ವಂತ ವಾಹನ ಇರುವವರು ಬಂಶಂಕರಿ ದರ್ಶನ ಪಡೆದು ಮಹಾಕೂಟವನ್ನು ಸಹ ನೋಡಬಹುದು. ಬೆಂಗಳೂರಿನಿಂದ ಪ್ರತಿ ದಿನ ಮಹಾಕೂಟಕ್ಕೆ ರೈಲ್ವೆ ಇದೆ. ಹುಬ್ಬಳ್ಳಿ ಮತ್ತು ಧಾರವಾಡದಿಂದ 125ಕಿಲೋಮೀಟರ್ ದೂರದಲ್ಲಿ ಇದೆ. ಬಾಗಲಕೋಟೆಯಿಂದ 40ಕಿಲೋಮೀಟರ್ ದೂರ ಇದೆ.