ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ಕೊರೊನಾದಿಂದ ರವಿವಾರ ನಿಧನರಾಗಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಮರಿಮೊಮ್ಮಗ ಸತೀಶ್ ಧುಪೇಲಿಯಾ, ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ನೆಸ್ಬರ್ಗ್ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸಾಯುವ ಮೂರು ದಿನಗಳ ಹಿಂದೆ ಅಷ್ಟೇ ಸತೀಶ್ ತಮ್ಮ 66ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು ಎಂದು ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸತೀಶ್ ಅವರು ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದು ಕಳೆದ ಒಂದು ತಿಂಗಳಿನಿಂದ ನ್ಯುಮೋನಿಯಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ಕೂಡ ತಗುಲಿತ್ತು. ಶನಿವಾರ ಸಂಜೆ ಅವರಿಗೆ ತೀವ್ರ ಹೃದಯಾಘಾತ ಉಂಟಾಯಿತು ಎಂದು ಸಹೋದರಿ ಉಮಾ ಧುಪೇಲಿಯಾ ಮೆಸ್ತ್ರಿ ತಿಳಿಸಿದ್ದಾರೆ.
ಸತೀಶ್ ಅವರು ತಮ್ಮ ಮತ್ತೋರ್ವ ಸಹೋದರಿ ಕೃತಿ ಅವರನ್ನ ಕೂಡ ಅಗಲಿದ್ದಾರೆ. ಮಹಾತ್ಮಾ ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ 20 ವರ್ಷಗಳ ಕಾಲ ನೆಲೆಸಿದ ಬಳಿಕ ಭಾರತಕ್ಕೆ ಹಿಂದಿರುಗಿದ್ದರು. ಈ ವೇಳೆ ತಮ್ಮ ಕೆಲಸವನ್ನ ಮುಂದುವರೆಸಲು ಪುತ್ರ ಮಣಿಲಾಲ್ ಗಾಂಧಿಯವರನ್ನ ಅಲ್ಲೇ ಬಿಟ್ಟು ಬಂದಿದ್ದರು. ಅವರ ವಂಶಸ್ಥರೇ ಸತೀಶ್ ಹಾಗೂ ಅವರ ಇಬ್ಬರು ಸಹೋದರಿಯರು.
ಸತೀಶ್ ಅವರು ವೃತ್ತಿಯಲ್ಲಿ ವಿಡಿಯೋಗ್ರಾಫರ್ ಹಾಗೂ ಫೋಟೋಗ್ರಾಫರ್ ಆಗಿದ್ದರು. ಜೊತೆಗೆ ಡರ್ಬನ್ ಬಳಿಯ ಫೀನಿಕ್ಸ್ ಸೆಟಲ್ಮೆಂಟ್ನಲ್ಲಿ ಗಾಂಧೀಜಿ ಪ್ರಾರಂಭಿಸಿದ್ದ, ಗಾಂಧಿ ಅಭಿವೃದ್ಧಿ ಟ್ರಸ್ಟ್ನ ಕಾರ್ಯಗಳನ್ನ ಮುಂದುವರೆಸಲು ಸಹಾಯ ಮಾಡುವಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ ಸತೀಶ್, 1860ರ ಹೆರಿಟೇಜ್ ಫೌಂಡೇಶನ್ ಬೋರ್ಡ್ನ ಸದಸ್ಯರಾಗಿದ್ರು. ಸತೀಶ್ ಅವರ ನಿಧನಕ್ಕೆ ವಿಶ್ವದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇನ್ನು ಮಹಾತ್ಮಾ ಗಾಂಧೀಜಿ ಅವರ ಮರಿ ಮೊಮ್ಮಗನ ಸಾವಿಗೆ ಸಂತಾಪ ಸೂಚಿಸಿದ ರಾಜಕೀಯ ವಿಶ್ಲೇಷಕ ಒಬ್ಬರು ಈ ರೀತಿಯಾಗಿ ಹೇಳಿದ್ದಾರೆ. ‘ನಾನು ಆಘಾತಕ್ಕೊಳಗಾಗಿದ್ದೇನೆ. ಸತೀಶ್ ಓರ್ವ ಮಹಾನ್ ಮಾನವತಾವಾದಿ ಮತ್ತು ಕಾರ್ಯಕರ್ತರಾಗಿದ್ದರು. ಅವರು ನಿಂದನೆಗೊಳಗಾದ ಮಹಿಳೆಯರಿಗಾಗಿ ಇರುವ ಸಲಹಾ ಡೆಸ್ಕ್‌ನ ಉತ್ತಮ ಸ್ನೇಹಿತರಾಗಿದ್ದರು ಮತ್ತು ತಮಗೆ ಸಾಧ್ಯವಾಗುವ ಎಲ್ಲ ರೀತಿಯಲ್ಲೂ ಸಂಸ್ಥೆಗೆ ಸಹಾಯ ಮಾಡುತ್ತಿದ್ದರು’ ಎಂದು ರಾಜಕೀಯ ವಿಶ್ಲೇಷಕ ಲುಬ್ನಾ ನಡ್ವಿ ಹೇಳಿದ್ದಾರೆ.