ಬಂಗಾರದ ಬೆಲೆ ಇಳಿಕೆಯಾಗುವುದನ್ನೇ ಬಹಳಷ್ಟು ಜನರು ಕಾಯುತ್ತಿದ್ದಾರೆ. ಆದರೆ ಚಿನ್ನದ ಬೆಲೆ ಜನಸಾಮಾನ್ಯರ ಕೈಗೆ ಸಿಗದಂತೆ ವೇಗವಾಗಿ ಬೆಳೆಯುತ್ತಿದೆ. ಚಿನ್ನದ ಬೆಲೆ ಹಾಗೂ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಹೇಗೆ ನಿಗದಿಯಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎಂಸಿಎಕ್ಸ್‌ನಲ್ಲಿ ಫೆಬ್ರುವರಿಯಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇ. 0.5ರಷ್ಟು ಹೆಚ್ಚಾಗಿ 49,172ರೂ ಇದ್ದರೆ, ಬೆಳ್ಳಿ ಶೇ. 0.55 ರಷ್ಟು ಏರಿಕೆಯಾಗಿ ಪ್ರತಿ ಕೆಜಿಗೆ 63,670 ರೂಪಾಯಿಗೆ ತಲುಪಿದೆ. ಹಿಂದಿನ ದಿನದ ವಹಿವಾಟಿನಲ್ಲಿ, ಚಿನ್ನವು 10 ಗ್ರಾಂಗೆ 400 ರೂಪಾಯಿ ಹೆಚ್ಚಾಗಿದ್ದು, ಶುಕ್ರವಾರ 700 ರೂಪಾಯಿ ಹೆಚ್ಚಳಗೊಂಡಿತ್ತು. ಬೆಳ್ಳಿ ಬೆಲೆಯು ಭಾನುವಾರ 200 ರೂಪಾಯಿ ಏರಿಕೆಗೊಂಡಿತ್ತು. ಕಳೆದ ಕೆಲವು ವಾರಗಳಲ್ಲಿ ಚಿನ್ನ ತೀವ್ರವಾಗಿ ಕುಸಿಯಿತು ಆದರೆ “ದುರ್ಬಲ ಯುಎಸ್ ಡಾಲರ್‌ನಿಂದ ಬೆಂಬಲವನ್ನು ಗಳಿಸಲು ಚಿನ್ನವು ಹಿಂತಿರುಗಿತು” ಎಂದು ಕೊಟಕ್ ಸೆಕ್ಯುರಿಟೀಸ್ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ. ಡಾಲರ್ ಸೂಚ್ಯಂಕ ಇಂದು ಶೇ. 0.18ರಷ್ಟು ಕುಸಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನವು ಔನ್ಸ್‌ಗೆ 1,830 ಡಾಲರ್‌ನಷ್ಟಿದೆ. ಕೋವಿಡ್ ಪ್ರಕರಣಗಳ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಕಳವಳವಿದ್ದು, ಸುರಕ್ಷಿತ ಹೂಡಿಕೆ ಚಿನ್ನದತ್ತ ಹೂಡಿಕೆದಾರರು ಮುಖ ಮಾಡಿದ್ದಾರೆ. ಇಂದು ಏಷ್ಯಾದ ಷೇರು ಮಾರುಕಟ್ಟೆಗಳು ಸಮವಾಗಿ ಮುಂದುವರಿದಿವೆ.

ಭಾರತೀಯ ಮಾರುಕಟ್ಟೆಯಲ್ಲಿ ಅಗಸ್ಟ್‌ನಲ್ಲಿ ಸತತ ಇಳಿಕೆ ಸಾಧಿಸುತ್ತಿದ್ದ ಹಳದಿ ಲೋಹದ ಬೆಲೆ ಇದೀಗ ಸತತ ಎರಡು ದಿನಗಳಲ್ಲಿ ಏರಿಕೆ ದಾಖಲಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,300 ರೂಪಾಯಿ ತಲುಪಿದೆ. ಇದೇ ವೇಳೆ ಶುದ್ಧ ಚಿನ್ನ 10 ಗ್ರಾಂ 51,600 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು 1,900 ರೂಪಾಯಿ ಹೆಚ್ಚಳಗೊಂಡ ಬಳಿಕ ಇಂದು ಕೆಜಿಗೆ 1,500 ರೂಪಾಯಿ ಹೆಚ್ಚಾಗಿ 61,700 ರೂಪಾಯಿಗೆ ತಲುಪಿದೆ. ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ಬೆಲೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. ಈ ರೀತಿ ಹಳದಿ ಬಂಗಾರದ ಬೆಲೆ ನಿಗದಿಯಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಬಂಗಾರ ಯಾವ ಮಟ್ಟಕ್ಕೆ ಏರಲಿದೆ ಎಂದು ನೋಡಬೇಕಾಗಿದೆ.

Leave a Reply

Your email address will not be published. Required fields are marked *