ದಾನವಾಗಿ ಕೊಟ್ಟ ಆಸ್ತಿಯನ್ನು ಹಿಂತಿರುಗಿ ಪಡೆಯಲು ಅವಕಾಶ ಇದ್ಯಾ?, ಅದರ ಸುತ್ತ ಇರುವ ನಿಯಮಗಳೇನು?. ಮೊದಲಿಗೆ ದಾನ ಪತ್ರ ಎಂದರೆ ಏನು ಎನ್ನುವುದನ್ನು ಒಂದೊಂದಾಗಿ ನೋಡೋಣ ;
ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಸ್ವ-ಇಚ್ಛೆಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಬೇರೆಯವರಿಗೆ ಪುಕ್ಕಟೆಯಾಗಿ ದಾನವಾಗಿ ಕೊಡುವುದನ್ನು ದಾನ ಪತ್ರ ಎಂದು ಕರೆಯುವರು. ದಾನ ಕೊಡುವುದಕ್ಕೆ ಮುನ್ನ ದಾನ ಕೊಡುವ ವ್ಯಕ್ತಿ ಆಸ್ತಿಯ ಸಂಪೂರ್ಣ ಮಾಲೀಕತ್ವವನ್ನು ಹೊಂದಿರಬೇಕು. ರಿಜಿಸ್ಟರ್ ಮಾಡಿಸಿರುವ ದಾನ ಪತ್ರಕ್ಕೆ ಮಾತ್ರ ಮಾನ್ಯತೆ ನೀಡಲಾಗಿದೆ, ರಿಜಿಸ್ಟರ್ ಮಾಡಿಸದೇ ದಾನವಾಗಿ ಕೊಟ್ಟರೆ ಅದಕ್ಕೆ ಯಾವುದೇ ಮಾನ್ಯತೆ ( validity ) ಇರುವುದಿಲ್ಲ.
ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯನ್ನು ಬೇರೆಯವರಿಗೆ ಉಡುಗೊರೆಯಾಗಿ ಕೊಡುವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುತ್ತಾರೆ. ಆದರೆ, ದಾನ ಕೊಡುವ ಮುನ್ನ ಆಸ್ತಿ ವಾರಸುದಾರರ ಸಾವು ಸಂಭವಿಸಿದರೆ ಆ ಸಂದರ್ಭದಲ್ಲಿ ಕೂಡ ಅದು ರಿಜಿಸ್ಟರ್ಡ್ ಡೀಡ್ ( registered deed ) ಎಂದು ಕರೆಯಲಾಗುವುದಿಲ್ಲ.
ತನ್ನ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ದಾನ ಮಾಡುವಾಗ ಇಬ್ಬರಿಗೂ ಒಪ್ಪಿಗೆ ಇರಬೇಕು ದಾನ ಪಡೆಯಲು ವ್ಯಕ್ತಿ ಇಚ್ಚಿಸದೆ ಹೋದರೆ ಆ ದಾನ ಪತ್ರಕ್ಕೆ ಕೂಡ ಯಾವ ಮಾನ್ಯತೆ ಇರುವುದಿಲ್ಲ. ದಾನ ಪತ್ರದಲ್ಲಿ ಇಬ್ಬರು ಸಹ ಸಹಿ ಮಾಡಬೇಕು, ಒಂದು ಬಾರಿ ದಾನ ಪತ್ರ ನೋಂದಣಿಯಾದರೆ ಅದನ್ನು, ರದ್ದು ಪಡಿಸಲು ಕಷ್ಟವಾಗುತ್ತದೆ. ರದ್ದು ಮಾಡಿಸಲೇಬೇಕು ಎಂದರೆ ಆಸ್ತಿಯನ್ನು ದಾನ ಕೊಟ್ಟವರು ಮತ್ತು ಆಸ್ತಿಯನ್ನು ದಾನ ಪಡೆದವರು ಇಬ್ಬರು ಸೇರಿ ರದ್ದು ಮಾಡಿಸಬಹುದು. ಸಬ್ ರಿಜಿಸ್ಟರ್ ಆಫೀಸ್’ನಲ್ಲಿ ಕ್ಯಾನ್ಸಲ್ ಡೀಡ್ ಅರ್ಜಿ ಹಾಕಿ ನಂತರ ದಾನ ಪತ್ರವನ್ನು ಹಿಂಪಡೆಯಬಹುದು.
ದಾನ ಪಾತ್ರದಲ್ಲಿ ಕೆಲವು ಷರತ್ತುಗಳು ಇರುತ್ತದೆ ಅದನ್ನು, ಪಾಲನೆ ಮಾಡದೆ ಹೋದರು ಸಹ ರದ್ದು ಮಾಡುವ ಅವಕಾಶ ಇರುತ್ತದೆ.ಒಟ್ಟು ಕುಟುಂಬದ ಆಸ್ತಿಯಾಗಿದ್ದರೆ ಅದರ, ಮೇಲೆ ಎಲ್ಲರಿಗೂ ಹಕ್ಕು ಇರುತ್ತದೆ. ಒಂದು ವೇಳೆ ಆ ಆಸ್ತಿಯನ್ನು ದಾನವಾಗಿ ಬೇರೆಯವರಿಗೆ ಕೊಟ್ಟಿದ್ದರೆ ಅದನ್ನು, ಚಾಲೆಂಜ್ ಮಾಡಿ ದಾನ ಪತ್ರವನ್ನು ರದ್ದು ಮಾಡಿಸಬಹುದು.
ಮೋಸದಿಂದ, ಬಲವಂತದಿಂದ, ಕ್ರಿಮಿನಲ್ ನಡುವಳಿಕೆಯಿಂದ ಆಸ್ತಿಯನ್ನು ದಾನ ಪಡೆದಿದ್ದರೆ, ಅದನ್ನು ಸಹ ಕೋರ್ಟ್’ನಲ್ಲಿ ಪ್ರೂವ್ ಮಾಡಿ ದಾನ ಪತ್ರವನ್ನು ರದ್ದು ಮಾಡಿಸಬಹುದು. ವಯಸ್ಸಾದ ವೃದ್ಧ ದಂಪತಿಗಳು ಅವರ ಸ್ವಯಾರ್ಜಿತ ಆಸ್ತಿಯನ್ನು ಅವರ ಮಕ್ಕಳಿಗೆ ದಾನವಾಗಿ ದಾನ ಪತ್ರದ ಮೂಲಕ ಕೊಟ್ಟಿರುತ್ತಾರೆ, ಆದರೆ ಆಸ್ತಿಯನ್ನು ಪಡೆದ ಮಕ್ಕಳು ಅವರನ್ನು ನೋಡಿಕೊಳ್ಳುವುದಿಲ್ಲ ವೃದ್ಧ ದಂಪತಿಗಳಿಗೆ ಊಟ, ಬಟ್ಟೆ, ವಸತಿಗೆ ಕೂಡ ತೊಂದರೆ ಎದುರಾದರೆ ಆ ದಂಪತಿಗಳು ಸೀನಿಯರ್ ಸಿಟಿಜನ್ ಆಕ್ಟ್ ( senior citizen act ) ಕೆಳಗೆ ಉಡುಗೊರೆಯಾಗಿ ಕೊಟ್ಟ ಆಸ್ತಿಯನ್ನು ಮರಳಿ ಪಡೆಯಬಹುದು.
ಮಕ್ಕಳನ್ನು ಕರೆಸಿ ವಿಚಾರಣೆ ಮಾಡಲಾಗುತ್ತದೆ, ವಯಸ್ಸಾದ ವೃದ್ಧ ದಂಪತಿಗಳನ್ನು ಮಕ್ಕಳು ನೋಡಿಕೊಳ್ಳದೆ ಹೋಗಿದ್ದು ಸಾಬೀತಾದರೆ ಮೂಲಭೂತ ಅಂಶಗಳಾದ ಊಟ, ವಸತಿ ಮತ್ತು ಬಟ್ಟೆ ಕೂಡ ಕೊಡುತ್ತಿಲ್ಲ ಎನ್ನುವುದು ಕಂಡುಬಂದರೆ ದಾನ ಪತ್ರವನ್ನು ರದ್ದು ಮಾಡಲಾಗುತ್ತದೆ.ಯಾವುದೇ ಮಾನ್ಯ ಕಾರಣ ಇಲ್ಲದೆ ದಾನವಾಗಿ ಕೊಟ್ಟ ಆಸ್ತಿಯನ್ನು ಹಿಂತಿರುಗಿ ಪಡೆಯಲು ಸಾಧ್ಯವಿಲ್ಲ. ಒಂದು ಬಾರಿ ದಾನ ಮಾಡಿದರೆ ಮತ್ತೆ ಅದನ್ನು, ಮರಳಿ ಕೇಳಲು ಸಾಧ್ಯವಿಲ್ಲ ಏಕೆಂದರೆ ದಾನ ಪತ್ರವನ್ನು ರಿಜಿಸ್ಟರ್ ಮಾಡಿಸಲಾಗಿರುತ್ತದೆ.