Bus ticket UPI Scan ನಮ್ಮ ರಾಜ್ಯದಲ್ಲಿ ಶಕ್ತಿ ಯೋಜನೆ ಶುರು ಆದಾಗಿನಿಂದ ಬಸ್ ಗಳಲ್ಲಿ ಓಡಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಮಹಿಳೆಯರು ಬಸ್ ಗಳಲ್ಲಿ ಫ್ರೀಯಾಗಿ ಪ್ರಯಾಣ ಮಾಡುತ್ತಿದ್ದಾರೆ. ಇತ್ತ ಪುರುಷರು ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಿರುವಾಗ ಬಸ್ ಪ್ರಯಾಣದಲ್ಲಿ ಒಂದು ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಅದು ಟಿಕೆಟ್ ಕೊಂಡುಕೊಳ್ಳುವಾಗ ಬರುವ ಚಿಲ್ಲರೆ ಸಮಸ್ಯೆ.
ಈ ಒಂದು ವಿಚಾರಕ್ಕೆ ಹಲವು ಸಾರಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ದೊಡ್ಡ ಜಗಳವೆ ಆಗಿರುವುದನ್ನು ನೋಡಿರುತ್ತೇವೆ, ಹಾಗೂ ಇಂಥ ಘಟನೆಗಳು ವೈರಲ್ ಸಹ ಆಗುತ್ತದೆ. ಹಲವು ಸಾರಿ ಪ್ರಯಾಣ ಮಾಡುವ ಜನರ ಹತ್ತಿರ ಸರಿಯಾದ ಚಿಲ್ಲರೆ ಇರುವುದಿಲ್ಲ. ಇನ್ನು ಕೆಲವು ಸಾರಿ ಕಂಡಕ್ಟರ್ ಗಳ ಹತ್ತಿರ ಕೂಡ ಇರುವುದಿಲ್ಲ. ಈ ರೀತಿ ಆದಾಗ ಕಂಡಕ್ಟರ್ ಗಳು ಮತ್ತು ಪ್ರಯಾಣಿಕರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗುತ್ತದೆ.
ಹೀಗಿದ್ದಾಗ ಸಾಕಷ್ಟು ಜನರು ಬೇರೆ ಅಂಗಡಿಗಳಲ್ಲಿ ಮತ್ತು ಎಲ್ಲಾ ಕಡೆ ಕ್ಯೂಆರ್ ಕೋಡ್ ಸ್ಕ್ಯಾನ್ ಇರುವ ಹಾಗೆ ಬಸ್ ನಲ್ಲೂ ಇದ್ದಿದ್ದರೆ ಸ್ಕ್ಯಾನ್ ಮಾಡಿ ಹಣ ಪಾವತಿಸಿ ಟಿಕೆಟ್ ಕೊಂಡುಕೊಳ್ಳಬಹುದಿತ್ತು ಎಂದು ಹಲವು ಸಾರಿ ಅನ್ನಿಸಿದ್ದು ಇದೆ. ಈ ವ್ಯವಸ್ಥೆ ಒಂದು ಜಾರಿಗೆ ಬಂದರೆ ಪ್ರಯಾಣಿಕರ ಸಮಸ್ಯೆ ಪರಿಹಾರ ಆದ ಹಾಗೆ ಎಂದು ಎಲ್ಲರು ಅಂದುಕೊಂಡಿದ್ದರು. ಇದೀಗ ಕರ್ನಾಟಕ ಸಾರಿಗೆ ಇಲಾಖೆ ಜನರ ಈ ಆಸೆಯನ್ನು ಪೂರೈಸಲು ಮುಂದಾಗಿದೆ.
ಹೌದು, ನಮ್ಮ ಕರ್ನಾಟಕದ KSRTC ದೇಶದಲ್ಲಿ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಹೆಸರನ್ನು ಪಡೆದಿದೆ. ಇದೀಗ ಸರ್ಕಾರಿ ಬಸ್ ಗಳಲ್ಲಿ QR ಕೋಡ್ ಸ್ಕ್ಯಾನರ್ ಇಟ್ಟು, ಪ್ರಯಾಣಿಕರು ಸ್ಕ್ಯಾನ್ ಮಾಡಿ ಟಿಕೆಟ್ ನ ಹಣ ಪಾವತಿಸಿ, ಸುಲಭವಾಗಿ ಪ್ರಯಾಣ ಮಾಡುವ ಸೌಲಭ್ಯವನ್ನು ತಂದುಕೊಡುತ್ತಿದೆ. ಈಗಾಗಲೇ ಈ ಥರದ ವ್ಯವಸ್ಥೆಯ ಟೆಸ್ಟಿಂಗ್ ಹುಬ್ಬಳ್ಳಿಯಲ್ಲಿ ಶುರುವಾಗಿದೆ. ಹುಬ್ಬಳ್ಳಿಹ ಡಿಪೋ3 ನಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ..
ಈ ತಿಂಗಳು ಸೆಪ್ಟೆಂಬರ್ 1 ರಿಂದ ಈ ಯೋಜನೆ ಜಾರಿಗೆ ಬಂದಿದ್ದು, ಕಂಡಕ್ಟರ್ ಹತ್ತಿರ QR ಕೋಡ್ ಸ್ಕ್ಯಾನರ್ ಇರುತ್ತದೆ, ಅದನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಇಂದ ಹಣ ಪಾವತಿ ಮಾಡಿ ಟಿಕೆಟ್ ಪಡೆದುಕೊಳ್ಳಬಹುದು. ಈ ಹೊಸ ವ್ಯವಸ್ಥೆಗೆ ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಬೇರೆ ಕಡೆ ಮಾತ್ರ ಇರುತ್ತಿದ್ದ ಕ್ಯೂಆರ್ ಕೋಡ್ ಈಗ ಬಸ್ ನಲ್ಲೂ ಲಭ್ಯವಿರಲಿದೆ.
ಇದರಿಂದ ಜನರು ಸುಲಭವಾಗಿ ಟಿಕೆಟ್ ಪಡೆಯಬಹುದು. ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಉಂಟಾಗುವ ಸಮಸ್ಯೆ, ಜಗಳ ಎಲ್ಲವೂ ನಿಲ್ಲುತ್ತದೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ ಜಾರಿಗೆ ಬಂದಿರುವ ಈ ಯೋಜನೆ, ಮುಂದಿನ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಜಾರಿಗೆ ಬರುತ್ತದೆ ಎಂದು ಮಾಹಿತಿ ಸಿಕ್ಕಿದೆ.