ಯಾರೆ ಆಗಲಿ ಮದುವೆಯಾದ ಮೇಲೆ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದೆ ಹೊಂದಿರುತ್ತಾರೆ. ಆದರೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದರೂ ಆ ಕಷ್ಟ ನಿವಾರಣೆಯ ಉದ್ದೇಶಾರ್ಥವಾಗಿ ಹಲವಾರು ಮಹಾ ಮಹಿಮೆಯುಳ್ಳ ದೇವಾಲಯಗಳಿವೆ. ಇಂತಹ ದೇವಾಲಯಗಳಲ್ಲಿ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದರೆ ಇಲ್ಲವೆ ಏನಾದರೂ ಕಾಣಿಕೆಯ ರೂಪದಲ್ಲಿ ನೀಡಿದರೆ ಇಲ್ಲವೆ ಮಕ್ಕಳಾಗುವ ಹರಕೆ ಹೊತ್ತುಕೊಂಡರೆ ಶೀಘ್ರದಲ್ಲೆ ದೇವರ ಕೃಪೆ ಉಂಟಾಗಿ ದಮ್ಪತಿಗಳು ಸಂತಾನ ಭಾಗ್ಯ ಪಡೆಯುತ್ತಾರೆಂಬ ಅಚಲವಾದ ನಂಬಿಕೆಗಳಿವೆ. ಅಂತಹ ಒಂದು ನಂಬಿಕೆ ಚಾಲ್ತಿಯಲ್ಲಿರುವ ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ.

ಇದೊಂದು ಕೃಷ್ಣನ ದೇವಾಲಯವಾಗಿದ್ದು ಇಲ್ಲಿ ಕೃಷ್ಣನು ಅಂಬೆಗಾಲಿಡುತ್ತಿರುವ ನವನೀತ ಕೃಷ್ಣನಾಗಿ ಪ್ರಸಿದ್ಧನಾಗಿದ್ದಾನೆ. ಇದನ್ನು ಜನಪ್ರೀಯವಾಗಿ ಮಳ್ಳೂರು ಕೃಷ್ಣ ದೇವಾಲಯ ಎಂದೆ ಕರೆಯಲಾಗುತ್ತದೆ. ಬೆಂಗಳೂರಿಗೆ ಬಲು ಹತ್ತಿರದಲ್ಲಿದೆ. ಆಡಿಸಿದಳು ಯಶೋದೆ ಜಗದೋದ್ಧಾರನ, ಜಗದೋದ್ಧಾರನಾ ಮಗನೆಂದು ತಿಳಿಯುತಾ ಆಡಿಸಿದಳು ಯಶೋಧಾ ಜಗದೋದ್ಧಾರನಾ. ಪುರಂದರ ದಾಸರು ರಚಿಸಿದ ಈ ಗೀತೆ ಬಹು ಜನಪ್ರಿಯ. ಈ ಕೃತಿಯನ್ನು ದಾಸರು ರಚಿಸಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣ ಬಳಿ ಇರುವ ದೊಡ್ಡ ಮಳೂರಿನ ಕೃಷ್ಣ ದೇವಾಲಯದಲ್ಲಿ, ಪುರಾತನವಾದ ಈ ದೇವಾಲಯದಲ್ಲಿರುವ ಸುಂದರ ಕೃಷ್ಣನ ಮೂರ್ತಿಯನ್ನು ಕಂಡು ಭಾವಪರವಶರಾಗಿ ದಾಸರು ಈ ರಚನೆ ಮಾಡಿದರೆನ್ನುತ್ತದೆ ಇತಿಹಾಸ.

ಕಣ್ವ ನದಿಯ ದಂಡೆಯ ಮೇಲಿರುವ ಈ ಪುಟ್ಟ ಗ್ರಾಮದ ಹೆಸರು ಜೋಳರ ಕಾಲದ ಹಲವು ದಾಖಲೆಗಳಲ್ಲಿ ದೊರಕುತ್ತದೆ. ದೊಡ್ಡ ಮಳೂರು, ಮಳ್ಳೂರು, ಮರಳೂರು ಇತ್ಯಾದಿ ಹೆಸರುಗಳಿಂದ ಕರೆಸಿಕೊಂಡಿತ್ತು. ಹಿಂದೆ ಇದಕ್ಕೆ ರಾಜೇಂದ್ರ ಸಿಂಹ ನಗರ ಎಂಬ ಹೆಸರಿತ್ತೆಂದೂ ತಿಳಿದುಬರುತ್ತದೆ. ಸಾರಂಗಧರನಿಗೆ ಇಲ್ಲಿ ಕೈಗಳು ಮೊಳೆತುದರಿಂದ ಈ ಸ್ಥಳಕ್ಕೆ ಮೊಳತೂರು ಎಂಬ ಹೆಸರು ಬಂತೆಂದೂ ಕಾಲಾನಂತರದಲ್ಲಿ ಮೊಳತೂರು, ಮಳೂರಾಯಿತೆಂದು ಹೇಳಲಾಗಿದೆ. ವೇದಾಧ್ಯಯನದಲ್ಲಿ ಸಾರ್ವಭೌಮತ್ವ ಪಡೆಯಲಿಚ್ಛಿಸುತ್ತಿದ್ದವರು ಇಲ್ಲಿ ಬರುತ್ತಿದ್ದರಂತೆ. ಹೀಗಾಗಿ ಇಲ್ಲಿನ ದೇವಾಲಯದಲ್ಲಿ ಸ್ಥಾಪಿಸಲಾಗಿರುವ ಅಪ್ರಮೇಯ ಎಂದೂ ಹೆಸರು ಬಂದಿದೆ. ಬ್ರಹ್ಮಾನಂದ ಪುರಾಣದ ರೀತ್ಯ ಅಪ್ರಮೇಯ ಎಂದರೆ ಪರಮೋಚ್ಚ ಎಂದು ಅರ್ಥ.

ವನವಾಸಿಯಾಗಿದ್ದ ತ್ರೇತಾಯುಗಪುರುಷ ಶ್ರೀರಾಮಚಂದ್ರ ಇಲ್ಲಿ ಅಪ್ರಮೇಯನ ಪೂಜಿಸಿದನೆಂದೂ ಅದಕ್ಕೇ ರಾಮಾಪ್ರಮೇಯ ಎಂದೂ ಕರೆಯುತ್ತಾರೆ ಎನ್ನುತ್ತದೆ ಸ್ಥಳ ಪುರಾಣ. ಇಲ್ಲಿರುವ ಕೃಷ್ಣಮೂರ್ತಿ ಅತ್ಯಂತ ಮನಮೋಹಕವಾಗಿದೆ. 16 ಕೈಗಳನ್ನುಳ್ಳ ಈ ಮೂರ್ತಿ ಶಂಖ, ಚಕ್ರ, ಗದಾ, ಪದ್ಮಾದಿ ಆಯುಧಗಳನ್ನು ಹಿಡಿದಿದ್ದಾನೆ. ಮೂರ್ತಿಯ ಹಿಂಭಾದಲ್ಲಿರುವ ವೃತ್ತಾಕಾರದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಶ್ರೀ ವ್ಯಾಸರಾಯರು ಇಲ್ಲಿ ದೇವತಾರ್ಚನೆ ಮಾಡುತ್ತಿದ್ದರು, ಇವರೇ ಇಲ್ಲಿ ಅಂಬೆಗಾಲು ಕೃಷ್ಣನನ್ನು ಪ್ರತಿಷ್ಠಾಪಿಸಿದರು ಎಂದೂ ಹೇಳುತ್ತದೆ ಐತಿಹ್ಯ.

ಮುಮ್ಮಡಿ ಕೃಷ್ಣರಾಜ ಒಡೆಯರು ಈ ದೇವಾಲಯಕ್ಕೆ ಭೇಟಿ ನೀಡಿ, ಭಾವಪರವಶರಾಗಿ ದೇವರಿಗೆ ಹಲವು ಬಗೆಯ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀರಾಮಾನುಜಾಚಾರ್ಯರು ಸಹ ಕೆಲಕಾಲ ಇಲ್ಲಿ ನೆಲೆಸಿ ಶ್ರೀಕೃಷ್ಣ ಭಗವಾನನ ಸೇವೆ ಮಾಡಿದ್ದಾರೆ ಎಂದೂ ಹೇಳುತ್ತಾರೆ ದೇವಾಲಯದ ಅರ್ಚಕರು. ಪುತ್ರ ದೋಷ ಅಥವಾ ಶಯನದೋಷ ಇರುವ ದಂಪತಿಗಳು ಈ ಕೃಷ್ಣನಲ್ಲಿ ಪ್ರಾರ್ಥಿಸಿದರೆ ದೋಷ ನಿವಾರಣೆಯಾಗುತ್ತದೆಂದು ನಂಬಲಾಗಿದೆ. ಇಲ್ಲಿ ಶಯನದೋಷವೆಂದರೆ ಸತಿ-ಪತಿಗಳ ಮಧ್ಯೆ ಕಲಹವಿದ್ದು ಇಬ್ಬರೂ ಒಬ್ಬರಿಗೊಬ್ಬರೂ ದೈಹಿಕವಾಗಿ ಸೇರುತ್ತಿಲ್ಲವೆಂಬುದನ್ನು ಸೂಚಿಸುತ್ತದೆ. ಇದೆ ದೋಷವು ಪುತ್ರಹೀನತೆಗೂ ಕಾರಣವಾಗಿರುವುದರಿಂದ ಈ ದೋಷವನ್ನು ಹೋಗಲಾಡಿಸುವುದು ಪ್ರಮುಖವಾಗುತ್ತದೆ.

ಮದುವೆಯಾಗಿ ಬಹುಕಾಲ ಮಕ್ಕಳಾಗದ ದಂಪತಿ, ಈ ದೇವಾಲಯಕ್ಕೆ ಆಗಮಿಸಿ ಬೆಣ್ಣೆ ಕೃಷ್ಣನ ಮಂದಿರದಲ್ಲಿ ತೊಟ್ಟಿಲು ಕಟ್ಟುವ ಹರಕೆ ಹೊರುತ್ತಾರೆ. ಮಕ್ಕಳಾದ ಬಳಿಕ ಮಗುವಿನೊಂದಿಗೆ ಆಗಮಿಸಿ ಹರಕೆಯನ್ನೂ ತೀರಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು. ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿರುವ ದೊಡ್ಡ ಮಳೂರಿನಲ್ಲಿ ಕೃಷ್ಣ ಜನ್ಮಾಷ್ಠಮಿಯ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಾಲಯವು ಭಕ್ತರಿಗೆಂದು ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30 ರವರೆಗೂ ಹಾಗೂ ಸಂಜೆ 5.30 ಗಂಟೆಯಿಂದ ರಾತ್ರಿ 8.30 ರವರೆಗೂ ತೆರೆದಿರುತ್ತದೆ. ಕೃಷ್ಣ ಜಯಂತಿ, ವೈಕುಂಠ ಎಕಾದಶಿ ಮುಂತಾದ ಉತ್ಸವಗಳನ್ನು ಬಲು ಅದ್ದೂರಿಯಾಗಿ ಇಲ್ಲಿ ಆಚರಿಸಲಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!