ಕೊನೆಗೂ ಇಂಧನ ದರ ಇಳಿಕೆಯಾಗುವ ಮೂಲಕ ಗ್ರಾಹಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಸತತ ಒಂದು ವರ್ಷದಿಂದ ಏರಿಕೆಯಾಗುತ್ತಲೇ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂದು ವರ್ಷದಿಂದ ಇದೇ ಮೊದಲ ಬಾರಿಗೆ ಇಳಿಕೆಯಾಗಿದೆ. ಈ ವರ್ಷದ ಆರಂಭದಿಂದಲೂ ಏರಿಕೆ ಕಾಣುತ್ತಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆ ಮೊದಲ ಬಾರಿಗೆ ಇಳಿಕೆಯಾಗಿದೆ. ಬುಧವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 18 ಪೈಸೆ ಮತ್ತು ಡೀಸೆಲ್ ದರ 17 ಪೈಸೆ ಇಳಿಕೆಯಾಗಿದೆ. ಈ ಮೂಲಕ 2021ರಲ್ಲಿ ಮೊದಲ ಬಾರಿಗೆ ತೈಲ ಬೆಲೆ ಇಳಿಕೆ ಮಾಡಿ ಸರ್ಕಾರ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ ಎಂದೇ ಹೇಳಬಹುದು. ಹಾಗಿದ್ದರೆ ತೈಲ ಬೆಲೆ ಎಷ್ಟರ ಮಟ್ಟಿಗೆ ಇಳಿದಿರಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ವಿಶ್ವದ ಹಲವು ಕಡೆ ಕೋವಿಡ್‌ 19 ಲಾಕ್‌ಡೌನ್‌ ಜಾರಿ ಜೊತೆ ಎರಡನೇ ಅಲೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೇಡಿಕೆ ಇಳಿಕೆ ಆಗುತ್ತಿದ್ದು ಬೆಲೆ ಕಡಿಮೆ ಆಗುತ್ತಿದೆ. ಇದರ ನೇರ ಪರಿಣಾಮ ಭಾರತದ ಮೇಲೆ ಬಿದ್ದಿದ್ದು ತೈಲ ಬೆಲೆ ಇಳಿಕೆಯಾಗಿದೆ. ಬುಧವಾರ ಪೆಟ್ರೋಲ್ ದರ 18 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 17 ಪೈಸೆ ಇಳಿಕೆಯಾಗಿದೆ. ಫೆಬ್ರವರಿ ತಿಂಗಳ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಬಹುದು. ಪೆಟ್ರೋಲ್‌ ಬೆಲೆ ಎಲ್ಲೆಲ್ಲೂ ಎಷ್ಟು? ಎಂದು ನೋಡುವುದಾದರೆ, ಬೆಂಗಳೂರು 94.04 ರೂಪಾಯಿ, ದೆಹಲಿ 90.99 ರೂಪಾಯಿ ಚೆನ್ನೈ 92.95 ರೂಪಾಯಿ, ಹೈದರಾಬಾದ್‌ 94.61 ರೂಪಾಯಿ ಮತ್ತು ಮುಂಬೈ 97.40 ರೂಪಾಯಿ ಇದೆ. ಹಾಗೂ ಡೀಸೆಲ್‌ ಬೆಲೆ ಎಷ್ಟು? ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 86.21 ರೂಪಾಯಿ, ದೆಹಲಿ 81.30 ರೂಪಾಯಿ, ಚೆನ್ನೈ 86.29 ರೂಪಾಯಿ, ಹೈದರಾಬಾದ್‌ 94.61 ರೂಪಾಯಿ, ಮುಂಬೈ 97.40 ರೂಪಾಯಿ ಇದೆ.

ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯಿಂದಾಗಿ ಪೆಟ್ರೋಲ್‌, ಡೀಸೆಲ್‌ ದರ ಒಂದೊಂದು  ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ. ಭಾರತ ಸರ್ಕಾರದ ಮನವಿಯ ಹೊರತಾಗಿಯೂ ತೈಲ ಉತ್ಪಾದಕ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸದೇ ಇರುವ ನಿರ್ಧಾರವನ್ನು ಕೈಗೊಂಡಿತ್ತು. ಇದರಿಂದಾಗಿ ಭಾರತ ಸೇರಿದಂತೆ ವಿಶ್ವಾದ್ಯಂತ ಪೆಟ್ರೋಲ್‌ ಡೀಸೆಲ್‌ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿತ್ತು. ಈಗ ಯುರೋಪ್‌ನಲ್ಲಿ ಹಲವು ಕಡಿಮೆ ಲಾಕ್‌ಡೌನ್‌ ಜಾರಿ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ.4 ರಷ್ಟು ಇಳಿಕೆಯಾಗಿದೆ. ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 62.08 ಡಾಲರ್‌ಗೆ(4,500 ರೂಪಾಯಿ) ಇಳಿಕೆಯಾಗಿದೆ. ಭಾರತದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಕಚ್ಚಾ ತೈಲದ ಬೆಲೆ ಪರಿಷ್ಕರಣೆ ಆಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿತ್ತು. ಈ ಸಂದರ್ಭದಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲದ ಬೆಲೆ 68 ಡಾಲರ್‌ಗೆ ತಲುಪಿತ್ತು. ಹೀಗಾಗಿ ಭಾರತದ ಹಲವು ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್‌ ದರ 100 ರೂ. ಗಡಿ ದಾಟಬಹುದು ವಿಶ್ಲೇಷಿಸಲಾಗಿತ್ತು. ಆದರೆ ಫೆ.27 ರ ನಂತರ ಬೆಲೆ ಪರಿಷ್ಕರಣೆ ಸ್ಥಗಿತಗೊಂಡಿತ್ತು.

ಕಳೆದ ಬಾರಿ ಪೆಟ್ರೋಲ್ ದರ ಇಳಿಕೆಯಾಗಿದ್ದು ಕಳೆದ ವರ್ಷ 2020 ಮಾರ್ಚ್ 16ರಂದು. ನಂತರ ಸತತ ಒಂದು ವರ್ಷದಲ್ಲಿ 21 ರೂಪಾಯಿ 58 ಪೈಸೆಯಷ್ಟು ಏರಿಕೆಯಾಗಿತ್ತು. ಇನ್ನು ಡೀಸೆಲ್ ಬೆಲೆ ಲೀಟರ್ ಗೆ 19 ರೂಪಾಯಿ 18 ಪೈಸೆಯಷ್ಟು ಒಂದು ವರ್ಷದಲ್ಲಿ ಏರಿಕೆಯಾಗಿತ್ತು. ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆ ವಿಪಕ್ಷಗಳಿಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿತ್ತು. ಹಲವು ರಾಜ್ಯಗಳು ತೈಲದ ಮೇಲಿದ್ದ ವ್ಯಾಟ್‌ ತೆರಿಗೆಯನ್ನು ಕಡಿಮೆ ಮಾಡಿದ್ದವು. ಕಳೆದ ತಿಂಗಳು ಹಲವು ರಾಜ್ಯಗಳಾದ ರಾಜಸ್ತಾನ, ಮಹಾರಾಷ್ಟ್ರ, ಮಧ್ಯ ಪ್ರದೇಶಗಳಲ್ಲಿ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿತ್ತು. ಮುಂದಿನ ತಿಂಗಳು ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳು ನಾಡು, ಕೇರಳ, ಪುದುಚೆರಿಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ ಹೊತ್ತಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!