ರಾಜ್ಯದಲ್ಲಿ ಈಗಾಗಲೇ 67 ಲಕ್ಷ ಜನರಿಗೆ ಪಿಂಚಣಿ ವಿತರಣೆ ಆಗುತ್ತಿದ್ದು ಪ್ರತಿ ವರ್ಷ ಏಳೂವರೆ ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತಿದೆ. ಹೀಗಿದ್ದಾಗ ಕೆಲವರು ಅಕ್ರಮವಾಗಿ ಈಗಾಗಲೇ ಮೃತರಾದವರ ಹೆಸರಲಿನಲ್ಲಿ ಕೂಡಾ ಪೆನ್ಶನ್ ಮತ್ತು ರೇಶನ್ ಕಾರ್ಡ್ ಪಡೆಯುತ್ತಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಅನಾವಶ್ಯಕ ಕರ್ಚು ಭರಿಸುವಂತೆ ಆಗಿದ್ದು ನಷ್ಟ ಅನುಭವಿಸುವಂತೆ ಆಗಿದೆ. ಮೃತರ ಹೆಸರಿನಲ್ಲಿ ಪಿಂಚಣಿ ಹಾಗೂ ಪಡಿತರ ಪಡೆಯುತ್ತಿರುವವರ ವಿವರವನ್ನು ಒಂದು ತಿಂಗಳೊಳಗೆ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಹಲವೆಡೆ ಮೃತರ ಹೆಸರಿನಲ್ಲಿ ಪೆನ್ಷನ್ ಮತ್ತು ಪಡಿತರ ಹೋಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೃತ ಪಟ್ಟವರ ಹೆಸರಿನಲ್ಲಿ ವಿವಿಧ ಪಿಂಚಣಿಗಳು ದುರ್ಬಳಕೆ ಆಗುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ತಿಂಗಳೊಳಗೆ ಇದನ್ನು ತಡೆಹಿಡಿದು ಸೂಕ್ತ ಕ್ರಮ ವಹಿಸುವಂತೆ ಸಿಎಂ ಬಿಎಸ್ ವೈ ಗಡುವು ನೀಡಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಮೃತಪಟ್ಟ ಫಲಾನುಭವಿಗಳಿಗೆ ಪಿಂಚಣಿ ಪಾವತಿಯಾಗುತ್ತಿದೆ ಮತ್ತು ಪಡಿತರ ವಿತರಣೆಯಾಗುತ್ತಿದೆ. ರಾಜ್ಯದಲ್ಲಿ 67 ಲಕ್ಷ ಜನರಿಗೆ ಪಿಂಚಣಿ ವಿತರಣೆ ಆಗುತ್ತಿದ್ದು ಪ್ರತಿ ವರ್ಷ ಏಳೂವರೆ ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತಿದೆ. 67 ಲಕ್ಷ ಜನರ ಪೈಕಿ ಶೇ. 20 ರಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿಗಳಿಗೆ ಪಾವತಿಯಾಗುತ್ತಿರುವ ಪಿಂಚಣಿ ನಿಲ್ಲಿಸಿದರೆ ಸರ್ಕಾರದ ಬೊಕ್ಕಸಕ್ಕೆ ಅಂದಾಜು 600 ಕೋಟಿ ರೂ. ಉಳಿತಾಯವಾಗಲಿದೆ ಎಂದವರು ಸಭೆಯಲ್ಲಿ ವಿವರಿಸಿದರು.