ಗಗನ ಚುಂಬಿ ಪರ್ವತ ಶ್ರೇಣಿಗಳು, ಅಮೋಘವಾದ ಬೆಳ್ಳಿ ಜಲಪಾತಗಳು, ಪುರಾಣ ಪವಿತ್ರ ದೇವಾಲಯಗಳ, ರಮ್ಯ ರಮಣೀಯ ಚಹಾ ತೋಟಗಳು. ಕರ್ನಾಟಕದ ಊಟಿ ಎಂದೇ ಪ್ರಸಿದ್ಧವಾಗಿರುವ ರಮ್ಯ ರಮಣೀಯ ಚಿಕ್ಕಮಂಗಳೂರು. ಭಾರತದ ಸ್ವಿಜರ್ಲ್ಯಾನ್ಡ್ ಎಂದೇ ಪ್ರಸಿದ್ಧವಾಗಿರುವ ಚಿಕ್ಕಮಂಗಳೂರು ಹಾಗೂ ಸುತ್ತ ಮುತ್ತಲಿನ 10 ಅದ್ಭುತ ಪ್ರವಾಸಿ ತಾಣಗಳ ಬಗ್ಗೆ ತಿಳಿದುಕೊಳ್ಳೋಣ.
ಕೆಮ್ಮಣ್ಣುಗುಂಡಿ: ಇದು ಭಾರತದ ಒಂದು ಅತ್ಯುತ್ತಮ ಗಿರಿಧಾಮ. ಇದು ಬಾಬಾ ಬುಡನ್ ಅಥವಾ ಚಂದ ದ್ರೋಣ ಶ್ರೇಣಿಯಲ್ಲಿ ಬರುವ ಒಂದು ಸುಂದರ ಗಿರಿಧಾಮ. ಕೃಷ್ಣ ರಾಜ ಒಡೆಯರ್ ಇದನ್ನು ತಮ್ಮ ನೆಚ್ಚಿನ ಬೇಸಿಗೆ ಶಿಭಿರ ಮಾಡಿಕೊಂಡಿದ್ದರಿಂದ ಇದನ್ನು KR ಗಿರಿಧಾಮ ಎಂದೂ ಕರೆಯುತ್ತಾರೆ. ಇದು ಸಮುದ್ರ ಮಟ್ಟದಿಂದ ಸುಮಾರು 1500 ಮೀಟರ್ ಎತ್ತರದಲ್ಲಿದೆ. ಇದು ಸುಂದರ ಬಾಬಾ ಬುಡನ್ ಅಥವಾ ಚಂದ ದ್ರೋಣ ಶ್ರೇಣಿಗಳಿಂದ ಸುತ್ತುವರೆದಿದ್ದು ಸಮೃದ್ಧ ಸಸ್ಯ ವರ್ಗ ಮತ್ತು ಅಮೋಘವಾದ ಬೆಳ್ಳಿ ಜಲಪಾತಗಳಿಂದ ಕೂಡಿದೆ. ಚಿಕ್ಕಮಂಗಳೂರಿನಿಂದ 55 ಕಿಲೋಮೀಟರ್ ದೂರದಲ್ಲಿರುವ ಕೆಮ್ಮಣ್ಣು ಗುಂಡಿಯನ್ನು ನೋಡುವುದೇ ಒಂದು ವಿಶೇಷ ಅನುಭವ. ಈ ಸ್ಥಳದಲ್ಲಿ ಒಂದು ಸು ದರ ಗುಲಾಬಿ ಉದ್ಯಾನವನ ಹಾಗೂ ಅನೇಕ ಆಕರ್ಷಣೀಯ ಸ್ಥಳಗಳಿವೆ. ಇಲ್ಲಿಂದ ಕೇವಲ 10 ನಿಮಿಷಗಳ ನಡಿಗೆಯ ದೂರದಲ್ಲಿ ಸೆಟ್ ಪಾಯಿಂಟ್ ಸ್ಥಳವಿದ್ದು ಇಲ್ಲಿಂದ ಪಶ್ಚಿಮ ಘಟ್ಟಗಳ ಶೋಲಾ ಹುಲ್ಲುಗಾವಲಿನ ನೋಟವನ್ನು ಕಾಣಬಹುದು.
ಮಾಣಿಕ್ಯ ಧಾರ: ಇದು ಚಿಕ್ಕಮಂಗಳೂರಿನಿಂದ 40km ದೂರದಲ್ಲಿದೆ. ಈ ಜಲಪಾತ ದತ್ತಾತ್ರೇಯ ಪೀಠ ಅಥವಾ ಬಾಬಾ ಬುಡನ್ ಗಿರಿಯಿಂದ 3km ದೂರದಲ್ಲಿದೆ. ಈ ಪರ್ವತ ಶ್ರೇಣಿಯ ಹುಟ್ಟುವ ಸಣ್ಣ ಹಳ್ಳವು ಸುಮಾರು 100 ಅಡಿಗಳಿಗೂ ಮೀರಿದ ಜಲಪಾತವನ್ನು ನಿರ್ಮಿಸುತ್ತದೆ. ಇದೊಂದು ರಮಣೀಯ ದೃಶ್ಯ. ಇದೊಂದು ಹಿಂದುಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲ್ಪಟ್ಟಿದೆ. ಮಾಣಿಕ್ಯ ಧಾರ ಹರಿದರೆ ಅಕ್ಷರ ಶಹ ಮಾಣಿಕ್ಯಗಳಿಂದ ಪೋಣಿಸಲ್ಪಟ್ಟ ಧಾರೆ ಎಂದರ್ಥ. ಪ್ರಶಾಂತವಾದ ಸಿನಿಮೀಯ ವಾತಾವರಣವನ್ನು ಹುಡುಕುವವರಿಗೆ ಇದು ಉತ್ತಮ ಸ್ಥಳ. ಈ ನೀರು ಎಲ್ಲ ರೀತಿಯ ಚರ್ಮ ರೋಗಗಳನ್ನು ಹೋಗಲಾಡಿಸುವ ಗುಣ ಹೊಂದಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ಪ್ರದೇಶವನ್ನು ತಲುಪಿದ ಪ್ರವಾಸಿಗರಿಗೆ ಬಗೆ ಬಗೆಯ ರೋಗಗಳನ್ನು ಗುಣಪಡಿಸುವ ಗಿಡ ಮೂಲಿಕೆಗಳನ್ನು ಮಾರುವ ಸ್ಥಳೀಯ ಅಂಗಡಿಗಳನ್ನು ಕಾಣಬಹುದು.
ಶೃಂಗೇರಿ: ಚಿಕ್ಕಮಂಗಳೂರಿನಿಂದ 90km ದೂರದಲ್ಲಿ ತುಂಗಾ ನದಿಯ ತೀರದಲ್ಲಿ ಇರುವಂತಹ ಶ್ರೇಷ್ಠವಾದ , ಧಾರ್ಮಿಕ ಪ್ರಾಮುಖ್ಯತೆ ಹೊಂದಿದ ಪವಿತ್ರ ಸ್ಥಳ. ಶಂಕರಾಚಾರ್ಯರು 9ನೇ ಶತಮಾನದಲ್ಲಿ ಸ್ಥಾಪಿಸಿದ 4 ಅಧ್ವಯಿತ ಮಠಗಳಲ್ಲಿ ಇದು ಮೊದಲನೆಯದು. ಆದಿ ಶಂಕರಾಚಾರ್ಯರು ಸ್ಥಾಪಿಸಿದ ಪೀಠಗಳಲ್ಲಿ ಇದನ್ನು ದಕ್ಷಿಣಾನ್ಮಯ ಪೀಠ ಎಂದೂ ಕರೆಯುತ್ತಾರೆ. ಇಲ್ಲಿರುವ ವಿದ್ಯಾಶಂಕರ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲು ಆರಂಭಿಸಿದರು ಹಾಗೂ ಮುಂದೆ ವಿಜಯನಗರ ಸಾಮ್ರಾಜ್ಯ ಅರಸರು ಪೂರ್ಣಗೊಳಿಸಿದರು ಎಂದು ಇತಿಹಾಸ ತಿಳಿಸುತ್ತದೆ. ಇಲ್ಲಿ ಶ್ರೀ ಶಾರದಾಂಬಾ ದೇವಸ್ಥಾನ ಅದ್ಭುತ. ಇಲ್ಲಿರುವ 12 ಕಂಬಗಳಲ್ಲಿ ಪ್ರತಿಯೊಂದರಲ್ಲೂ ಬೇರೆ ಬೇರೆ ತಿಂಗಳಿನಲ್ಲಿ ಸೂರ್ಯ ರಶ್ಮಿ ಬೀಳುತ್ತದೆ. ಪುರಾಣಗಳ ಪ್ರಕಾರ 14ನೆ ಶತಮಾನದಲ್ಲಿ ಮೂಲತಃ ಶ್ರೀಗಂಧದಿಂದ ಮಾಡಲ್ಪಟ್ಟ ಈ ವಿಗ್ರಹವನ್ನು ಚಿನ್ನ ಮತ್ತು ಕಲ್ಲಿನ ವಿಗ್ರಹಕ್ಕೆ ಬಡಲಾಯಿಸಲಾಯಿತು ಎಂದು ಇತಿಹಾಸ ಸಾರುತ್ತದೆ.
ಕುದುರೆಮುಖ: ಚಿಕ್ಕಮಂಗಳೂರು ನಗರದಿಂದ 95 km ದೂರದಲ್ಲಿದೆ. ಇಲ್ಲಿ ಕುದುರೆಯ ಮುಖಕ್ಕೆ ಹೋಲುವ ಆಕಾರದ ಶಿಖರ ಇದೆ ಎಂದು ನಂಬಲಾಗುತ್ತದೆ. ಆದ್ದರಿಂದ ಈ ಸ್ಥಳಕ್ಕೆ ಕುದುರೆಮುಖ ಎಂಬ ಹೆಸರು ಬಂದಿದೆ. ವಿಶಾಲವಾಗಿ ಹಬ್ಬಿದ ಸುಂದರ ಪರ್ವತ ಶ್ರೇಣಿಗಳು , ಗುಹೆಗಳು , ಕಂದಕಗಳಿಂದ ಈ ಶಿಖರ ಕೂಡಿದೆ. ಕಿರಿದಾದ ಬೆಟ್ಟಗಳ ಕವಲು ದಾರಿಯಲ್ಲಿ ನಡೆದು ಸಾಗಿದರೆ ಪಕ್ಕದಲ್ಲಿ ಝುಳು ಝುಳು ಹರಿಯುವ ಶುದ್ಧ ನೀರಿನ ಝರಿಗಳು , ಎಲ್ಲೆಡೆ ಹಸಿರು ಹುಲ್ಲುಗಳು , ಗಿಡ ಮರಗಳು , ಚಿಲಿಪಿಲಿ ಕೂಗುವ ಪಕ್ಷಿ ಸಂಕುಲ ಸದಾ ಅದ್ಭುತ ದೃಶ್ಯವನ್ನು ಸೃಷ್ಟಿಸುತ್ತದೆ. ಸಮುದ್ರ ಮಟ್ಟಕ್ಕಿಂತ 1900 ಮೀಟರ್ ಎತ್ತರವಿದೆ. ಕಬ್ಬಿಣದ ಅದಿರಿನ ನಿಕ್ಷೇಪಗಳು ಇಲ್ಲಿ ದೊರೆಯುತ್ತವೆ. ಕುದುರೆ ಮುಖ ನ್ಯಾಷನಲ್ ಪಾರ್ಕ್ ನಲ್ಲಿ 13 ಟ್ರೆಕಿಂಗ್ ಸ್ಥಳಗಳು ಇವೆ.
ಮುಳ್ಳಯ್ಯನ ಗಿರಿ: ಇದು ಕರ್ನಾಟಕದ ಅತೀ ಎತ್ತರದ ಗಿರಿ ಶಿಖರ ಇದು 6330 ಅಡಿ ಎತ್ತರವಿದ್ದು ಚಂದ್ರದ್ರೋಣ ಪರ್ವತದ ಸಾಲಿಗೆ ಸೇರಿದೆ. ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಅತೀ ಎತ್ತರದ ಪರ್ವತ ಶ್ರೇಣಿ ಎಂಬ ಹೆಗ್ಗಳಿಕೆ ಇದೆ. ಬೆಟ್ಟದ ತುದಿಯಲ್ಲಿ ಮುಳ್ಳಯ್ಯನ ದೇವಸ್ಥಾನ ಹಾಗೂ ಮಠ ಕೂಡ ಇದೆ. ಟ್ರೆಕಿಂಗ್ ಮಾಡುವವರಿಗೆ ಪ್ರಶಸ್ಥ ಸ್ಥಳ. ಒಂದು ಹಂತದವರೆಗೆ ಕಾರ್ ಬೈಕ್ ಗಳಲ್ಲಿ ಹೋಗಬಹುದು.
ಹೊರನಾಡು: ಪಶ್ಚಿಮ ಘಟ್ಟಗಳ ಅಡಿಯಲ್ಲಿ ಭದ್ರಾ ನದಿ ಹರಿಯುವ ಒಂದು ಸುಂದರ ಸ್ಥಳ. ಹೊರನಾಡು ಒಂದು ರಾಜ್ಯ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಚಿಕ್ಕಮಂಗಳೂರು ನಗರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಅನ್ನಪೂರ್ಣೇಶ್ವರಿಯ ಪುರಾತನ ಕಾಲದ ದೇವಾಲಯವಿದ್ದು ಇದನ್ನು ಇತ್ತೀಚೆಗೆ ಜೀರ್ಣೋದ್ದಾರ ಕೂಡ ಮಾಡಲಾಗಿದೆ. ಹೊರನಾಡು ಅಗಸ್ತ್ಯ ಕ್ಷೇತ್ರವೆಂದೇ ಪ್ರಸಿದ್ದಿ ಯಾಗಿದೆ. ಇಲ್ಲಿ ಅಗಸ್ತ್ಯ ಮುನಿಗಳಿಂದ ಪ್ರತಿಷ್ಠಾಪನೆಯಾಗಿರುವ ಆದಿಶಕ್ತಿ ಅನ್ನಪೂರ್ಣೇಶ್ವರಿ ಅಮ್ಮನವರ ವಿಗ್ರಹವನ್ನು ನಾವಿಲ್ಲಿ ಕಾಣಬಹುದು. ಯಾತ್ರಾರ್ಥಿಗಳಿಗೆ ಉಚಿತ ಊಟ ವಸತಿ ಸೌಲಭ್ಯವನ್ನು ದೇವಾಲಯದ ಕಡೆಯಿಂದ ಒದಗಿಸಲಾಗುತ್ತದೆ.
ದತ್ತಗಿರಿ ಅಥವಾ ಬಾಬಾಬುಡನ್ ಗಿರಿ: ಚಿಕ್ಕಮಂಗಳೂರು ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಇದು ಚಂದ್ರದ್ರೋಣ ಪರ್ವತ ಶ್ರೇಣಿಗಳಲ್ಲಿ ಕಂಡುಬರುತ್ತದೆ. ಚಿಕ್ಕಮಂಗಳೂರು ನಗರದ ಎಲ್ಲಾ ಭಾಗಗಳಿಂದಲೂ ಕಾಣಸಿಗುತ್ತದೆ. ಇದು ಪ್ರಾಚೀನ ಕಾಲದಿಂದಲೂ ಸಹ ಹೆಸರು ವಾಸಿಯಾಗಿರುವ ಪರ್ವತಶ್ರೇಣಿ. ಇಲ್ಲಿ 150 ವರ್ಷಗಳ ಹಿಂದೆ ಬಾಬಾಬುಡನ್ ಮತ್ತು ಗುರು ದತ್ತಾತ್ರೇಯ ಇದ್ದರು ಎಂದು ಹಿಂದೂಗಳು ಮತ್ತು ಮುಸ್ಲಿಮರು ನಂಬುತ್ತಾರೆ. ಹಿಂದೂ ಮತ್ತು ಮುಸ್ಲಿಂ ಇಬ್ಬರಿಗೂ ಯಾತ್ರಾಸ್ಥಳ ಕೂಡ ಆಗಿದೆ. ಬೆತ್ತ ಗಿರಿಯಲ್ಲಿ ಮೂರು ದೊಡ್ಡ ಗುಹೆಗಳಿದ್ದು ಇಲ್ಲಿ ಮೂವರು ಸಿದ್ದರ ಪ್ರತಿಮೆಗಳು ಹಾಗೂ ಗದ್ದುಗೆ ಗಳು ಇವೆ. ಇವರ ಗೌರವಾರ್ಥವಾಗಿ ಇಲ್ಲಿ ಪ್ರತಿ ವರ್ಷ ಜಾತ್ರೆಗಳು ಸಹ ನಡೆಯುತ್ತದೆ.
ಕಲ್ಹತ್ತಿಗಿರಿ: ಕೆಮ್ಮಣ್ಣುಗುಂಡಿ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಲೋಮೀಟರ್ ಒಳಗಡೆ ನಡೆದರೆ ಈ ಜಲಪಾತವನ್ನು ಕಾಣಬಹುದು. ಈ ಜಲಪಾತವು ಸುಮಾರು 300 ಅಡಿ ಎತ್ತರದಿಂದ ಹಂತಹಂತವಾಗಿ ದುಮುಕುತ್ತದೆ. ಇಲ್ಲಿನ ವಿಶೇಷತೆ ಎಂದರೆ ಎರಡು ಆನೆಗಳ ಮಧ್ಯ ಹಾಗೂ ಬ್ರಹ್ಮದೇವನ ಪಾದಗಳ ಪದ್ಯದಿಂದ ನೀರು ದುಮುಕುತ್ತದೆ.
ಕಳಸ: ಚಿಕ್ಕಮಂಗಳೂರು ನಗರದಿಂದ ಸುಮಾರು 92 ಕಿಲೋಮೀಟರ್ ದೂರದಲ್ಲಿದೆ. ಇದು ಭದ್ರಾ ನದಿ ತೀರದಲ್ಲಿರುವ ಅಂತಹ ಒಂದು ಅದ್ಭುತವಾದ ನಗರ. ಇದು ಪಶ್ಚಿಮ ಘಟ್ಟಗಳ ಎತ್ತರವಾದ ಶಿಖರ ಗಳಿಂದ ಸುತ್ತುವರೆದಿದೆ. ಇದನ್ನು ಭದ್ರಾತೀರದ ಪಂಚಾಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಕಳಸದ ಹತ್ತಿರ ಪಂಚತೀರ್ಥ ಎಂಬ ಐದು ಕೊಳಗಳಿವೆ. ಇದು ಕಾಲೇಶ್ವರ ದೇವಸ್ಥಾನಕ್ಕೆ ಪ್ರಸಿದ್ಧವಾದ ಜಾಗ. ಇದನ್ನ ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಸ್ಕಂದ ಪುರಾಣದ ಪ್ರಕಾರ ಇದನ್ನು ಅಗಸ್ತ್ಯಮುನಿ ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.
ಹೆಬ್ಬೆ ಜಲಪಾತ ಇದು ಕೆಮ್ಮಣ್ಣುಗುಂಡಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ. ಕೆಮ್ಮಣ್ಣುಗುಂಡಿಯ ಅತ್ಯಾಕರ್ಷಕ ತಾಣವಾಗಿರುವ ಈ ಜಲಪಾತವನ್ನು ಪ್ರವಾಸಿಗಳು ನೋಡಲೇಬೇಕು. ಸುಂದರ ಕಾಫಿ ತೋಟಗಳ ಹಿನ್ನೆಲೆಯಲ್ಲಿರುವ ಹೆಬ್ಬೆ ಜಲಪಾತ 161 ಮೀಟರ್ ಎತ್ತರದಿಂದ ಧುಮುಕುವ ಜಲಪಾತ ಪ್ರವಾಸಿಗರಿಗೆ ಆಕರ್ಷಣೆಯ ಎನಿಸುತ್ತದೆ. ಈ ಸ್ಥಳಕ್ಕೆ ಪ್ರವಾಸಿಗರು ನಡುಗೆಯ ಮೂಲಕ ಅಥವಾ ವಾಹನದ ಮೂಲಕವೂ ಹೋಗಬಹುದು. ಅದರೆ ಕಡಿದಾದ ದಾರಿ ಇರುವುದರಿಂದ ಚಿಕ್ಕ ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ಜಲಪಾತದ ನೀರು ಎರಡು ವಿಭಾಗಗಳಾಗಿ ಹರಿಯುವುದರಿಂದ ಒಂದಕ್ಕೆ ದೊಡ್ಡ ಹಬ್ಬ ಮತ್ತು ಇನ್ನೊಂದು ಚಿಕ್ಕ ಹೆಬ್ಬೆ ಜಲಪಾತ ಎಂದು ಕರೆಯುತ್ತಾರೆ