ಕರ್ನಾಟಕದ ಸ್ಪೆಶಲ್, ಟೇಸ್ಟಿಯಾದ ಬಿಸಿ ಬೇಳೆ ಬಾತ್ ಹೇಗೆ ಮಾಡೋದು ಅಂತ ನೋಡೋಣ. ಬಿಸಿ ಬೇಳೆ ಬಾತ್ ಮಾಡೋಕೆ ಬೇಕಾದ ಪದಾರ್ಥಗಳೇನು ಹಾಗೂ ಮನೆಯಲ್ಲೇ ಹೇಗೆ ತಯಾರಿಸೋದು ಅನ್ನೋದನ್ನ ಈ ಮೂಲಕ ತಿಳಿಯೋಣ ನಿಮಗೆ ಈ ಸ್ಪೆಷಲ್ ರೆಸಪಿ ಇಷ್ಟವಾದ್ರೆ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ಇದರ ಸದುಪಯೋಗ ಪಡೆದುಕೊಳ್ಳಲಿ.
ಸಾಮಗ್ರಿಗಳು :-ಹಸಿ ವಟಾಣಿ ಅರ್ಧ ಕಪ್, ಕ್ಯಾರೇಟ್ ಕಾಲು ಕಪ್, ಬೀನ್ಸ್ ಕಾಲು ಕಪ್, ಆಲೂಗಡ್ಡೆ ಕಾಲು ಕಪ್, ಟೊಮೇಟೋ ೪, ಅಕ್ಕಿ ಅರ್ಧ ಕಪ್, ತೊಗರಿ ಬೇಳೆ ಕಾಲು ಕಪ್, ಹೆಸರುಬೇಳೆ ಕಾಲು ಕಪ್ ,ಬಿಸಿಬೇಳೆ ಬಾತ್ ಪೌಡರ್, ಈರುಳ್ಳಿ ೨
ಮಾಡುವ ವಿಧಾನ :– ಮೊದಲು ಒಂದು ಕುಕ್ಕರ್ ಗೆ ಕಟ್ ಮಾಡಿಟ್ಟ ಎಲ್ಲಾ ತರಕಾರಿಗಳನ್ನೂ ಹಾಕಿ ಹಾಗೇ ಮಧ್ಯಮ ಗಾತ್ರದಲ್ಲಿ ಕಟ್ ಮಾಡಿದ ಟೊಮೇಟೋ ಹಾಕಬೇಕು. ನಂತರ ಅಕ್ಕಿ, ತೊಗರಿ ಬೇಳೆ, ಹೆಸರುಬೇಳೆ ಮೂರನ್ನೂ ಒಟ್ಟಿಗೇ ಸೇರಿಸಿ ತೊಳೆದು ತರಕಾರಿಗಳನ್ನ ಹಾಕಿದ ಕುಕ್ಕರ್ ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ೨ ಸ್ಪೂನ್ ಬಿಸಿ ಬೇಳೆ ಬಾತ್ ಪೌಡರ್ ಮತ್ತು ೩ಕಪ್ ನೀರು ಹಾಕಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ೨ವಿಷಲ್ ಕೂಗಿಸಬೇಕು.
ಇನ್ನೊಂದು ಕಡೆ ಒಗ್ಗರಣೆಗೆ ಒಂದು ಪ್ಯಾನ್ ನಲ್ಲಿ ೨ಟಿ ಸ್ಪೂನ್ ತುಪ್ಪ ಮತ್ತು ೨ಟಿ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಕಾದ ನಂತರ ಕಾಲು ಸ್ಪೂನ್ ಸಾಸಿವೆ ಹಾಗೇ ಕರಿಬೇವಿನ ಸೊಪ್ಪು , ೧ ಟಿ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಒಂದು ಕೆಂಪು ಮೆಣಸಿನ ಕಾಯಿ ಚೂರು ಮಾಡಿ ಹಾಕಿ, ಚಿಟಕೆ ಇಂಗು ೨ ಉದ್ದಕೆ ಕಟ್ ಮಾಡಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡು ಇಟ್ಟುಕೊಳ್ಳಬೇಕು. ಕುಕ್ಕರ್ ಪ್ರೆಶರ್ ಇಳಿದಮೇಲೆ ಅದಕ್ಕೆ ಮತ್ತೆ ೨ವರೆ ಕಪ್ ನೀರು ಹಾಕಿ ಮತ್ತೆ ೧ ಸ್ಪೂನ್ ಬಿಸಿ ಬೇಳೆ ಬಾತ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ ಒಂದೆರಡು ನಿಮಿಷ ಚೆನ್ನಾಗಿ ಕುದಿಸಿ, ಮಾಡಿಟ್ಟ ಒಗ್ಗರಣೆಯನ್ನ ಕುಕ್ಕರ್ ಗೆ ಸೇರಿಸಿ ಮಿಕ್ಸ್ ಮಾಡಿ ಕೊನೆಗೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನ ಹಾಕಿ ಮತ್ತೆ ೨/೩ ನಿಮಿಷಗಳ ಕಾಲ ಕುದಿಸಿದರೆ ಬಿಸಿ ಬಿಸಿ ಬಿಸಿಬೇಳೇ ಬಾತ್ ರೆಡೀ.